ಹಿಂಸೆಯನ್ನು ಎಂದಿಗೂ ಪ್ರಚೋದಿಸುವುದಿಲ್ಲ: ಪಿಣರಾಯಿ ವಿಜಯನ್

ಶುಕ್ರವಾರ, ಮೇ 24, 2019
26 °C
ಕಾಸರಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ

ಹಿಂಸೆಯನ್ನು ಎಂದಿಗೂ ಪ್ರಚೋದಿಸುವುದಿಲ್ಲ: ಪಿಣರಾಯಿ ವಿಜಯನ್

Published:
Updated:

ತಿರುವನಂತಪುರ: ‘ಕಾಸರಗೋಡಿನಲ್ಲಿ ನಡೆದಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯಲ್ಲಿ ಸಿಪಿಎಂ ಪಾತ್ರ ಇಲ್ಲ. ನಮ್ಮ ಪಕ್ಷ ಎಂದಿಗೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

‘ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹತ್ಯೆಯಲ್ಲಿ ಸಿಪಿಎಂ ಪಕ್ಷದ ಕಾರ್ಯಕರ್ತರು ಭಾಗಿಯಾಗಿದ್ದರೆ, ಅವರ ಬೆಂಬಲಕ್ಕೆ ಪಕ್ಷ ನಿಲ್ಲುವುದಿಲ್ಲ. ಕಾನೂನು ಕ್ರಮವಲ್ಲದೆ, ಪಕ್ಷದಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಪಕ್ಷ ಹಲವು ಸಂದರ್ಭಗಳಲ್ಲಿ ಹಿಂಸೆಯನ್ನು ಎದುರಿಸಿಕೊಂಡು ಬಂದಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಸಂಚು ರೂಪಿಸುವ ಅಗತ್ಯವಿಲ್ಲ. ಲೋಕಸಭೆ ಚುನಾವಣೆ ಸಲುವಾಗಿ ಸಿಪಿಎಂ ಯಾತ್ರೆ ಆಯೋಜಿಸುತ್ತಿದೆ. ರಾಜಕೀಯ ಜ್ಞಾನ ಇರುವ ಯಾರಾದರೂ ಈ ಸಂದರ್ಭದಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಾರೆಯೇ’ ಎಂದು ಪ್ರಶ್ನಿಸಿದರು.

ಭಾನುವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಾಸರಗೋಡಿನ ಮನೆಗೆ ವಾಪಸಾಗುತ್ತಿದ್ದ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕ್ರಿಪೇಶ್‌(24) ಮತ್ತು ಶರತ್‌ಲಾಲ್(21) ಎಂಬುವರನ್ನು ಅಪರಿಚಿತರು ಹತ್ಯೆ ಮಾಡಿದ್ದರು. ಆಡಳಿತ ಪಕ್ಷದ ನಾಯಕರ ಬೆಂಬಲದಿಂದಲೇ ಈ ಹತ್ಯೆ ನಡೆದಿದೆ ಎಂದು ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪಿಸಿವೆ.

‘ಒಂದು ವರ್ಷದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಪೊಲೀಸ್ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ, ಸಿಬಿಐ ತನಿಖೆಗೆ ವಹಿಸಬೇಕು. ಕೊಲೆಗಾರರಿಗೆ ಮಾತ್ರವಲ್ಲ, ಪಿತೂರಿ ನಡೆಸಿದವರಿಗೂ ಶಿಕ್ಷೆಯಾಗಬೇಕು’ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ  ಡೀನ್ ಕುರಿಯಕೋಸ್ ಒತ್ತಾಯಿಸಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚಿನ್ನಿತ್ತಾಲ್, ಸಮಗ್ರ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಳ್ಳುವುದಾಗಿ ರಾಜ್ಯಾಪಾಲರು ಭರವಸೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.

ಈ ನಡುವೆ, ಎರಡು ಬೈಕ್ ಮತ್ತು ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಖಂಡಿಸಿ ಯುವ ಕಾಂಗ್ರೆಸ್ ಕರೆ ನೀಡಿದ್ದ ಹರತಾಳದಿಂದ ಸೋಮವಾರ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !