ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಬೆಂಕಿ ದುರಂತ: ಪ್ರಧಾನಿ ಮೋದಿಯಿಂದ ನೆರವಿನ ಭರವಸೆ

Last Updated 10 ಜೂನ್ 2020, 11:08 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿಆಯಿಲ್‌ ಇಂಡಿಯಾ ಲಿಮಿಟೆಡ್‌ನ (ಒಐಎಲ್‌) ಅನಿಲ ಬಾವಿಯಲ್ಲಿ ಅನಿಲ ಸೋರಿಕೆಯಿಂದ ಉಂಟಾಗಿರುವ ಭಾರಿ ಬೆಂಕಿ ದುರಂತದ ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭರವಸೆ ನೀಡಿದ್ದಾರೆ.

ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್‌ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ 15 ದಿನಗಳಿಂದ ಅನಿಲ ಸೋರಿಕೆ ಆಗುತ್ತಿದೆ.

ಅನಿಲ ಬಾವಿಯಲ್ಲಿ ಸ್ಫೋಟ ಸಂಭವಿಸಿದ್ದು ಹಾಗೂ ಬೆಂಕಿಯಿಂದ ಉಂಟಾಗಿರುವ ಪರಿಸ್ಥಿತಿಯನ್ನು, ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ವಿವರಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್‌ ಅವರು, ಕೇಂದ್ರದ ನೆರವು ಕೋರಿದ್ದರು. ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಳೆದ 15 ದಿನಗಳಿಂದ ಅನಿಯಂತ್ರಿತವಾಗಿಅನಿಲ ಸೋರಿಕೆ ಆಗುತ್ತಿದೆ. ಇದರಿಂದ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಘಟನಾ ಸ್ಥಳದ 1 ಕಿ.ಮೀ ವ್ಯಾಪ್ತಿಯಲ್ಲಿರುವ ಮನೆಗಳು, ವಾಹನಗಳು, ಸಣ್ಣ ಉದ್ಯಾನಗಳು, ಅರಣ್ಯ ಪ್ರದೇಶವು ಸುಟ್ಟು ಬೂದಿಯಾಗಿವೆ. ಬೆಂಕಿ ಈವರೆಗೂ ನಿಯಂತ್ರಣಕ್ಕೆ ಬಾರದ ಕಾರಣ, ಹಾನಿಯ ಅಂದಾಜು ಮಾಡಲು ಸಾಧ್ಯವಾಗಿಲ್ಲ’ ಎಂದು ಒಐಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮನವಿ ಮೇರೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾರತೀಯ ವಾಯು ಪಡೆ, ಸೇನೆ ಕೈಜೋಡಿಸಿವೆ. ಪ್ಯಾರಾಮಿಲಿಟರಿ ಪಡೆಗಳು ಪ್ರದೇಶ ಸುತ್ತವರಿದಿವೆ. ಆದರೂ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ.

‘ಬೆಂಕಿ ಕಾಣಿಸಿಕೊಂಡ ಕೆಲ ಹೊತ್ತಿನಲ್ಲಿಯೇ ಬಾಗ್ಜನ್‌ ಹಾಗೂ ಸುತ್ತಮುತ್ತಲಿನಲ್ಲಿರುವ ಒಐಎಲ್‌ ಸಿಬ್ಬಂದಿ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಅನೇಕರಿಗೆ ಗಾಯಗಳಾಗಿವೆ. ನಮ್ಮ ವಾಹನಗಳು ಹಾನಿಗೊಳಗಾಗಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT