ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತಾರ್‌ಪುರ ಕಾರಿಡಾರ್: ಬಳಕೆಗೆ ಮುಕ್ತ, ಸಿಖ್‌ ಯಾತ್ರಿಕರಲ್ಲಿ ಸಂಭ್ರಮ

ಭಾರತದ ಗಡಿಯಲ್ಲಿ ಪ್ರಧಾನಿಯಿಂದ ಉದ್ಘಾಟನೆ
Last Updated 9 ನವೆಂಬರ್ 2019, 19:43 IST
ಅಕ್ಷರ ಗಾತ್ರ

ಗುರುದಾಸ್‌ಪುರ, ಪಂಜಾಬ್‌: ಪಂಜಾಬ್‌ನ ಡೇರಾ ಬಾಬಾ ನಾನಕ್‌ ಸ್ಮಾರಕ ಮತ್ತು ಪಾಕಿಸ್ತಾನದಲ್ಲಿರುವ ಗುರುದ್ವಾರ ದರ್ಬಾರ್‌ ಸಾಹಿಬ್‌ ನಡುವೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಕರ್ತಾರ್‌ಪುರ ಕಾರಿಡಾರ್‌ ಶನಿವಾರ ಸಾರ್ವಜನಿಕ ಸೇವೆಗೆ ಮುಕ್ತವಾಯಿತು.

500 ಯಾತ್ರಿಗಳಿದ್ದ ನಿಯೋಗದ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದ ಪ್ರಧಾನಿ ನರೇಂದ್ರ ಮೋದಿ, ಕಾರಿಡಾರ್‌ ಅನ್ನು ಉದ್ಘಾಟಿಸಿದರು. ಹಲವು ಪ್ರಮುಖರನ್ನು ಒಳಗೊಂಡ ಯಾತ್ರಿಗಳ ನಿಯೋಗ ಪಾಕ್‌ನ ಗುರುದ್ವಾರವನ್ನು ತಲುಪಿದ್ದು, ಅಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಭಾರತದ ಭಾಗದಲ್ಲಿ ಚಾಲನೆ ನೀಡಿದ ಪ್ರಧಾನಿ ಮೋದಿ, ‘ನೂತನ 4.5 ಕಿ.ಮೀ ಉದ್ದದ ಕಾರಿಡಾರ್‌ ಮತ್ತು ಸಮಗ್ರ ಚೆಕ್‌ಪೋಸ್ಟ್‌ ಕಾರ್ಯಾರಂಭ ಯಾತ್ರಿಗಳಿಗೆ ಸಂಭ್ರಮವನ್ನು ತರಲಿದೆ’ ಎಂದು ಬಣ್ಣಿಸಿದರು. ‘ಕರ್ತಾರ್‌ಪುರ ಸಾಹಿಬ್ ಕಾರಿಡಾರ್‌ ನಿರ್ಮಾಣದ ಅಗತ್ಯ, ಮಹತ್ವ ಕುರಿತು ಭಾರತೀಯರ ಭಾವನೆಗಳನ್ನು ಅರ್ಥಮಾಡಿಕೊಂಡು ಸಹಕರಿಸಿದಕ್ಕಾಗಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ಪಾಕಿಸ್ತಾನದ ನೆಲದಲ್ಲಿ ಕಾರಿಡಾರ್ ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಂಡ ಕಾರ್ಮಿಕರಿಗೂ ಅಭಿನಂದನೆ. ಭಾರತದ ಯಾತ್ರಿಗಳ ಭಾವನೆಗಳನ್ನು ಅರ್ಥಮಾಡಿಕೊಂಡು, ಗೌರವಿಸಿ, ನಿಗದಿತ ಕಾಲಮಿತಿಯಲ್ಲಿ ಕಾರಿಡಾರ್ ಅನ್ನು ನಿರ್ಮಿಸಲಾಗಿದೆ‘ ಎಂದು ಮೋದಿ ಹೇಳಿದರು.

ಕೇಸರಿ ಟರ್ಬನ್‌: ಕೇಸರಿ ಬಣ್ಣದ ಟರ್ಬನ್ ಧರಿಸಿದ್ದ ಪ್ರಧಾನಿ ಮೋದಿ ಅವರು ಇದಕ್ಕೂ ಮುನ್ನ ಸಿಖ್ಖರ ಸಮುದಾಯ ಭೋಜನಾಲಯ ‘ಲಂಗರ್‌’ನಲ್ಲಿ ಪಾಲ್ಗೊಂಡರು. ರಾಜ್ಯಪಾಲ ವಿ.ಪಿ.ಸಿಂಗ್‌ ಬದ್ನೋರೆ ಇದ್ದರು. ಯಾತ್ರಿಗಳ ತಂಡಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಮತ್ತು ಅವರ ಪತ್ನಿ ಇದ್ದರು.

‘ಸೌಹಾರ್ದ ವಾತಾವರಣಕ್ಕೂ ನಾಂದಿ ಆಗಲಿ’
ದುಬೈ: ಬಿಗುವಿನ ವಾತಾವರಣ ಇರುವ ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಲು ಸಿಖ್‌ ಸಮುದಾಯಕ್ಕೆ ಚಾರಿತ್ರಿಕ ಕರ್ತಾರ್‌ಪುರ ಕಾರಿಡಾರ್ ಅವಕಾಶ ಕಲ್ಪಿಸಲಿದೆ ಎಂದು ಇಲ್ಲಿರುವ ಸಿಖ್‌ ಸಮುದಾಯದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಮುಖಂಡ ಸುರೇಂದರ್‌ ಸಿಂಗ್‌ ಖಂಡರಿಇ ಅವರು, ‘ಕಾರಿಡಾರ್ ಚಾರಿತ್ರಿಕವಾಗಿದೆ. ಸಿಖ್‌ ಧರ್ಮಗುರು ಗುರುನಾನಕ್‌ ದೇವ್ ಕಡೆಯದಿನಗಳನ್ನು ಕಳೆದ ಕರ್ತಾರ್‌ಪುರ, ಸಿಖ್ಖರ ದೃಷ್ಟಿಯಿಂದ ಧಾರ್ಮಿಕ ಮಹತ್ವ ಹೊಂದಿದೆ’ ಎಂದರು.

ದುಬೈನಲ್ಲಿ ಇರುವ ಗುರುದ್ವಾರದ ಸಿಖ್ಖರಿಗೆ ಈ ಬೆಳವಣಿಗೆ ಕುರಿತು ಸಂತಸ ತಂದಿದೆ. ಉಭಯ ರಾಷ್ಟ್ರಗಳ ನಡುವೆ ಉಳಿರುವ ಸೌಹಾರ್ದಕ್ಕೆ ಇದೊಂದು ನಿದರ್ಶನ. ಉಭಯ ರಾಷ್ಟ್ರಗಳಲ್ಲಿ ಇರುವ ನಂಬಿಕೆಗಳನ್ನು ಎತ್ತಿಹಿಡಿದಿದೆ‘ ಎಂದರು.

ಯಾತ್ರಿಗಳ ಪ್ರವೇಶಕ್ಕೆ ಗಡಿ ಮುಕ್ತಗೊಳಿಸುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ನಿಲುವನ್ನು ಸ್ವಾಗತಿಸಿದರು. ‘ಈ ಘಟನೆ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ, ಶಾಂತ ಪರಿಸ್ಥಿತಿ ನಿರ್ಮಾಣಕ್ಕೆ ನೆರವಾಗಲಿದೆ‘ ಎಂದು ಆಶಿಸಿದರು.

ಬದ್ಧತೆಗೆ ನಿದರ್ಶನ
ಕರ್ತಾರ್‌ಪುರ (ಪಾಕಿಸ್ತಾನ):
‘ಕರ್ತಾರ್‌ಪುರ ಕಾರಿಡಾರ್‌ನ ಉದ್ಘಾಟನೆ, ಪ್ರಾದೇಶಿಕ ಹಂತದಲ್ಲಿ ಶಾಂತಿಯನ್ನು ಬಯಸುವ ಪಾಕಿಸ್ತಾನದ ಬದ್ಧತೆಗೆ ನಿದರ್ಶನ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಅವರು, ಕಾಶ್ಮೀರ ವಿಷಯ ಪ್ರಸ್ತಾಪಿಸಿ ‘ಕಾಶ್ಮೀರಿಗರಿಗೆ ನ್ಯಾಯ ಒದಗಿಸಲು ಈಗ ಹೊಸ ಸಂವಹನ ಮಾರ್ಗ ದೊರೆತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT