ಗುರುವಾರ , ಜೂಲೈ 9, 2020
23 °C

ಲಾಕ್ ಡೌನ್: ಪ್ರಧಾನಿ ನರೇಂದ್ರ ಮೋದಿ ಸರಣಿ ಸಭೆ, 2 ನೇ ಪ್ಯಾಕೇಜ್ ಘೋಷಣೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸುತ್ತಿರುವ ಕ್ಷೇತ್ರಗಳ ಪುನಶ್ಚೇತನಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಣಕಾಸು ಸಚಿವರೂ ಸೇರಿದಂತೆ ಇತರೆ ಸಚಿವರು, ಇಲಾಖಾ ಮುಖ್ಯಸ್ಥರ ಜೊತೆ ಶನಿವಾರ ಸರಣಿ ಸಭೆ ನಡೆಸಿದ್ದಾರೆ.

ಸಭೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಹಂತದ ಪರಿಹಾರ ಕ್ರಮಗಳಿಗಾಗಿ ಉತ್ತೇಜಕ ಪ್ಯಾಕೇಜ್ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಪ್ರಮುಖವಾಗಿ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ಹಣಕಾಸು ಸಚಿವಾಲಯದ ವತಿಯಿಂದ ಶುಕ್ರವಾರ ಮಾಸಿಕ ಜಿಎಸ್‌ಟಿ ಸಂಗ್ರಹ ಕುರಿತು ವಿವರ ಪ್ರಕಟಿಸಿದ್ದು ಇದರ ವಿಸ್ತೃುತ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಸಭೆಯಲ್ಲಿ ವಿವರಿಸಲಾಗಿದೆ. ಇದರ ಮುಂದುವರಿದ ಸಭೆಯನ್ನು ಹಣಕಾಸು ಸಚಿವರೊಂದಿಗೆ ನಡೆಸಿದ ಪ್ರಧಾನಿಯವರು ದೇಶದ ಆರ್ಥಿಕ ಪರಿಸ್ಥಿತಿಯನ್ನು ಈಗಿರುವ ಸಂಕಷ್ಟದಿಂದ ಪಾರು ಮಾಡಲು ಕೈಗೊಳ್ಳಬೇಕಾದ ಕ್ರಮಗಳ ವಿವರ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ, ಶುಕ್ರವಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ನಾಗರಿಕ ವಿಮಾನಯಾನ ಖಾತೆ, ಕಾರ್ಮಿಕ ಖಾತೆ, ಇಂಧನ ಸಚಿವರೊಂದಿಗೆ ಲಾಕ್‌ಡೌನ್ ಸಮಯದಲ್ಲಿ ಈ ಇಲಾಖೆಗಳ ಸ್ಥಿತಿಗತಿಗಳ ವಿವರ ಪಡೆದಿದ್ದಾರೆ. ಗುರುವಾರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟದಿಂದ ಪಾರಾಗಲು ವಿದೇಶಿ ಮತ್ತು ದೇಶೀ ಬಂಡವಾಳ ಆಕರ್ಷಿಸುವ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ.

ಲಾಕ್‌ಡೌನ್‌ನಿಂದಾಗಿ ಸಮಸ್ಯೆ ತಲೆದೋರಿದ ಪರಿಣಾಮ ಸಂಕಷ್ಟಕ್ಕೀಡಾದ ಬಡವರ್ಗದವರಿಗಾಗಿ ಸರ್ಕಾರ ಉಚಿತ ಆಹಾರ ಧಾನ್ಯ, ಉಚಿತ ಅಡುಗೆ ಅನಿಲ ವಿತರಣೆ, ಬಡ ಮಹಿಳೆಯರಿಗೆ ಮತ್ತು ವೃದ್ಧರಿಗಾಗಿ ಮಾರ್ಚ್ ತಿಂಗಳಲ್ಲಿ ಮೊದಲ ಉತ್ತೇಜಕ ಪ್ಯಾಕೇಜ್ ₹1.7ಲಕ್ಷ ಕೋಟಿ ಹಣ ಬಿಡುಗಡೆ ಮಾಡಿತ್ತು. 

ಮಾರ್ಚ್ 25 ರಿಂದ ಸರ್ಕಾರವು 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು ಮೊದಲು ವಿಧಿಸಿತ್ತು. ನಂತರ ಅದನ್ನು ಮೇ 3 ರವರೆಗೆ ವಿಸ್ತರಿಸಿತ್ತು. ಈಗ ಮೇ.17ರವರೆಗೆ ಲಾಕ್ ಡೌನ್ ಮುಂದುವರಿಸಲಾಗಿದೆ. ಲಾಕ್‌ಡೌನ್‌‌ನಿಂದಾಗಿ ದೇಶದಲ್ಲಿ ಎಲ್ಲಾ ವ್ಯವಹಾರ ಸ್ಥಗಿತಗೊಳಿಸಿತ್ತು. ವಿಮಾನಯಾನ ಮತ್ತು ರೈಲು ಪ್ರಯಾಣವನ್ನು ನಿಲ್ಲಿಸಿದ್ದಲ್ಲದೆ, ಜನ ಸಂಚಾರ, ಸರಕುಗಳ ಸಾಗಾಟವನ್ನು ನಿರ್ಬಂಧಿಸಿತು. ಮೇ 4 ರಿಂದ ಹಸಿರು ಮತ್ತು ಕಿತ್ತಳೆ ಜಿಲ್ಲೆಗಳಿಗೆ ಕೈಗಾರಿಕೆಗಳನ್ನು ತೆರೆಯುವುದು ಸೇರಿದಂತೆ ಕೆಲವು ನಿರ್ಬಂಧಗಳನ್ನು ಸರಾಗಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ, ಅವುಗಳು ಕಡಿಮೆ ಅಥವಾ ಕಡಿಮೆ ಸಂಖ್ಯೆಯ ಪ್ರಕರಣಗಳನ್ನು ಹೊಂದಿವೆ.

ನಿಗದಿತ ಜಿಲ್ಲೆಗಳಲ್ಲಿ ನಿರ್ಬಂಧವನ್ನು ಸಡಿಲಗೊಳಿಸುವ ಸ್ಥಳೀಯ ಆಡಳಿತದ ಕಟ್ಟುನಿಟ್ಟಿನ ಲಾಕ್ ಡೌನ್ ಮೇ 17 ರವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು