ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ ತಡೆಗೆ ಮಾತಿಗಿಂತ ಕೃತಿ ಮುಖ್ಯ–ಮೋದಿ

Last Updated 23 ಸೆಪ್ಟೆಂಬರ್ 2019, 17:06 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುತ್ತಾ ಕೂರಲು ಸಮಯವಿಲ್ಲ. ಎಲ್ಲರೂ ಕಾರ್ಯತಂತ್ರವನ್ನು ಬದಲಿಸಿ ಮುನ್ನಡೆಯಬೇಕಾದ ಸಮಯ ಬಂದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರಿಗೆ ಕರೆ ನೀಡಿದರು.

ವಿಶ್ವಸಂಸ್ಥೆಯು ಇಲ್ಲಿ ಆಯೋಜಿಸಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ಭಾರತವು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ನಿಗದಿತ ಗುರಿಗಿಂತ ದ್ವಿಗುಣಗೊಳಿಸಲಿದೆ’ ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯೋತ್ಸವ ದಿನದ ಭಾಷಣದಲ್ಲಿ ಹವಾಮಾನ ಬದಲಾವಣೆಯ ಪ್ರಸ್ತಾಪ ಮಾಡಿದ್ದ ಮೋದಿ ಅವರು, ಭಾರತವು 175 ಗಿಗಾ ವಾಟ್‌ನಷ್ಟು ನವೀಕರಿಸಬಹುದಾದ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಇಟ್ಟುಕೊಂಡಿದೆ ಎಂದಿದ್ದರು. ಈ ಗುರಿಯನ್ನು ಹೆಚ್ಚಿಸಿಕೊಂಡ ಮೋದಿ, ‘2022ರ ವೇಳೆಗೆ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ತನ್ನ ಪಾಲನ್ನು ಹೆಚ್ಚಿಸಲಿದೆ. ಆ ವೇಳೆಗೆ 400 ಗಿಗಾ ವಾಟ್‌ನಷ್ಟು ಇಂಧನ ಉತ್ಪಾದನೆಗೆ ಬದ್ಧವಾಗಿದೆ’ ಎಂದರು.

ಜಾಗತಿಕ ನಾಯಕರ ಮೇಲೆ ಗ್ರೆಟಾ ಕಿಡಿ

ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಸೋಮವಾರ ಮಾತನಾಡಿದ 16 ವರ್ಷದ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಟನ್‌ಬರ್ಗ್‌ ‘ನಿಮಗೆಷ್ಟು ಧೈರ್ಯ’ ಎಂದು ಜಾಗತಿಕ ನಾಯಕರನ್ನೇ ಪ್ರಶ್ನೆ ಮಾಡಿದ್ದಾರೆ.

ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಜಾಗತಿಕ ನಾಯಕರೆಲ್ಲರೂ, ತನ್ನ ತಲೆಮಾರಿಗೆ ಮೋಸ ಮಾಡುತ್ತಿದ್ದಾರೆ ಎಂದು ಗ್ರೆಟಾ ಹರಿಹಾಯ್ದಿದ್ದಾರೆ.

‘ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಬಾಲ್ಯ, ಕನಸುಗಳನ್ನು ಚೂರಾಗಿಸಿದ್ದೀರಿ. ಜನ ಸಾಯುತ್ತಿದ್ದಾರೆ. ಇಡೀ ಪರಿಸರ ವ್ಯವಸ್ಥೆಯೇ ಹಾಳಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹ್ಯೂಸ್ಟನ್‌ನಲ್ಲಿ ಭಾನುವಾರ ಟ್ರಂಪ್‌ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ಮಾತನಾಡಿದ್ದ ಮೋದಿ, ಸೋಮವಾರ ವಿಶ್ವ ಸಂಸ್ಥೆಯಲ್ಲಿ ಈ ಭರವಸೆ ನೀಡಿದ್ದಾರೆ. ಹವಾಮಾನ ಬದಲಾವಣೆ ವಿಚಾರದಲ್ಲಿ ಈ ಎರಡು ರಾಷ್ಟ್ರಗಳು ವಿಭಿನ್ನ ನಿಲುವುಗಳನ್ನು ಹೊಂದಿವೆ. ಅಮೆರಿಕವು 2017ರ ಪ್ಯಾರಿಸ್‌ ಒಪ್ಪಂದದಿಂದ ಹೊರನಡೆದಿರುವುದಲ್ಲದೆ ಈ ನಿರ್ಧಾರಕ್ಕೆ ಭಾರತ ಮತ್ತು ಚೀನಾ ಕಾರಣ ಎಂದು ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT