ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನರ್ ರಚನೆ?

ಕೇಂದ್ರ ಸಚಿವರ ಕಾರ್ಯಕ್ಷಮತೆ ಪರಿಶೀಲಿಸಿದ ಪ್ರಧಾನಿ
Last Updated 21 ಡಿಸೆಂಬರ್ 2019, 19:55 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಸಚಿವರ ಕಾರ್ಯಕ್ಷಮತೆ ಪರಿಶೀಲನೆಯನ್ನು ಶನಿವಾರ ನಡೆಸಿದ್ದಾರೆ. ಇದು ಕೇಂದ್ರ ಸಂಪುಟ ಪುನರ್‌ ರಚನೆಯ ಸುಳಿವನ್ನು ನೀಡಿದೆ.

ಶನಿವಾರ ನಡೆದ ಮಂತ್ರಿ ಪರಿಷತ್ತಿನ ಸಭೆಯಲ್ಲಿ ಹಲವು ಸಚಿವರು ತಮ್ಮ ಸಚಿವಾಲಯದ ಯೋಜನೆಗಳು ಹಾಗೂ ಕಳೆದ ಆರು ತಿಂಗಳಲ್ಲಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು. ಮೂಲಸೌಕರ್ಯ, ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವಾಲಯಗಳ ಪ್ರಗತಿ ಪರಿಶೀಲನೆಗೆ ಸಭೆ ಒತ್ತು ನೀಡಿತ್ತು.

ಹಿಂದಿನ ಕೆಲವು ಸಚಿವ ಸಂಪುಟ ಸಭೆಗಳಲ್ಲೂ ಪ್ರಧಾನಿ ಅವರು ಹಲವು ಸಚಿವರ ಸಾಧನೆಯ ಪರಾಮರ್ಶೆ ನಡೆಸಿದ್ದರು.

ಮಹಾತ್ವಾಕಾಂಕ್ಷಿ ಯೋಜನೆಗಳಾದ ಎಲ್ಲರಿಗೂ ಮನೆ, ಜಲಜೀವನ್ ಅಭಿಯಾನ ಮತ್ತು ಉಜ್ವಲ ಯೋಜನೆಗಳ ಪ್ರಗತಿಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಪರಿಶೀಲನೆಗೆ ಒಳಪಡಿಸಲಿದೆ.

ಮೇ ತಿಂಗಳಲ್ಲಿ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಸಂಪುಟ ರಚಿಸಿದಾಗ, ಹಿಂದಿನ ಸರ್ಕಾರದಲ್ಲಿದ್ದ 37 ಸಚಿವರನ್ನು ಕೈಬಿಡಲಾಗಿತ್ತು. ಸದ್ಯದಲ್ಲೇ ಸಂಪುಟ ಪುನರ್ ರಚನೆ ನಡೆಯಲಿದೆ ಎನ್ನಲಾಗಿದ್ದು, ಕೆಲವರಿಗೆ ಸರ್ಕಾರದಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ. ಇನ್ನೂ ಕೆಲವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡುವ ನಿರೀಕ್ಷೆಯಿದೆ.

ಹಿರಿಯ ಮುಖಂಡರ ಬದಲಾವಣೆ ಹಾಗೂ ಕೆಲವು ಹುದ್ದೆಗಳು ಖಾಲಿರುವ ಕಾರಣ ಬಿಜೆಪಿ ಸಂಸದೀಯ ಮಂಡಳಿಯನ್ನೂ ಪುನರ್ ರಚಿಸಲಾಗುತ್ತಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಾಮ್ ಮಾಧವ್, ಭೂಪೇಂದ್ರ ಯಾದವ್ ಮತ್ತು ಮುರಳೀಧರ ರಾವ್ ಅವರು ಸಂಪುಟ ಅಥವಾ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಮೋದಿ ನೇತೃತ್ವದಲ್ಲಿ ಎರಡನೇ ಬಾರಿ ಅಧಿಕ್ಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ತನ್ನ ಕಾರ್ಯಸೂಚಿಯಲ್ಲಿದ್ದ ಪ್ರಮುಖ ಭರವಸೆಗಳನ್ನು ಈಡೇರಿಸಿದೆ. ಆದರೆ ಮೊದಲ ಅವಧಿಯಲ್ಲಿ ‘ಅಭಿವೃದ್ಧಿಯೇ ಮೂಲಮಂತ್ರ’ ಎಂದು ಹೇಳಿದ್ದ ಸರ್ಕಾರ, ಈ ಬಾರಿ ಅದರಿಂದ ದೂರ ಸರಿದಿದೆಯೇ ಎಂಬ ಭಾವನೆ ದಟ್ಟವಾಗುತ್ತಿರುವುದು ಬಿಜೆಪಿಯ ಚಿಂತೆಗೆ ಕಾರಣವಾಗಿದೆ.

ಈ ಬಾರಿ ಜಲ ಸಂರಕ್ಷಣೆ, ಪ್ಲಾಸ್ಟಿಕ್ ಹಾಗೂ ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಎರಡು ಪ್ರಮುಖ ಘೋಷಣೆಗಳನ್ನು ಸರ್ಕಾರ ಮಾಡಿತ್ತು. ರೈತರಿಗೆ ₹6 ಸಾವಿರ ನೀಡುವ ಎಂ ಕಿಸಾನ್ ಯೋಜನೆ ಹಾಗೂ ಅಸಂಘಟಿತ ವಲಯದ ಜನರಿಗೆ ₹3 ಸಾವಿರ ಪಿಂಚಣಿ ನೀಡುವ ಯೋಜನೆಗಳುಜಾರಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT