ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂಸಿ ಬ್ಯಾಂಕ್ ಹಗರಣ: ಮಾಜಿ ನಿರ್ದೇಶಕರ ಬಂಧನ ಅವಧಿ ವಿಸ್ತರಣೆ

Last Updated 22 ಅಕ್ಟೋಬರ್ 2019, 10:39 IST
ಅಕ್ಷರ ಗಾತ್ರ

ಮುಂಬೈ: ಪಂಜಾಬ್ ಅಂಡ್ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿ ಪೊಲೀಸ್ ವಶದಲ್ಲಿರುವ ಬ್ಯಾಂಕ್ ಮಾಜಿ ನಿರ್ದೇಶಕ ಸುರ್ಜೀತ್ ಸಿಂಗ್ ಅರೋರಾ ಅವರ ಬಂಧನ ಅವಧಿಯನ್ನು ಅಕ್ಟೋಬರ್ 24 ವರೆಗೆ ವಿಸ್ತರಿಸಿ ಮುಂಬೈ ನ್ಯಾಯಾಲಯ ಆದೇಶ ನೀಡಿದೆ.

₹4,355 ಕೋಟಿ ಹಗರಣದ ಆರೋಪದಲ್ಲಿ ಮುಂಬೈ ಪೊಲೀಸರ ಆರ್ಥಿಕ ಅಪರಾಧ ದಳ ಕಳೆದ ವಾರ ಅರೋರಾ ಅವರನ್ನು ಬಂಧಿಸಿತ್ತು.ಮಂಗಳವಾರ ನ್ಯಾಯಾಲಯಕ್ಕೆ ಅರೋರಾ ಅವರನ್ನು ಹಾಜರುಪಡಿಸಿದ್ದು, ಬಂಧನ ಅವಧಿಯನ್ನು ಗುರುವಾರದವರೆಗೆ ವಿಸ್ತರಿಸಿ ಮೆಟ್ರೊಪೊಲಿಟನ್ ಮೆಜಿಸ್ಟ್ರೇಟ್ ಎಸ್.ಜಿ.ಶೇಖ್ ಅದೇಶ ನೀಡಿದ್ದಾರೆ.ಈ ಪ್ರಕರಣದಲ್ಲಿ ಬಂಧಿತರಾದ 5ನೇ ವ್ಯಕ್ತಿಯಾಗಿದ್ದಾರೆ ಅರೋರಾ.

ಈ ಹಿಂದೆ ಆರ್ಥಿಕ ಅಪರಾಧ ದಳವು ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್, ಮಾಜಿ ಅಧ್ಯಕ್ಷ ವಾರ್ಯಮ್ ಸಿಂಗ್, ಎಚ್‌ಡಿಐಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ವಧವನ್ ಮತ್ತು ಅವರ ಪುತ್ರ ಸಾರಂಗ್ ವಧವನ್ ಅವರನ್ನು ಬಂಧಿಸಿತ್ತು.

ರಾಕೇಶ್ ವಧವನ್ ಮತ್ತು ಸಾರಂಗ್ ವಧವನ್ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿದ್ದು, ಅವರ ಬಂಧನ ಅವಧಿಯವನ್ನು ಅಕ್ಟೋಬರ್ 24ರ ವರೆಗೆ ವಿಸ್ತರಣೆ ಮಾಡಿ ಮುಂಬೈ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಗ್ರಾಹಕರಿಂದ ಪ್ರತಿಭಟನೆ
ಪಿಎಂಸಿ ಗ್ರಾಹಕರು ಮಂಗಳವಾರ ಮುಂಬೈಯ ಆಜಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.Black Diwali, Save Us ಮತ್ತು ಮುಗ್ದ ಜನರುಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬ ಘೋಷಣೆ ಕೂಗಿ ಜನರು ಪ್ರತಿಭಟಿಸಿದ್ದಾರೆ.

ನಮ್ಮ ಹಣವನ್ನು ವಾಪಸ್ ನೀಡಿ ಎಂದು ಕಳೆದ 1 ತಿಂಗಳಿನಿಂದ 16 ಲಕ್ಷ ಕುಟುಂಬಗಳು ಸರ್ಕಾರವನ್ನು ಬೇಡುತ್ತಿವೆ, 6 ಮಂದಿ ಸಾವಿಗೀಡಾದರು, ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡರು. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.ರಾತ್ರೋರಾತ್ರಿ ಸರ್ಕಾರ ನಿರ್ಧಾರವನ್ನು ತೆಗೆದುಕೊಳ್ಳಬಹುದು.ಆರೆ ಅರಣ್ಯದಲ್ಲಿ ಮರಗಳನ್ನು ಕಡಿಯುವ ನಿರ್ಧಾರವನ್ನು ಸರ್ಕಾರ ರಾತ್ರೋರಾತ್ರಿ ತೆಗೆದುಕೊಂಡಿತ್ತು. ಆರ್‌ಬಿಐ ಅಧಿಕಾರಿಗಳು ಸರಿಯಾಗಿ ಲೆಕ್ಕಾಚಾರ ಮಾಡಿದ್ದರೆ ಈ ಹಗರಣ ನಡೆಯುತ್ತಿರಲಿಲ್ಲ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರೊಬ್ಬರು ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪಿಎಂಸಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ 73ರ ಹರೆಯದ ಮಹಿಳೆ ಹೃದಯಘಾತದಿಂದ ಸಾವು
ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌(ಪಿಎಂಸಿ) ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಕುಟುಂಬದ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. 73ರ ಹರೆಯದ ಭಾರತಿಸದಾರಂಗಣಿ ಎಂಬವರ ಮಗಳು ಮತ್ತು ಅಳಿಯ ಈ ಬ್ಯಾಂಕ್‌ನಲ್ಲಿ 2.5 ಕೋಟಿ ಠೇವಣಿ ಇರಿಸಿದ್ದರು. ಠೇವಣಿ ಇರಿಸಿದ ಹಣ ಸಿಗಲ್ಲ, ಹೀಗಿರುವಾಗ ತನ್ನ ಕುಟುಂಬದ ಕತೆ ಏನು ಎಂಬುದರ ಬಗ್ಗೆ ಭಾರತಿ ಆತಂಕಕ್ಕೊಳಗಾಗಿದ್ದು ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಅವರಿಗೆ ಯಾವುದೇ ರೋಗ ಇರಲಿಲ್ಲ.ಆದರೆ ಬ್ಯಾಂಕ್ ದೀವಾಳಿಯಾದ ವಿಷಯ ತಿಳಿದು ಚಿಂತೆಗೀಡಾಗಿದ್ದರು.ನನ್ನ ಪತ್ನಿ ಅವರ ಅಮ್ಮನೊಂದಿಗೆ ಮಾತನಾಡುತ್ತಿದ್ದರು. ಅವರು ಠೇವಣಿ ದುಡ್ಡಿನ ಬಗ್ಗೆ ಅತಿಯಾಗಿ ಚಿಂತಿಸುತ್ತಿದ್ದರು ಎಂದು ಅಳಿಯ ಚಂದನ್ ಚೊಟ್ರಾನಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಪಿಎಂಸಿ ಬ್ಯಾಂಕ್ ದೀವಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂಧೇರಿ ನಿವಾಸಿ ಸಂಜಯ್ ಗುಲಾಟಿ, ನಿವೇದಿತಾ ಬಿಜಲಾನಿ, ಮುಲುಂಡ್ ಕಾಲನಿ ನಿವಾಸಿಗಳಾದ ಮುರಳೀಧರ್ ಧರ್ರಾ ಮತ್ತು ಫಟ್ಟೋಮಲ್ ಪಂಜಾಬಿ ಕಳೆದ ಕೆಲವು ವಾರಗಳಲ್ಲಿ ಸಾವಿಗೀಡಾಗಿದ್ದರು.ಇದರಲ್ಲಿ ನಿವೇದಿತಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು, ಇನ್ನುಳಿದವರು ಹೃದಯಾಘಾತದಿಂದ ಸಾವಿಗೀಡಾಗಿದ್ದರು.

ಸಹಕಾರಿ ಬ್ಯಾಂಕ್‌ನಲ್ಲಿ ₹4,335 ಕೋಟಿ ಹಗರಣ ಬೆಳಕಿಗೆ ಬಂದ ನಂತರ, ಪ್ರತಿ ದಿನ ಕೇವಲ ₹ 1 ಸಾವಿರ ಹಣ ತೆಗೆಯಲು ರಿಸರ್ವ್‌ ಬ್ಯಾಂಕ್‌ ಅವಕಾಶ ಕಲ್ಲಿಸಿತ್ತು.ನಂತರ ಅದನ್ನು ₹40 ಸಾವಿರಕ್ಕೆ ಹೆಚ್ಚಿಸಿತ್ತು. ಆದರೆ ಬ್ಯಾಂಕ್‌ನಲ್ಲಿರಿಸಿದ್ದ ಠೇವಣಿ ವಾಪಸ್ ಸಿಗುವುದೋ ಇಲ್ಲವೋ ಎಂದು ಗ್ರಾಹಕರು ಆತಂಕದಿಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT