ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಕಾಶ್ಮೀರ ಬ್ರಾಹ್ಮಣ, ದತ್ತಾತ್ರೇಯ ಗೋತ್ರ’: ಎಂದಿದ್ದಾರಂತೆ ರಾಹುಲ್‌ ಗಾಂಧಿ

ರಾಜಸ್ಥಾನದ ಪುಷ್ಕರದ ಬ್ರಹ್ಮ ದೇವಾಲಯದ ಅರ್ಚಕರಿಂದ ಮಾಹಿತಿ
Last Updated 27 ನವೆಂಬರ್ 2018, 13:53 IST
ಅಕ್ಷರ ಗಾತ್ರ

ಅಜ್ಮೀರ್‌/ಪುಷ್ಕರ: ತಾನು ಕಾಶ್ಮೀರದ ಕೌಲ್‌ ಬ್ರಾಹ್ಮಣನಾಗಿದ್ದು, ದತ್ತಾತ್ರೇಯ ಗೋತ್ರಕ್ಕೆ ಸೇರಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರಂತೆ.

ರಾಜಸ್ಥಾನದ ಪುಷ್ಕರ ಸರೋವರ ಘಾಟ್‌ನಲ್ಲಿ ನಡೆದ ಪೂಜೆಯ ವೇಳೆ ಸ್ವತಃ ರಾಹುಲ್‌ ಗಾಂಧಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾಗಿ ಪುಷ್ಕರದ ಪುರಾತನ ಬ್ರಹ್ಮ ದೇವಾಲಯದ ಅರ್ಚಕರಾದ ದೀನಾನಾಥ್‌ ಕೌಲ್‌ ಮತ್ತು ರಾಜನಾಥ್‌ ಕೌಲ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೂಜೆಯ ವೇಳೆ ರಾಹುಲ್‌ ತಮ್ಮದು ‘ಕೌಲ್‌ ದತ್ತಾತ್ರೇಯ ಗೋತ್ರ’ ಎಂದು ತಿಳಿಸಿದರು. ದೇವಸ್ಥಾನದ ದಾಖಲೆ ಪುಸ್ತಕ (ಪೋಥಿ) ಮತ್ತು ನೆಹರು ಕುಟುಂಬದ ವಂಶವೃಕ್ಷದ ದಾಖಲೆ ಪರೀಕ್ಷಿಸಿದಾಗ ಅವರು ಹೇಳಿದ್ದು ಸರಿಯಾಗಿತ್ತು ಎಂದು ಅರ್ಚಕರು ತಿಳಿಸಿದ್ದಾರೆ.

‘ನಾನೊಬ್ಬ ಅಪ್ಪಟ ಶಿವಭಕ್ತ. ಜನಿವಾರಧಾರಿ ಬ್ರಾಹ್ಮಣ’ ಎಂದು ರಾಹುಲ್‌ ಗಾಂಧಿ ಈ ಹಿಂದೆ ಹೇಳಿಕೊಂಡಿದ್ದರು. ‘ಹಾಗಾದರೆ ನಿಮ್ಮ ಕುಲ, ಗೋತ್ರ ಯಾವುದೆಂದು ಬಹಿರಂಗ ಪಡಿಸಿ’ ಎಂದು ಬಿಜೆಪಿ ಸವಾಲು ಹಾಕಿತ್ತು.

‘ದತ್ತಾತ್ರೇಯ ಎಂದರೆ ಕೌಲ್‌ಗಳು. ಕೌಲ್‌ಗಳೆಂದರೆ ಕಾಶ್ಮೀರಿ ಪಂಡಿತರು. ಬಹುತೇಕ ಕಾಶ್ಮೀರಿ ಪಂಡಿತರು ತಮ್ಮ ಹೆಸರಿನ ಮುಂದೆ ’ಕೌಲ್‌’ ಎಂಬ ಅಡ್ಡ ಹೆಸರು ಸೇರಿಸಿಕೊಳ್ಳುವುದು ಸಾಮಾನ್ಯ’ ಎಂದು ಅರ್ಚಕರು ತಿಳಿಸಿದ್ದಾರೆ.

‘ವಂದೇ ಮಾತರಂ...ಭಾರತ ಮತ್ತು ವಿಶ್ವದಲ್ಲಿ ಶಾಂತಿ ನೆಲೆಸಲಿ’ ಎಂದು ರಾಹುಲ್‌ ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ಹಿಂದಿಯಲ್ಲಿ ಬರೆದಿದ್ದಾರೆ.

ಮೋತಿಲಾಲ್‌ ನೆಹರು, ಜವಾಹರ ಲಾಲ್‌ ನೆಹರು, ರಾಜೀವ್‌ ಗಾಂಧಿ, ಸಂಜಯ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ಮನೇಕಾ ಗಾಂಧಿ ಅವರು ಪುಷ್ಕರದ ಬ್ರಹ್ಮ ದೇವಸ್ಥಾನಕ್ಕೆ ಭೇಟಿ ನೀಡಿರುವುದು ದೇವಸ್ಥಾನದ ಸಂದರ್ಶಕರ ಪುಸ್ತಕದಲ್ಲಿ ನಮೂದಾಗಿದೆ. ಹತ್ಯೆಯಾಗುವ ಮೂರು ವಾರ ಮೊದಲು ರಾಜೀವ್‌ ಗಾಂಧಿ ಇಲ್ಲಿಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT