ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಂತ್ರ ದಿನವೂ ಸಿಎಎ ವಿರೋಧಿ ಕಿಚ್ಚು

ಗಣರಾಜ್ಯೋತ್ಸವ ದಿನದಂದೂ ರಾಜಕೀಯ ಮಾತನಾಡುವುದು ಕೆಟ್ಟ ಪದ್ಧತಿ: ಸಚಿವ ಸುರೇಶ್‌ ಕುಮಾರ್‌ ಆಕ್ಷೇಪ
Last Updated 26 ಜನವರಿ 2020, 19:47 IST
ಅಕ್ಷರ ಗಾತ್ರ

ಚಾಮರಾಜನಗರ: ಇಸ್ಲಾಹುಲ್‌ ಮುಸ್ಲಿಮೀನ್‌ ಸಮಿತಿಯು ಭಾನುವಾರ ನಗರದ ಅಹಲೇ ಹದೀಸ್‌ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲೂ ಪೌರತ್ವ ಕಾಯ್ದೆ ವಿರುದ್ಧ ಧ್ವನಿ ಮೊಳಗಿತು.

ಧ್ವಜಾರೋಹಣದ ನಂತರ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ರಾಜ್ಯ ವಕ್ತಾರ ಆರ್‌.ಧ್ರುವನಾರಾಯಣ, ವಾಟಾಳ್‌ ನಾಗರಾಜ್‌, ವಿಚಾರವಾದಿ ಶಿವಸುಂದರ್‌ ಸೇರಿದಂತೆ ಹಲವರು ಭಾಗವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

‘ಪ್ರತಿ ವರ್ಷ ವಿವಿಧ ಮಸೀದಿ, ಮದರಸಾಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಗುತಿತ್ತು. ಸದ್ಯದ ದೇಶದ ಪರಿಸ್ಥಿತಿ ಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಒಗ್ಗಟ್ಟಾಗಿ ಗಣರಾಜ್ಯೋತ್ಸವ ಆಚರಿಸುವ ತೀರ್ಮಾನ ತೆಗೆದುಕೊಂಡೆವು’ ಎಂದು ಆಯೋಜಕರು ಹೇಳಿದರು.

ಕೆಟ್ಟ ಪದ್ಧತಿ: ಈ ಕಾರ್ಯಕ್ರಮದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಇದೊಂದು ಕೆಟ್ಟ ಪದ್ಧತಿ. ಗಣರಾಜೋತ್ಸವ ದಿನದಂದು ರಾಜ ಕೀಯವನ್ನೇ ಮಾತನಾಡಬಾರದು. ಮುಂದೊಂದು ದಿನ ಬೇರೆ ಸಮಸ್ಯೆಗಳನ್ನು ಹುಟ್ಟು ಹಾಕಲಿದೆ. ಪ್ರತ್ಯೇಕತಾ ಮನೋಭಾವ ಸರಿಯಲ್ಲ.ಮಾಜಿ ಸಂಸದ ಧ್ರುವನಾರಾಯಣ ಮತ್ತು ಮಾಜಿ ಶಾಸಕ ವಾಟಾಳ್ ನಾಗರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅವರಿಂದ ಇಂಥ ನಡವಳಿಕೆ ನಿರೀಕ್ಷೆ ಮಾಡಿರಲಿಲ್ಲ’ ಎಂದರು.

ಶಾಹೀನ್‌ ಶಿಕ್ಷಣ ಸಂಸ್ಥೆ ವಿರುದ್ಧ ದೂರು ದಾಖಲು

ಬೀದರ್: ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ವಿರುದ್ಧ ಮಕ್ಕಳಿಂದ ನಾಟಕವಾಡಿಸಿದ ಆರೋಪದ ಮೇಲೆ ಶಾಹೀನ್‌ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ನಾಟಕದ ದೃಶ್ಯವನ್ನು ಫೇಸ್‌ಬುಕ್‌ನಲ್ಲಿ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಭಾನುವಾರ ನಗರದ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸಿದ ಆರೋಪದ ಮೇಲೆ ಶಾಹೀನ್‌ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಫೇಸ್‌ಬುಕ್‌ಗೆ ಪೋಸ್ಟ್‌ ಮಾಡಿದ ಮಹಮ್ಮದ್‌ ಯುಸೂಫ್ ರಹೀಂ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಿಲೇಶ ರಕ್ಷಾಳ್‌ ದೂರು ದಾಖಲಿಸಿದ್ದಾರೆ.

‘ಸಿಎಎ, ಎನ್‌ಪಿಆರ್ ಹಾಗೂ ಎನ್‌ಆರ್‌ಸಿ ಜಾರಿಗೆ ಬಂದರೆ ಮುಸ್ಲಿಮರು ದೇಶ ಬಿಟ್ಟು ಹೋಗಬೇಕಾಗುತ್ತದೆ ಎನ್ನುವ ಹೇಳಿಕೆ ಜನವರಿ 21ರಂದು ಮಧ್ಯಾಹ್ನ 3ಕ್ಕೆ ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಈ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಲಾಗಿದೆ’ ಎಂದು ದೂರಿನಲ್ಲಿ ಬರೆಯಲಾಗಿದೆ.

ಮಾಹಿತಿ ಇಲ್ಲ: ‘ಹತ್ತು ದಿನಗಳಿಂದ ಬೀದರ್‌ನಲ್ಲಿ ಇಲ್ಲ. ಶಿಕ್ಷಣ ಸಂಸ್ಥೆಯ ಕಾರ್ಯ ನಿಮಿತ್ತ ದೆಹಲಿಗೆ ಬಂದಿರುವೆ. ಶಾಲೆಯಲ್ಲಿ ಮಕ್ಕಳಿಂದ ನಾಟಕವಾಡಿಸಿದ ಹಾಗೂ ನಮ್ಮ ಸಂಸ್ಥೆಯ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ವೇಳೆ ನಮ್ಮ ಸಂಸ್ಥೆಯ ಸಿಬ್ಬಂದಿಯಿಂದ ತಪ್ಪು ನಡೆದಿದ್ದರೆ, ಮುಲ್ಲಾಜಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಖದೀರ್‌ ತಿಳಿಸಿದ್ದಾರೆ.

ಪದ್ಯ ಓದಿದಕ್ಕೆ ಪ್ರಕರಣ ದಾಖಲು: ಖಂಡನೆ

ಬೆಂಗಳೂರು: ಅನೆಗುಂದಿ ಉತ್ಸವದ ಕವಿಗೋಷ್ಠಿಯಲ್ಲಿ ಕೊಪ್ಪಳದ ಸಿರಾಜ್ ಬಿಸ್ರಳ್ಳಿ ಅವರು ‘ನಿನ್ನ ದಾಖಲೆ ಯಾವಾಗ ನೀಡುತ್ತೀ?’ ಎನ್ನುವ ಪದ್ಯ ಓದಿದ್ದಾರೆ. ಈ ಪದ್ಯ ದೇಶವಿರೋಧಿಯಾಗಿದೆ ಎಂಬ ಕಾರಣ ನೀಡಿ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದನ್ನು ಸಾಹಿತಿಗಳು, ಕಲಾವಿದರು, ಚಿಂತಕರು ಖಂಡಿಸಿದ್ದಾರೆ.

‘ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ವಿರೋಧಿಸಿ ಬಿಜೆಪಿ ಕೊಪ್ಪಳ ನಗರ ಘಟಕವು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ನೀಡಿದೆ. ಕೇಂದ್ರ ಸರ್ಕಾರ, ಪ್ರಧಾನಿ, ಸ್ವಾತಂತ್ರ್ಯ ಹೋರಾಟಗಾರ, ಹಿಂದೂ ಧರ್ಮ ಅವಮಾನಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಆಗ್ರಹಿಸಿತ್ತು.

‘ದೂರಿನ ಅನ್ವಯ ಸಿರಾಜ್ ಅವರಿಗೆ ನೋಟಿಸ್ ಜಾರಿಮಾಡಲಾಗಿದೆ. ಪ್ರತಿಕ್ರಿಯೆ ನೀಡುವ ಮೊದಲೇ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದಿದ್ದಾರೆ.

ದೂರನ್ನು ಕೈಬಿಡಬೇಕು ಎಂಬ ಪತ್ರಕ್ಕೆ ವಿಜಯಮ್ಮ, ವಸುಂಧರಾ ಭೂಪತಿ, ಕೆ.ಶರೀಫಾ, ಎಂ.ಎಸ್.ಆಶಾದೇವಿ, ಎಸ್.ಜಿ.ಸಿದ್ಧರಾಮಯ್ಯ, ಪುರುಷೋತ್ತಮ ಬಿಳಿಮಲೆ ಇತರರು ಒಪ್ಪಿಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಗೋಲಿಬಾರ್‌ ಸ್ಥಳದಲ್ಲೇ ಗಣರಾಜ್ಯೋತ್ಸವ

ಮಂಗಳೂರು: ಡಿಸೆಂಬರ್ 19ರಂದು ನಗರದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆಗೆ ಯತ್ನಿಸಿದ ವೇಳೆ ಗಲಭೆ ನಡೆದು ಪೊಲೀಸ್‌ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದ ಸ್ಥಳದಲ್ಲೇ ಸಾಮಾಜಿಕ ಹೋರಾಟಗಾರರು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಭಾನುವಾರ ಗಣರಾಜ್ಯೋತ್ಸವ ಆಚರಿಸಲಾಯಿತು.

ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಕಂದಕ್‌ ನಿವಾಸಿ ಅಬ್ದುಲ್‌ ಜಲೀಲ್‌ ಮೃತಪಟ್ಟಿದ್ದ ಸ್ಥಳದಲ್ಲೇ ತಾತ್ಕಾಲಿಕ ಧ್ವಜಸ್ತಂಭ ನೆಟ್ಟ ಸಾರ್ವಜನಿಕರು, ಅಲ್ಲೇ ಗಣರಾಜ್ಯೋತ್ಸವ ಆಚರಿಸಿದರು. ಮೃತ ಜಲೀಲ್‌ ಅವರ ಮಗಳು ಶಿಫಾನಿ ಮತ್ತು ಮಗ ಝಮೀಲ್‌ ಧ್ವಜಾರೋಹಣ ನೆರವೇರಿಸಿದರು. ನಂತರ ಶಿಫಾನಿ ಸಂವಿಧಾನದ ಪೀಠಿಕೆಯನ್ನು ಓದಿದರು.

ಬಳಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ‘ಇದು ಸಂವಿಧಾನದ ಕಗ್ಗೊಲೆ ನಡೆದ ಸ್ಥಳ. ಸಾಂವಿಧಾನಿಕ ಗಣರಾಜ್ಯವನ್ನು ಮರಳಿ ಪಡೆಯುವ ಉದ್ದೇಶದಿಂದ ಇಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದೇವೆ. ಗೋಲಿಬಾರ್‌ನಲ್ಲಿ ಮೃತಪಟ್ಟ ಅಬ್ದುಲ್‌ ಜಲೀಲ್‌ ಮತ್ತು ನೌಶೀನ್‌ ಕುದ್ರೋಳಿ ಅವರ ಕುಟುಂಬಗಳಿಗೆ ನ್ಯಾಯ ದೊರಕುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT