ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಗಿರಿ ಏರಿದ ಮಹಿಳೆಯರಿಗೆ ಅಡ್ಡಿ

ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾದ ಶಬರಿಮಲೆ l ಪ್ರವೇಶಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
Last Updated 16 ಜನವರಿ 2019, 20:14 IST
ಅಕ್ಷರ ಗಾತ್ರ

ತಿರುವನಂತಪುರ: ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪೂಜೆ ಭಾನುವಾರ (ಜನವರಿ 20) ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಶಬರಿಗಿರಿ ಮತ್ತೆ ನಾಟಕೀಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ದೇವಸ್ಥಾನಕ್ಕೆ ಹೋಗಲು ಬುಧವಾರ ಬೆಟ್ಟ ಹತ್ತಿದ್ದ ಇಬ್ಬರು ಮಹಿಳೆಯರನ್ನು ಭಕ್ತರು ತೀವ್ರ ಪ್ರತಿರೋಧ ಒಡ್ಡಿ ಮರಳಿ ಕಳಿಸಿದರು.

ಕಣ್ಣೂರು ಜಿಲ್ಲೆಯ ರೇಷ್ಮಾ ನಿಶಾಂತ್‌ ಮತ್ತು ಶಾನಿಲಾ ಅವರು ಬೆಳಗಿನ ಜಾವ ದೇವಸ್ಥಾನಕ್ಕೆ ತೆರಳಲು ಬೆಟ್ಟ ಏರುತ್ತಿದ್ದರು. ನೀಲಿಮಾಲಾ ಎಂಬಲ್ಲಿ ಇವರಿಬ್ಬರನ್ನೂ ಭಕ್ತರು ತಡೆದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಮಹಿಳೆಯರನ್ನು ಪಂಪಾಕ್ಕೆ ಮರಳಿ ಕರೆತರಲಾಯಿತು. ನಂತರ ಬೆಳಿಗ್ಗೆ 7ಕ್ಕೆ ಇರುಮೆಲಿಗೆ ಅವರನ್ನು ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

‘ನಮಗೆ ರಕ್ಷಣೆ ಒದಗಿಸುವಂತೆ ಪೊಲೀಸರನ್ನು ಇಲ್ಲಿಗೆ ಬರುವ ಮುಂಚೆಯೇ ಕೇಳಿಕೊಂಡಿದ್ದೆವು’ ಎಂದು ರೇಷ್ಮಾ ನಿಶಾಂತ್‌ ಹೇಳಿದ್ದಾರೆ. ಪುರುಷರ ಗುಂಪಿನೊಟ್ಟಿಗೆ ಈ ಮಹಿಳೆಯರು ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸ್‌ ವಶದಲ್ಲಿರುವ ಈ ಮಹಿಳೆಯರು, ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಲೇಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ ಎಂದು ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ಈವರೆಗೆ ದೇವಸ್ಥಾನವನ್ನು ಮೂವರು ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ಕೆ.ಸುರೇಂದ್ರನ್‌, ‘ವ್ರತ ಕೈಗೊಂಡಿರುವ ಎಲ್ಲ ಮಹಿಳೆಯರು ದೇವಸ್ಥಾನ ಪ್ರವೇಶಿಸಬಹುದು. ಆದರೆ, ಭಕ್ತರು ಅನಾಗರಿಕರಂತೆ ವರ್ತಿಸುತ್ತಿದ್ದಾರೆ. ಶಬರಿಮಲೆಯಲ್ಲಿ ಗೂಂಡಾಗಿರಿ ನಡೆಯುತ್ತಿದೆ’ ಎಂದು ಆಪಾದಿಸಿದರು.

ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ಕೇರಳದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ತೀರ್ಪಿನ ನಂತರ ಮೊದಲ ಬಾರಿ ಮಂಡಲ ಪೂಜೆಗಾಗಿ 2018ರ ನವೆಂಬರ್‌ 17 ರಂದು ದೇವಸ್ಥಾನದ ಬಾಗಿಲು ತೆರೆದಾಗ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಹಿಂದೂ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT