ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೇಲ್‌ ತೀರ್ಪು ಮರುಪ‍ರಿಶೀಲನೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

Last Updated 21 ಫೆಬ್ರುವರಿ 2019, 20:12 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದ ಬಗ್ಗೆ ತನಿಖೆ ಅಗತ್ಯ ಇಲ್ಲ ಎಂದು ಕಳೆದ ಡಿ.14ರಂದು ನೀಡಿದ್ದ ತೀರ್ಪಿನ ಮರುಪರಿಶೀಲನಾ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ರಫೇಲ್‌ ತೀರ್ಪಿಗೆ ಸಂಬಂಧಿಸಿ ನಾಲ್ಕು ಅರ್ಜಿಗಳು ಸಲ್ಲಿಕೆ ಆಗಿವೆ. ಅವುಗಳ ಪೈಕಿ ಒಂದು ಅರ್ಜಿಯಲ್ಲಿಯೇ ಲೋಪಗಳು ಇರುವ ಕಾರಣ ಅದು ರಿಜಿಸ್ಟ್ರಿಯಲ್ಲಿಯೇ ಉಳಿದಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ ತಿಳಿಸಿದೆ.

‘ಈ ಅರ್ಜಿಗಳ ವಿಚಾರಣೆಗಾಗಿ ಈಗ ಇರುವ ನ್ಯಾಯಪೀಠಗಳಲ್ಲಿನ ನ್ಯಾಯಮೂರ್ತಿಗಳ ಸಂಯೋಜನೆ ಬದಲಾಯಿಸಬೇಕಾಗುತ್ತದೆ. ಅದು ಬಹಳ ಕಷ್ಟ. ಈ ಬಗ್ಗೆ ಏನಾದರೂ ಮಾಡಲಾಗುವುದು’ ಎಂದು ಪೀಠ ಹೇಳಿದೆ.

ರಫೇಲ್‌ ತೀರ್ಪು ಮರುಪರಿಶೀಲನಾ ಅರ್ಜಿಗಳ ತುರ್ತು ವಿಚಾರಣೆ ನಡೆಸಬೇಕು ಎಂದು ವಕೀಲ ಪ್ರಶಾಂತ್‌ ಭೂಷಣ್‌ ಕೋರಿದ್ದರು.

ಎಎಪಿ ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌ ಅವರು ಸಲ್ಲಿಸಿದ ಒಂದು ಅರ್ಜಿ ಮಾತ್ರ ದೋಷಪೂರಿತವಾಗಿದೆ. ಉಳಿದ ಅರ್ಜಿಗಳಲ್ಲಿ ಯಾವುದೇ ಲೋಪ ಇಲ್ಲ. ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಕೆಲವು ಅಧಿಕಾರಿಗಳ ವಿರುದ್ಧ ಪ್ರತ್ಯೇಕ ದೂರು ಸಲ್ಲಿಕೆಯಾಗಿದೆ ಎಂದು ಪ್ರಶಾಂತ್‌ ಭೂಷಣ್‌ ಹೇಳಿದರು.

ರಕ್ಷಣಾ ಸಚಿವಾಲಯ ನಡೆಸುತ್ತಿದ್ದ ಮಾತುಕತೆ ನಿರ್ಲಕ್ಷಿಸಿ ಪ್ರಧಾನಿ ಕಾರ್ಯಾಲಯ ರಫೇಲ್‌ ಯುದ್ಧ ವಿಮಾನ ತಯಾರಿಸುವ ಡಾಸೋ ಕಂಪನಿ ಜತೆಗೆ ಸಮಾನಾಂತರ ಮಾತುಕತೆ ನಡೆಸಿತ್ತು ಎಂಬುದು ಮಾಧ್ಯಮ ವರದಿಗಳಿಂದ ಬಹಿರಂಗವಾಗಿದೆ ಎಂಬ ವಿಚಾರವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ, ಪ್ರಶಾಂತ್‌ ಭೂಷಣ್‌ ಹಾಗೂ ಇತರರು ರಫೇಲ್‌ ಒಪ್ಪಂದದ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕಳೆದ ಡಿಸೆಂಬರ್‌ 14ರಂದು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ರಫೇಲ್‌ ಯುದ್ಧ ವಿಮಾನ ಖರೀದಿಯ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಶಂಕಿಸಲು ಯಾವುದೇ ಕಾರಣ ಇಲ್ಲ ಎಂದು ಹೇಳಿತ್ತು.

ತಪ್ಪು ಮಾಹಿತಿ ಆಧರಿಸಿ ತೀರ್ಪು?

ಭಾರಿ ಚರ್ಚೆಗೆ ಕಾರಣವಾಗಿರುವ ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯಶವಂತ ಸಿನ್ಹಾ, ಅರುಣ್‌ ಶೌರಿ ಮತ್ತು ಪ್ರಶಾಂತ್‌ಭೂಷಣ್‌ ಅವರು ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯಕ್ಕೆ ತಪ್ಪು ಸಾಕ್ಷ್ಯ ಸಲ್ಲಿಕೆ ಮತ್ತು ಸರ್ಕಾರಿ ಅಧಿಕಾರಿಗಳ ಕಾನೂನುಬದ್ಧ ಕರ್ತವ್ಯಕ್ಕೆ ವ್ಯತಿರಿಕ್ತ ವರ್ತನೆಗಾಗಿ ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅರ್ಜಿಯಲ್ಲಿ ಕೋರಲಾಗಿದೆ.

ನ್ಯಾಯಾಲಯದ ತೀರ್ಪು ಪ್ರಕಟವಾದ ಬಳಿಕ ರಫೇಲ್‌ ಖರೀದಿಗೆ ಸಂಬಂಧಿಸಿದ ಹಲವು ವಿಚಾರಗಳು ಬಹಿರಂಗವಾಗಿವೆ. ನ್ಯಾಯಾಲಯಕ್ಕೆ ತಪ್ಪು ಮಾಹಿತಿ ಸಲ್ಲಿಕೆಯಾಗಿದೆ ಎಂಬುದನ್ನು ಈ ಮಾಹಿತಿಗಳು ಪುಷ್ಟೀಕರಿಸುತ್ತವೆ. ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸುಳ್ಳುಗಳು ಮತ್ತು ಕೆಲವು ಮಾಹಿತಿಯನ್ನು ಮುಚ್ಚಿಟ್ಟಿದ್ದರಿಂದ ಸುಪ್ರೀಂ ಕೋರ್ಟ್‌ ಈಗಿನ ತೀರ್ಪು ನೀಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ರಫೇಲ್‌ ಯುದ್ಧ ವಿಮಾನಗಳ ದರಗಳ ಬಗೆಗಿನ ಮಾಹಿತಿಯನ್ನು ಅರ್ಜಿದಾರರಿಗೆ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT