ಬುಧವಾರ, ಆಗಸ್ಟ್ 4, 2021
23 °C
ಕೇಂದ್ರ ಮಾಜಿ ಸಚಿವ ಯಶವಂತ ಸಿನ್ಹಾ ಮಾಧ್ಯಮ ಗೋಷ್ಠಿ

ರಫೇಲ್‌ ಹಗರಣ: ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಧಾನಿ ಮೋದಿಗೆ ಸಿನ್ಹಾ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಫ್ರಾನ್ಸ್‌ ಜೊತೆಗಿನ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಸಾವಿರಾರು ಕೋಟಿ ಮೊತ್ತ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಮಹಾಲೇಖಪಾಲರಿಂದ ‘ಫಾರೆನ್ಸಿಕ್ ಆಡಿಟ್’ (ವಂಚನೆ, ಆರ್ಥಿಕ ದುರ್ಬಳಕೆಯ ಮೌಲ್ಯಮಾಪನ) ನಡೆಸಿ ವಾಸ್ತವಾಂಶ ಬಯಲಿಗೆಳೆಯಬೇಕು’ ಎಂದು ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಒತ್ತಾಯಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಒಪ್ಪಂದದಂತೆ 126 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ₹ 90,000 ಕೋಟಿ ಬೇಕು ಎಂದು ಅಂದಾಜಿಸಲಾಗಿತ್ತು. ಬಳಿಕ ಎನ್‌ಡಿಎ ಸರ್ಕಾರ ಪರಿಷ್ಕರಿಸಿದ ಒಪ್ಪಂದದಂತೆ 36 ಯುದ್ಧ ವಿಮಾನಗಳ ಖರೀದಿಗೆ ₹ 60,000 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಹೇಳಿದ್ದರು. ಇದನ್ನು ಅವಲೋಕಿಸಿದರೆ ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟ’ ಎಂದು ಅವರು ಪ್ರತಿಪಾದಿಸಿದರು.‌

‘ಈ ಹಗರಣದ ತನಿಖೆಯನ್ನು ಜಂಟಿ ಸದನ ಸಮಿತಿಗೆ ವಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ, ಸದನ ಸಮಿತಿಗೆ ವಹಿಸಿದರೆ, ಈಗಿನ ಸರ್ಕಾರದ ಅವಧಿಯಲ್ಲಿ ವರದಿ ಸಿದ್ಧವಾಗಿ ಮಂಡನೆಯಾಗಲು ಕಾಲಾವಕಾಶ ಸಿಗದು. ಹೀಗಾಗಿ, ಸಿಎಜಿ ವತಿಯಿಂದ ಪರಿಶೋಧನೆಗೆ ಸೂಚಿಸಿ ಇದೇ ಡಿ. 31ರೊಳಗೆ ವರದಿ ಪಡೆಯಬೇಕು’ ಎಂದು ಆಗ್ರಹಿಸಿದರು.

‘ಮೋದಿಯ ‘ಮೇಕ್ ಇನ್ ಇಂಡಿಯಾ' ಪರಿಕಲ್ಪನೆ ಖಾಲಿ ಘೋಷಣೆ.‌ ಮೇಕ್ ಇನ್ ಇಂಡಿಯಾ ಎಂದು ಹೇಳುವವರು ವಿದೇಶದೊಂದಿಗೆ ಇಂತಹ ಒಪ್ಪಂದ ಮಾಡಿಕೊಂಡಿದ್ದು ಯಾಕೆ? ಆ ಕಂಪನಿ ವಿರುದ್ಧ ನಾನು ಮಾತನಾಡಲಾರೆ. ಯಾಕೆಂದರೆ, ₹ 5,000 ಕೋಟಿ ಮಾನಹಾನಿ ಪ್ರಕರಣ ದಾಖಲು ಮಾಡಬಹುದು. ಯುದ್ಧ ವಿಮಾನ ಖರೀದಿ ವಿಷಯದಲ್ಲಿ ದೇಶದ ಎಚ್‍ಎಎಲ್ ಕಂಪನಿಯನ್ನು ಕಡೆಗಣಿಸಲಾಗಿದೆ. ಈ ಎಲ್ಲ ವಿಷಯಗಳಿಗೆ ಮೋದಿ ವೈಯುಕ್ತಿಕವಾಗಿ ಹೊಣೆ’ ಎಂದು ಆರೋಪಿಸಿದರು.

ಸಿನ್ಹಾ ಮುಂದಿಟ್ಟ ಹತ್ತು ಪ್ರಶ್ನೆಗಳು

*  126 ರಫೇಲ್‌ ಯುದ್ಧ ವಿಮಾನಗಳ ಖರೀದಿ ಸಂಬಂಧಿಸಿದಂತೆ ಫ್ರಾನ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಎನ್‌ಡಿಎ ಸರ್ಕಾರ ರಕ್ಷಣಾ ಇಲಾಖೆಯ ಟೆಂಡರ್ ನಿಯಮಾನುಸಾರ ಪರಿಷ್ಕರಿಸಿದೆಯೇ? ಅಥವಾ ಪ್ರಧಾನಿಯ ಸ್ವಂತ ನಿರ್ಧಾರವೇ?

* 2015 ಏಪ್ರಿಲ್‌ನಲ್ಲಿ ಫ್ರಾನ್ಸ್‌ಗೆ ಪ್ರಧಾನಿ ಭೇಟಿ ನೀಡಿದ ವೇಳೆ, ಏಕಾಏಕಿ ಎರಡು ದಿನ ಮೊದಲೇ ವಿದೇಶಾಂಗ ಕಾರ್ಯದರ್ಶಿ ಜತೆ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದೇಕೆ?

* ಭಾರತ– ಫ್ರಾನ್ಸ್ ಜಂಟಿ ಮಾತುಕತೆ ವೇಳೆ ರಫೇಲ್ ಖರೀದಿ ಸಂಬಂಧಿಸಿದಂತೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಹಿಂದಿನ ಒಪ್ಪಂದಕ್ಕಿಂತ ಉತ್ತಮವಾಗಿದೆ ಎಂದು ಹೇಳಲಾಗಿದೆ. ಹಾಗಿದ್ದರೆ, ಮೊತ್ತ ಏಕಾಏಕಿ ಹೆಚ್ಚಳವಾಗಿದ್ದು ಏಕೆ?

* 2019ರ ಸೆಪ್ಟೆಂಬರ್ ವೇಳೆಗೆ ಮೊದಲ ಯುದ್ಧ ವಿಮಾನ ಭಾರತಕ್ಕೆ ಸಿಗಬೇಕಿದ್ದರೂ ಅದನ್ನು 2022ರ ಮಧ್ಯಂತರ ವೇಳೆಗೆ ಎಂದು ಮುಂದೂಡಲಾಗಿದೆ. ಇಷ್ಟೊಂದು ವಿಳಂಬ ಯಾಕೆ?

* ಎಚ್‌ಎಎಲ್‌ಗೆ ನೀಡಲಾಗಿದ್ದ ಯುದ್ಧ ವಿಮಾನ ನಿರ್ಮಾಣ ಒಪ್ಪಂದ ಏಕಾಏಕಿ ಕೈಬಿಟ್ಟಿದ್ದೇಕೆ?

* ಯೂರೋ ಫೈಟರ್ ಖರೀದಿಯ ಪರಿಷ್ಕೃತ ಪ್ರಸ್ತಾವನೆ ಕೈಬಿಟ್ಟಿದ್ದೇಕೆ?

* 2016ರ ನವೆಂಬರ್‌ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿ, 36 ರಫೇಲ್ ಯುದ್ಧ ವಿಮಾನ, ಅಗತ್ಯ ಪರಿಕರಗಳು, ಸೇವೆ ಮತ್ತು ಶಸ್ತ್ರಾಸ್ತಗಳ ಖರೀದಿ ಸಂಬಂಧ ಒಪ್ಪಂದ ಆಗಿದೆ ಎಂದಿದ್ದಾರೆ. ಪ್ರತಿ ಯುದ್ಧ ವಿಮಾನಕ್ಕೆ ತಲಾ ₹ 670 ಕೋಟಿ ಮಾತ್ರ ವೆಚ್ಚ ಮಾಡಲಾಗುತ್ತಿದೆ ಎಂದೂ ಹೆಳಿದ್ದಾರೆ. ಹಾಗಿದ್ದರೆ, ಅಗತ್ಯ ಪರಿಕರಗಳು, ಸೇವೆ ಮತ್ತು ಶಸ್ತ್ರಾಸ್ತಗಳು ಅಂದರೆ ಏನು?

* ರಫೇಲ್ ಯುದ್ಧ ವಿಮಾನ ಕುರಿತಂತೆ ಒಪ್ಪಂದ ಇಡೀ ಜಗತ್ತಿಗೆ ಗೊತ್ತಿದ್ದರೂ ಮಾಹಿತಿ ನೀಡಲು ಇದೊಂದು ರಹಸ್ಯ ವಿಷಯ ಎಂದು ಸರ್ಕಾರ ಹೇಳುತ್ತಿರುವುದು ಏಕೆ?

* 36 ಯುದ್ಧ ವಿಮಾನಗಳ ಖರೀದಿ ಒಪ್ಪಂದವಾಗಿದ್ದರೂ ಕೇವಲ 16 ಯುದ್ಧ ವಿಮಾನಗಳ ಸ್ವೀಕೃತಿ ಕುರಿತಂತೆ ರಕ್ಷಣಾ ಇಲಾಖೆ ಪ್ರಕಟಿಸಿದೆ. ಇದರಿಂದ ಭಾರತೀಯ ವಾಯಪ‍ಡೆ ಹೆಚ್ಚು ಬಲಯುತ ಆಗುವುದೇ?

* ಡಸಾಲ್ಟ್ ಕಂಪನಿ ಜತೆ ಸೇವಾ ಒಪ್ಪಂದ ಮಾಡಿಕೊಂಡಿರುವುದು ಹಾಗೂ ಮೂಲ ಖರೀದಿ ಷರತ್ತಿನ ಅನುಸಾರ ಕೇವಲ 20 ದಿನಗಳ ಮೊದಲು ಸ್ಥಾಪನೆಗೊಂಡಿರುವ ಕಂಪನಿಗೆ ನೀಡಿರುವುದು ಏಕೆ?

‘ಘೋಷಿತವಲ್ಲ; ಅಘೋಷಿತ ತುರ್ತು ಪರಿಸ್ಥಿತಿ’

‘ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿರುವುದರ ಸಂಕೇತವಿದು. ದೇಶದ ಜನ ಕೇಂದ್ರ ಸರ್ಕಾರದ ಈ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ಯಶವಂತ್ ಸಿನ್ಹಾ ಕಿಡಿಕಾರಿದರು.

‘ಬಂಧಿತರು ನಿರ್ಭಿಡೆಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆ ಮೂಲಕ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದರು.

‘ದೇಶದಲ್ಲಿ ಅಸಹಿಷ್ಣುತೆ ವಾತಾವರಣ ಸೃಷ್ಟಿಯಾಗಿದೆ. ತಮ್ಮ ವಿರುದ್ಧ ಮಾತನಾಡುವವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ, ಐಟಿ ವತಿಯಿಂದ ದಾಳಿ ನಡೆಸಿ ಜೈಲಿಗಟ್ಟುವ ಪ್ರಯತ್ನವೂ ನಡೆಯುತ್ತಿದೆ’ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಈ ಹಿಂದೆ 1975ರ ತುರ್ತು ಪರಿಸ್ಥಿತಿ ಘೋಷಿತವಾಗಿದ್ದರೆ, ಸದ್ಯ ಅಘೋಷಿತ ತುರ್ತು ಪರಿಸ್ಥಿತಿ. ಪ್ರಜಾಸತ್ತಾತ್ಮಕ ಸಂಸ್ಥೆಗಳು ರಾಜಿಯಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸಂಸತ್ತು, ನ್ಯಾಯಾಂಗ, ಆರ್‍ಬಿಐ, ಚುನಾವಣಾ ಆಯೋಗ, ಮಾಧ್ಯಮಗಳು ರಾಜಿಯಾಗುತ್ತಿವೆ. ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳು ಈ ಪರಿಯಲ್ಲಿ ದುರ್ಬಲವಾಗಿದ್ದನ್ನು ಹಿಂದೆಂದೂ ಕಂಡಿರಲಿಲ್ಲ. ಎಲ್ಲವೂ ಇಬ್ಬರು ವ್ಯಕ್ತಿಗಳ ಕೇಂದ್ರಿತವಾಗಿದೆ. ತನಿಖಾ ಸಂಸ್ಥೆಗಳು ಅವರ ನಿಯಂತ್ರಣದಲ್ಲೇ ಇದ್ದು, ಸಿಬಿಐ ಎಂದರೆ ಸದ್ಯ ಮೋದಿ- ಅಮಿತ್ ಶಾ ತನಿಖಾ ದಳ ಎಂಬಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು