ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತು ಎದುರಿಸಲು ಮೋದಿಗೆ ಧೈರ್ಯವಿಲ್ಲ: ರಾಹುಲ್ ಗಾಂಧಿ ಲೇವಡಿ

ರಫೇಲ್ ಮೇಲಿನ ಚರ್ಚೆಗೆ ಪ್ರಧಾನಿ ಗೈರು
Last Updated 3 ಜನವರಿ 2019, 2:01 IST
ಅಕ್ಷರ ಗಾತ್ರ

ಪಣಜಿ: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಕಡತಗಳು ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರೀಕರ್ ಅವರ ಮನೆಯ ಮಲಗುವ ಕೋಣೆಯಲ್ಲಿವೆ ಎಂಬ ಮಾತುಗಳಿರುವ ಧ್ವನಿಸುರುಳಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಮಾಧ್ಯಮಗೋಷ್ಠಿ ನಡೆಸಿ ಈ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ್ದಾರೆ. ಅದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ಧ್ವನಿ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

‘ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಮಹತ್ವದ ವಿಚಾರ ಹೇಳಿದರು. ‘ರಫೇಲ್‌ಗೆ ಸಂಬಂಧಿಸಿದ ಎಲ್ಲಾ ವಿವರಗಳಿರುವ ಕಡತಗಳು ನನ್ನ ಮಲಗುವ ಕೊಠಡಿಯಲ್ಲಿವೆ. ಹೀಗಾಗಿಯೇ ಯಾರೂ ನನ್ನನ್ನು ಮುಟ್ಟುವ ಧೈರ್ಯ ಮಾಡುತ್ತಿಲ್ಲ’ ಎಂದು ಅವರು ಹೇಳಿದರು’ ಎಂಬ ಮಾತು ಆ ಧ್ವನಿಸುರುಳಿಯಲ್ಲಿದೆ. ಆದರೆ ಆ ಧ್ವನಿ ರಾಣೆ ಅವರದ್ದು ಹೌದೇ ಎಂಬುದು ದೃಢಪಟ್ಟಿಲ್ಲ.

‘ಪರ್ರೀಕರ್ ಅವರ ಮನೆಯಲ್ಲಿ ಅಡಗಿಸಿ ಇಟ್ಟಿರುವ ಕಡತಗಳಲ್ಲಿ ಏನಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಬಹಿರಂಗಪಡಿಸಬೇಕು’ ಎಂದು ಸುರ್ಜೇವಾಲಾ ಒತ್ತಾಯಿಸಿದ್ದಾರೆ.

‘ಮೋದಿ ಅವಿತುಕೊಂಡಿದ್ದಾರೆ’

‘ಸುದ್ದಿ ಸಂಸ್ಥೆಗೆ 95 ನಿಮಿಷಗಳ ಸೀಮಿತ ಅವಧಿಯ ಸಂದರ್ಶನ ನೀಡಲು ಪ್ರಧಾನಿ ನರೇಂದ್ರ ಮೋದಿಗೆ ಸಾಧ್ಯವಾಗುತ್ತದೆ. ಆದರೆ ಸಂಸತ್ತಿಗೆ ಬಂದು ರಫೇಲ್ ಒಪ್ಪಂದದ ಸಂಬಂಧ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಅವರಿಗಿಲ್ಲ.

‘ರಫೇಲ್ ಒಪ್ಪಂದದ ಬಗ್ಗೆ ಯಾರೂ ನನ್ನನ್ನು ಪ್ರಶ್ನಿಸುತ್ತಿಲ್ಲ ಎಂದು ಮೋದಿ ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಮೋದಿ ಅವರೇ, ಇಡೀ ದೇಶವೇ ಈ ಬಗ್ಗೆ ನಿಮ್ಮನ್ನು ಪ್ರಶ್ನಿಸುತ್ತಿದೆ.

‘ಎಐಎಡಿಎಂಕೆ ಸದಸ್ಯರು ಈಗ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಕ್ಷಣಾ ಸಚಿವರು ಪ್ರತಿಭಟನಾನಿರತ ಸದಸ್ಯರ ಹಿಂದೆ ಅವಿತುಕೊಂಡಿದ್ದಾರೆ. ಪ್ರಧಾನಿ ತಮ್ಮ ಕೊಠಡಿಯಲ್ಲಿ ಅವಿತು ಕುಳಿತಿದ್ದಾರೆ.

‘ವಾಯು ಪಡೆಯು ಎಂಟು ವರ್ಷ ಕೂಲಂಕಷವಾಗಿ ಪರಿಶೀಲಿಸಿ ರಫೇಲ್ ವಿಮಾನಗಳ ಖರೀದಿಗೆ ಒಪ್ಪಿಗೆ ನೀಡಿತ್ತು. ವಾಯುಪಡೆಗೆ 126 ಯುದ್ಧವಿಮಾನಗಳು ಬೇಕಾಗಿದ್ದವು. ವಾಯುಪಡೆಗೆ ಬೇಕಿದ್ದ ವಿಮಾನಗಳ ಸಂಖ್ಯೆಯನ್ನು 126ರಿಂದ 36ಕ್ಕೆ ಇಳಿಸಿದ್ದು ಯಾರು? ನಮಗೆ 126 ಯುದ್ಧವಿಮಾನಗಳು ಬೇಕಿಲ್ಲ ಎಂದು ಸರ್ಕಾರಕ್ಕೆ ವಾಯುಪಡೆ ಹೇಳಿತ್ತೇ? ಯುದ್ಧವಿಮಾನಗಳು ತುರ್ತಾಗಿ ಬೇಕಿದ್ದರಿಂದ ಸಂಖ್ಯೆಯನ್ನು ಇಳಿಸಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡುತ್ತಿದೆ. ಹಾಗಿದ್ದಲ್ಲಿ ಈವರೆಗೆ ಒಂದು ವಿಮಾನವೂ ಭಾರತಕ್ಕೆ ಏಕೆ ಸರಬರಾಜಾಗಿಲ್ಲ?

‘ಪ್ರಧಾನಿ ಮೋದಿ ಅವರು ತಮ್ಮ ‘ಆಪ್ತ ಗೆಳೆಯ’ ಮತ್ತು ‘ವಿಫಲ ಉದ್ಯಮಿ’ ಅನಿಲ್ ಅಂಬಾನಿ ಅವರಿಗೆ ಈ ಒಪ್ಪಂದದಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. (ಅನಿಲ್ ಅಂಬಾನಿ ಸದನದ ಸದಸ್ಯರಲ್ಲದ ಕಾರಣ ಅವರ ಹೆಸರನ್ನು ಇಲ್ಲಿ ಪ್ರಸ್ತಾ‍ಪಿಸಬಾರದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ರಾಹುಲ್ ಗಾಂಧಿಗೆ ಸೂಚಿಸಿದರು). ಹಾಗಿದ್ದಲ್ಲಿ ಪ್ರಧಾನಿಯ ಗೆಳೆಯನನ್ನು ‘ಎಎ’ ಎಂದು ಕರೆಯಲೇ ಅಥವಾ ‘ಡಬಲ್ ಎ’ ಎಂದು ಕರೆಯಬಹುದೇ?’ ಎಂದು ರಾಹುಲ್ ಲೇವಡಿ ಮಾಡಿದರು.

ಸದನದಲ್ಲಿ ಧ್ವನಿಸುರುಳಿ ಪ್ರಹಸನ

‘ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಇರುವ ಕಡತಗಳು ತಮ್ಮ ಬಳಿ ಇವೆ ಎಂದು ಗೋವಾ ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಗೋವಾ ಸಚಿವರೊಬ್ಬರು ಹೇಳಿರುವ ಧ್ವನಿಸುರುಳಿ ಇದೆ. ನೀವು ಅನುಮತಿ ನೀಡಿದರೆ ಅದನ್ನು ಇಲ್ಲಿ ಕೇಳಿಸತ್ತೇನೆ’ ಎಂದು ರಾಹುಲ್ ಗಾಂಧಿ ಅವರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಲ್ಲಿ ಮನವಿ ಸಲ್ಲಿಸಿದರು.

‘ಆ ಧ್ವನಿಸುರುಳಿ ಯಾರದ್ದು ಎಂಬುದನ್ನು ದೃಢಪಡಿಸುವುದಿದ್ದರೆ ಮಾತ್ರ ಅದನ್ನು ಕೇಳಿಸಲು ಅನುಮತಿ ನೀಡಿ’ ಎಂದು ಅರುಣ್ ಜೇಟ್ಲಿ ಒತ್ತಾಯಿಸಿದರು.

‘ಅದನ್ನು ನೀವು ದೃಢಪಡಿಸುತ್ತೀರಾ’ ಎಂದು ಸ್ಪೀಕರ್ ಪ್ರಶ್ನಿಸಿದರು.

ಅದಕ್ಕೆ ರಾಹುಲ್ ನಿರಾಕರಿಸಿದರು. ‘ಧ್ವನಿಸುರುಳಿ ಕೇಳಲು ನೀವು (ಬಿಜೆಪಿಯವರು) ಹೆದರಿದ್ದೀರಿ. ನಾನು ಅದನ್ನು ಕೇಳಿಸುವುದಿಲ್ಲ ಬಿಡಿ’ ಎಂದು ರಾಹುಲ್ ಹೇಳಿದರು.

‘ಆ ಧ್ವನಿಸುರುಳಿ ನಕಲಿ. ಅದು ಕಾಂಗ್ರೆಸ್‌ನದ್ದೇ ಸೃಷ್ಟಿ ಎಂದು ರಾಹುಲ್‌ಗೆ ಗೊತ್ತಿದೆ. ಅಲ್ಲದೆ ಅದನ್ನು ಸದನದಲ್ಲಿ ಸಾಬೀತು ಮಾಡದಿದ್ದಲ್ಲಿ ಹಕ್ಕುಚ್ಯುತಿ ನೋಟಿಸ್ ಎದುರಿಸಬೇಕಾಗುತ್ತದೆ. ಹೀಗಾಗಿ ಅವರು ಅದನ್ನು ದೃಢಪಡಿಸುವುದಿಲ್ಲ’ ಎಂದು ಜೇಟ್ಲಿ ಲೇವಡಿ ಮಾಡಿದರು.

‘ರಾಹುಲ್ ಗಾಂಧಿ ಹೇಳುವುದೆಲ್ಲವೂ ಸುಳ್ಳು’

‘ಕಾಂಗ್ರೆಸ್‌ನ ಕೈಗೆ ಭ್ರಷ್ಟಾಚಾರದ ಮಸಿಮೆತ್ತಿಕೊಂಡಿದೆ. ಹೀಗಾಗಿ ಅಂಥದ್ದೇ ಮಸಿಯನ್ನು ಸೃಷ್ಟಿಸಿ, ಅದನ್ನು ಮೋದಿಗೆ ಬಳಿಯಲು ಕಾಂಗ್ರೆಸ್ ನಿರ್ಧರಿಸಿದಂತಿದೆ.

‘ಕೆಲವು ಜನರಿಗೆ ಮತ್ತು ಕೆಲವು ಕುಟುಂಬಗಳಿಗೆ ಹಣದ ಲೆಕ್ಕಾಚಾರ ಮಾತ್ರ ಅರ್ಥವಾಗುತ್ತದೆ. ಆದರೆ ದೇಶದ ಭದ್ರತೆಯ ಮಹತ್ವ ಅರ್ಥವಾಗುವುದಿಲ್ಲ. ಒಂದು ಬಾರಿ ನಡೆದರೆ ಅದು ತಪ್ಪು. ಅದೇ ತಪ್ಪು ಮೂರು–ಮೂರು ಬಾರಿ ನಡೆದರೆ ಅದನ್ನು ಸಂಚು ಎನ್ನುತ್ತಾರೆ.

‘ಬೊಫೋರ್ಸ್, ನ್ಯಾಷನಲ್ ಹೆರಾಲ್ಡ್‌ ಮತ್ತು ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣಗಳಲ್ಲಿ ಭಾಗಿಯಾದವರು ಈಗ ನರೇಂದ್ರ ಮೋದಿಯತ್ತ ಬೆರಳು ತೋರುತ್ತಿದ್ದಾರೆ. ರಫೇಲ್ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸುವ ಹಕ್ಕು ಇಲ್ಲಿ ಯಾರಿಗೂ ಇಲ್ಲ. ಒಪ್ಪಂದದ ಬಗ್ಗೆ ತನಿಖೆ ನಡೆಸಲು ಜಂಟಿ ಸದನ ಸಮಿತಿಯನ್ನು ರಚಿಸುವ ಪ್ರಶ್ನೆಯೇ ಇಲ್ಲ.

‘ಕಾಂಗ್ರೆಸ್‌ ಅನ್ನು ಈ ಹಿಂದೆ ಘಟಾನುಘಟಿ ನಾಯಕರು ಮುನ್ನೆಡೆಸಿದ್ದರು. ಆದರೆ ಪಕ್ಷದ ಈಗಿನ ಅಧ್ಯಕ್ಷರಿಗೆ ಯುದ್ಧವಿಮಾನ ಎಂದರೆ ಏನು ಎಂಬುದೇ ಗೊತ್ತಿಲ್ಲ.

‘ಈ ಮನುಷ್ಯ (ರಾಹುಲ್ ಗಾಂಧಿ) ಸದಾ ಸುಳ್ಳು ಹೇಳುತ್ತಾರೆ. ಅವರಿಗೆ ಸತ್ಯವೆಂಬುದು ರುಚಿಸುವುದೇ ಇಲ್ಲ. ರಫೇಲ್‌ಗೆ ಸಂಬಂಧಿಸಿದಂತೆ ಈ ಮನುಷ್ಯ ಆರು ತಿಂಗಳಲ್ಲಿ ಹೇಳಿರುವ ಮಾತುಗಳೆಲ್ಲಾ ಅಸತ್ಯ’ ಎಂದು ಜೇಟ್ಲಿ ಆರೋಪಿಸಿದರು.

ಮೇಕೆದಾಟು: ವೆಂಕಯ್ಯ ಕೋರಿಕೆ

ರಾಜ್ಯಸಭೆಯ ಕಲಾಪ ಸುಗಮವಾಗಿ ನಡೆಯುವುದಕ್ಕಾಗಿ ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ಯೋಜನೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.

ತಮಿಳುನಾಡಿನ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮೇಕೆದಾಟು ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದರು. ಹಾಗಾಗಿ, ನಾಯ್ಡು ಅವರು ಮೇಕೆದಾಟು ವಿವಾದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಕೋರಿದ್ದಾರೆ.

ಕಳೆದ ಡಿಸೆಂಬರ್‌ 11ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಆದರೆ, ತಮಿಳುನಾಡಿನ ಪಕ್ಷಗಳು ಕಾವೇರಿ ವಿಚಾರದಲ್ಲಿ ಮತ್ತು ಇತರ ಪಕ್ಷಗಳು ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿ ಎಬ್ಬಿಸಿದ ಗದ್ದಲದಿಂದಾಗಿ ಒಂದು ದಿನವೂ ಕಲಾಪ ಸುಸೂತ್ರವಾಗಿ ನಡೆದಿಲ್ಲ. ಆದ್ದರಿಂದ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರಿಗೆ ನಾಯ್ಡು ಅವರು ಬುಧವಾರ ಎಚ್ಚರಿಕೆಯನ್ನೂ ನೀಡಿದರು

***

ಮೋದಿ ಮೇಘನಾದ

ರಫೇಲ್‌ ಒಪ್ಪಂದದ ಚರ್ಚೆ ನಡೆಯುವಾಗ ಪ್ರಧಾನಿ ಮೋದಿ ಸದನಕ್ಕೆ ಬರಬೇಕಿತ್ತು. ಆ ಧೈರ್ಯ ತೋರದ ಅವರು ರಾಮಾಯಣದ ಮೇಘನಾದನಿದ್ದಂತೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹಿಂದೆ ಮೋದಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. 70 ವರ್ಷಗಳ ಅನುಭವವಿದ್ದ ಎಚ್‌ಎಎಲ್‌ ಅನ್ನು ಬದಿಗಿಟ್ಟು, 20 ದಿನಗಳ ರಿಲಯನ್ಸ್ ಡಿಫೆನ್ಸ್‌ಗೆ ಪಾಲುದಾರಿಕೆ ನೀಡಿದ್ದು ಏಕೆ ಎಂಬುದು ತಿಳಿಯಬೇಕು. ಇದಕ್ಕಾಗಿ ಜಂಟಿ ಸದನ ಸಮಿತಿ (ಜೆಪಿಸಿ) ರಚಿಸಬೇಕು

–ಸುಗತ ರಾಯ್,ಟಿಎಂಸಿ ಸಂಸದ

ದೊಡ್ಡ ನಷ್ಟ

‌ಯುಪಿಎ ಅವಧಿಯ ಒಪ್ಪಂದದಲ್ಲಿ ತಂತ್ರಜ್ಞಾನ ವರ್ಗಾವಣೆಗೆ ಅವಕಾಶವಿತ್ತು. ಆದರೆ ಎನ್‌ಡಿಎ ಮಾಡಿಕೊಂಡಿರುವ ಒಪ್ಪಂದದಲ್ಲಿ ತಂತ್ರಜ್ಞಾನ ವರ್ಗಾವಣೆಯನ್ನು ಕೈಬಿಡಲಾಗಿದೆ. ಇದು ದೇಶಕ್ಕಾದ ದೊಡ್ಡ ನಷ್ಟ. ಈ ನಿರ್ಧಾರಕ್ಕೆ ಬಂದಿದ್ದು ಏಕೆ ಎಂಬುದರ ಬಗ್ಗೆ ಸರ್ಕಾರವು ಶ್ವೇತಪತ್ರ ಹೊರಡಿಸಿ, ವಿವರಣೆ ನೀಡಬೇಕು

–ಕಾಳಿಕೇಶ್ ನಾರಾಯಣ ಸಿಂಗ್ ದಿಯೊ,ಬಿಜೆಡಿ ಸಂಸದ

ಸಂಸತ್ತಿನ ಬಗ್ಗೆ ಗೌರವವಿಲ್ಲ

ಚರ್ಚೆಯಲ್ಲಿ ಪ್ರಧಾನಿ ಭಾಗವಹಿಸದೇ ಇರುವುದು ವಿಪರ್ಯಾಸ. ಮೋದಿಗೆ ಸಂಸತ್ತಿನ ಬಗ್ಗೆ ಗೌರವವೇ ಇಲ್ಲ.2014ರಲ್ಲಿ ಎಚ್‌ಎಎಲ್‌ ಪ್ರಸ್ತುತವಾಗಿತ್ತು. 2018ರಲ್ಲಿ ಅದು ಅಪ್ರಸ್ತುತವಾಗಿದೆ. ಅದು ಏಕೆ ಎಂಬುದನ್ನು ರಕ್ಷಣಾ ಸಚಿವಾಲಯ ವಿವರಿಸಬೇಕು. ರಫೇಲ್‌ಗೆ ಸಂಬಂಧಿಸಿದ ಕಡತಗಳು ಮನೋಹರ್ ಪರ್ರೀಕರ್ ಅವರ ಮಲಗುವ ಕೋಣೆಯಲ್ಲಿದೆಯೇ?

–ಜಯದೇವ್ ಗಲ್ಲಾ,ಟಿಡಿಪಿ ಸಂಸದ

***

ಇದು ಕಾಂಗ್ರೆಸ್ ಸೃಷ್ಟಿಸಿರುವ ಧ್ವನಿಸುರುಳಿ. ಅದರಲ್ಲಿ ಇರುವುದೆಲ್ಲವೂ ಸುಳ್ಳು. ಸಂಪುಟ ಸಭೆಯಲ್ಲಾಗಲೀ, ಸಭೆಯ ಹೊರಗಾಗಲೀ ರಫೇಲ್ ಕುರಿತು ಚರ್ಚೆಯೇ ನಡೆದಿಲ್ಲ

–ಮನೋಹರ್ ಪರ್ರೀಕರ್,ಗೋವಾ ಮುಖ್ಯಮಂತ್ರಿ

ಇದು ನನ್ನ ವಿರುದ್ಧ ನಡೆಸಿರುವ ಸಂಚು. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ವಿವರಣೆ ನೀಡಿದ್ದೇನೆ. ಧ್ವನಿಸುರುಳಿ ಬಗ್ಗೆ ತನಿಖೆ ನಡೆಸುವಂತೆಯೂ ಕೋರಿದ್ದೇನೆ

–ವಿಶ್ವಜಿತ್ ರಾಣೆ,ಗೋವಾ ಆರೋಗ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT