ಮಂಗಳವಾರ, ಏಪ್ರಿಲ್ 7, 2020
19 °C
ಲೋಕಸಭೆಯಲ್ಲಿ ಸರ್ಕಾರಕ್ಕೆ ರಾಹುಲ್ ಗಾಂಧಿ ಆಗ್ರಹ

ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ನೀಡಲು ರಾಹುಲ್ ಗಾಂಧಿ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ದೇಶದ ಮೊದಲ 50 ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ನೀಡಿ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

ಸೋಮವಾರ ಲೋಕಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ರಾಹುಲ್ ಗಾಂಧಿ ಈ ವಿಷಯ ಪ್ರಸ್ತಾಪಿಸಿದರು. ‘ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ನೀಡಿ. ಬ್ಯಾಂಕ್‌ಗಳು ಅವರಿಗೆ ನೀಡಿರುವ ಸಾಲದ ವಿವರ, ಬ್ಯಾಂಕ್‌ಗಳಿಗೆ ಪಾವತಿಯಾದ ಸಾಲದ ಮೊತ್ತ ಮತ್ತು ಬ್ಯಾಂಕ್‌ಗಳು ಕೈಬಿಟ್ಟಿರುವ ಸಾಲದ ಮೊತ್ತದ ವಿವರ ನೀಡಿ’ ಎಂದು ಒತ್ತಾಯಿಸಿದರು.

ಇದಕ್ಕೆ ಸರ್ಕಾರದ ಕಡೆಯಿಂದ ಸಮರ್ಪಕ ಪ್ರತಿಕ್ರಿಯೆ ಬರಲಿಲ್ಲ. ಆಗ ರಾಹುಲ್ ಅವರು, ‘ಹಣ ದೋಚಿರುವವರನ್ನು ವಾಪಸ್ ಕರೆತರುತ್ತೇವೆ ಮತ್ತು ಅವರಿಗೆ ಶಿಕ್ಷೆ ನೀಡುತ್ತೇವೆ ಎಂದು ಪ್ರಧಾನಿ ಹೇಳಿದ್ದರು. ಆದರೆ, ನನ್ನ ಈ ಸಾಮಾನ್ಯ ಪ್ರಶ್ನೆಗೇ ಉತ್ತರ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಪ್ರಶ್ನೆಗೆ ಉತ್ತರಿಸಲು ಎದ್ದರು. ರಾಹುಲ್ ಸೇರಿದಂತೆ ಕಾಂಗ್ರೆಸ್‌ನ ಸದಸ್ಯರು, ‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಉತ್ತರಿಸಬೇಕು’ ಎಂದು ಒತ್ತಾಯಿಸಿದರು. 

‘ಪ್ರಶ್ನೋತ್ತರ ವೇಳೆಯಲ್ಲಿ ಕಿರಿಯ ಸಚಿವರೇ ಉತ್ತರ ನೀಡುತ್ತಾರೆ’ ಎಂದು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಹೇಳಿದರು. ‘ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಹೊಣೆಯನ್ನು ಎನ್‌ಡಿಎ ಸರ್ಕಾರದ ಮೇಲೆ ಹೊರಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಬ್ಯಾಂಕ್‌ಗಳ ಪರಿಸ್ಥಿತಿ ಬಗ್ಗೆ ನರೇಂದ್ರ ಮೋದಿ ಸರ್ಕಾರವು ಪರಿಶೀಲನೆ ನಡೆಸಿದೆ. ಸರ್ಕಾರ ತೆಗೆದುಕೊಂಡ ಹಲವು ಕ್ರಮಗಳ ಕಾರಣ ಬ್ಯಾಂಕ್‌ಗಳ ಕ್ಷಮತೆ ಭಾರಿ ಸುಧಾರಿಸಿದೆ’ ಎಂದು ಅನುರಾಗ್ ಠಾಕೂರ್‌ ಹೇಳಿದರು.

‘₹ 25 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದು, ಪಾವತಿ ಮಾಡದೇ ಇರುವವರ ಪಟ್ಟಿಯನ್ನು ಕೇಂದ್ರೀಯ ಮಾಹಿತಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ನನ್ನ ಬಳಿ ಆ ಪಟ್ಟಿಯಿದೆ. ಸ್ಪೀಕರ್ ಅನುಮತಿ ನೀಡಿದರೆ, ಆ ಪಟ್ಟಿಯನ್ನು ನಾನು ಸದನದ ಮುಂದೆ ಇರಿಸುತ್ತೇನೆ. ಪಾವತಿ ಮಾಡದೇ ಇದ್ದ ₹ 4.8 ಲಕ್ಷ ಕೋಟಿ ಮೊತ್ತದಷ್ಟು ಸಾಲವನ್ನು ಮೋದಿ ಸರ್ಕಾರ ಬಂದ ನಂತರ ವಸೂಲಿ ಮಾಡಲಾಗಿದೆ’ ಎಂದು ಹೇಳಿದರು.

ಪ್ರಶ್ನೋತ್ತರ ಅವಧಿ ಮುಗಿದ ಕಾರಣ ಸ್ಪೀಕರ್ ಅವರು ಕಲಾಪ ಮುಂದುವರಿಸಿದರು. ಆಗ ರಾಹುಲ್‌ ಇದೇ ವಿಷಯಕ್ಕೆ ಸಂಬಂಧಿಸಿದಂತೆ 2ನೇ ಪೂರಕ ಪ್ರಶ್ನೆ ಕೇಳಲು ಅವಕಾಶ ಕೇಳಿದರು. ಸ್ಪೀಕರ್ ಅವಕಾಶ ನೀಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು