ಬುಧವಾರ, ಸೆಪ್ಟೆಂಬರ್ 18, 2019
28 °C

ಜಮ್ಮು–ಕಾಶ್ಮೀರ: ಶ್ರೀನಗರದತ್ತ ರಾಹುಲ್‌ ಒಳಗೊಂಡ ವಿಪಕ್ಷಗಳ ನಿಯೋಗ

Published:
Updated:

ನವದೆಹಲಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೇರಿದಂತೆ ಇತರೆ ವಿರೋಧ ಪಕ್ಷಗಳ ನಾಯಕರನ್ನು ಒಳಗೊಂಡ ನಿಯೋಗವು ಶನಿವಾರ ಶ್ರೀನಗರಕ್ಕೆ ಭೇಟಿ ನೀಡಲಿದೆ. ವಿಶೇಷಾಧಿಕಾರ ಅಸಿಂಧುಗೊಳಿಸಿದ ನಂತರ ಯಾವ ರಾಜಕೀಯ ನಾಯಕರೂ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲು ಸರ್ಕಾರ ಅವಕಾಶ ನೀಡಿಲ್ಲ.

'ರಾಜಕೀಯ ಮುಖಂಡರು ಶ್ರೀನಗರಕ್ಕೆ ಭೇಟಿ ನೀಡಬಾರದು, ಇದರಿಂದ ಜನರನ್ನು ತೊಂದರೆಯಲ್ಲಿ ಸಿಲುಕಿಸಿದಂತಾಗುತ್ತದೆ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟಿಸಿದೆ. 

‌ಕಾಂಗ್ರೆಸ್‌ನ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ,  ಆರ್‌ಜೆಡಿಯ ಮನೋಜ್ ಝಾ, ಎನ್‌ಸಿಪಿಯ ದಿನೇಶ್ ತ್ರಿವೇದಿ, ಮತ್ತು ಡಿಎಂಕೆಯ ತಿರುಚ್ಚಿ ಶಿವ ಈ ನಿಯೋಗದಲ್ಲಿ ಇರಲಿದ್ದಾರೆ. ಟಿಎಂಸಿ ನಾಯಕರೂ ಈ ನಿಯೋಗದಲ್ಲಿ ಇರಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಲ್ಲಿ ಜನರ ಜತೆ ಸಂವಾದ ನಡೆಸಲು ವಿರೋಧ ಪಕ್ಷಗಳ ನಾಯಕರು ಸಿದ್ಧತೆ ನಡೆಸಿದ್ದಾರೆ. ಅವಕಾಶ ನೀಡಿದರೆ ಜಮ್ಮು ಮತ್ತು ಕಾಶ್ಮೀರದ ಬೇರೆ ಪ್ರದೇಶಗಳಿಗೂ ನಿಯೋಗ ಭೇಟಿ ನೀಡಲಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಮತ್ತು ಸಾವಿನ ವರದಿಗಳು ಬರುತ್ತಿವೆ ಎಂದು ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಗೆ ಆಗಸ್ಟ್ 11ರಂದು ಪ್ರತಿಕ್ರಿಯಿಸಿದ್ದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ‘ನಾನು ವಿಮಾನ ಕಳಿಸಿಕೊಡುತ್ತೇನೆ. ಇಲ್ಲಿಗೆ ಭೇಟಿ ನೀಡಿ ವಾಸ್ತವವನ್ನು ಗಮನಿಸಿ ಪ್ರತಿಕ್ರಿಯಿಸಿ. ನೀವೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿರುವಿರಿ...‘ ಎಂದು ಸವಾಲು ಮುಂದಿಟ್ಟಿದ್ದರು. 

ಎರಡು ದಿನಗಳ ನಂತರ ರಾಹುಲ್‌ ಗಾಂಧಿ, ರಾಜ್ಯಪಾಲರ ಆಹ್ವಾನದಂತೆ ಭೇಟಿಗೆ ಒಪ್ಪಿದರು. ಆದರೆ, ‘ವಿಪಕ್ಷಗಳ ಮುಖಂಡರನ್ನು ಒಳಗೊಂಡ ನಿಯೋಗವನ್ನು ಕರೆತರಲು ಕೋರುವ ಮೂಲಕ ಭೇಟಿಯನ್ನು ರಾಜಕೀಯಗೊಳಿಸುತ್ತಿದ್ದಾರೆ. ರಾಜಕೀಯ ಮುಖಂಡರ ಭೇಟಿಯು ಸಾಮಾನ್ಯ ಜನರಲ್ಲಿ ಇನ್ನಷ್ಟು ತೊಂದರೆ ಉಂಟು ಮಾಡುವ ಯತ್ನವಾಗಲಿದೆ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. 

Post Comments (+)