ಭಾನುವಾರ, ಜೂಲೈ 5, 2020
27 °C
ತೇಪೆ ಹಚ್ಚಲು ಮುಂದಾದ ಶಿವಸೇನಾ, ಎನ್‌ಸಿಪಿ

ಕೊರೊನಾ ನಿರ್ವಹಣೆ ಕುರಿತ ರಾಹುಲ್ ಹೇಳಿಕೆ: ಮಹಾರಾಷ್ಟ್ರ ಸರ್ಕಾರದ ಒಡಕು ಬಯಲು

ಸಾಗರ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Rahul Gandhi

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಮುಖ್ಯ ಪಾತ್ರ ವಹಿಸುತ್ತಿಲ್ಲ ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಇರುವ ಅತೃಪ್ತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ.

ಕೊರೊನಾ ವೈರಸ್ ನಿರ್ವಹಣೆಗೆ ಸಂಬಂಧಿಸಿ ಮಂಗಳವಾರ ಮಾತನಾಡಿದ್ದ ರಾಹುಲ್ ಗಾಂಧಿ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಮಹಾರಾಷ್ಟ್ರ ಸರ್ಕಾರದ ಕುರಿತು ಅವರಾಡಿರುವ ಮಾತುಗಳ ಬಗ್ಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮೂಲಕ ಕಾಂಗ್ರೆಸ್, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ದೂರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡಣವೀಸ್ ವ್ಯಂಗ್ಯವಾಡಿದ್ದಾರೆ.

ಏನು ಹೇಳಿದ್ದರು ರಾಹುಲ್?: ಪಂಜಾಬ್, ಛತ್ತೀಸಗಡ, ರಾಜಸ್ಥಾನ, ಪುದುಚೇರಿಗಳಲ್ಲಿ ನಾವೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ ಮಹಾರಾಷ್ಟ್ರದಲ್ಲಿ ವ್ಯತ್ಯಾಸವಿದೆ. ನಾವಲ್ಲಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವಷ್ಟೇ. ಮುಖ್ಯ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು.

ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಶಿವಸೇನಾ ಮತ್ತು ಎನ್‌ಸಿಪಿ ನಮ್ಮನ್ನು ಸಂಪರ್ಕಿಸುತ್ತಿಲ್ಲ. ಕೊರೊನಾ ವಿರುದ್ಧ ಹೋರಾಡುತ್ತಿರುವ ಪ್ರಮುಖ ಇಲಾಖೆಗಳನ್ನು ನಾವು ನಿರ್ವಹಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಖಾಸಗಿಯಾಗಿ ರಾಹುಲ್ ಗಾಂಧಿ ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 

ಕೊರೊನಾ ನಿರ್ವಹಣೆಗೆ ಸಂಬಂಧಿಸಿ ಮಹಾ ವಿಕಾಸ್ ಅಘಾಡಿ ಸರ್ಕಾರದ ಕಾರ್ಯವೈಖರಿಯನ್ನು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ. ಈ ಮಧ್ಯೆ ರಾಹುಲ್ ಅವರ ಹೇಳಿಕೆ ಸಮ್ಮಿಶ್ರ ಸರ್ಕಾರದ ನಾಯಕರನ್ನು ಮತ್ತಷ್ಟು ಮುಜುಗರಕ್ಕೀಡುಮಾಡಿದೆ.

ಮಹಾರಾಷ್ಟ್ರದ ಜನರು ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಿತ್ರಪಕ್ಷಗಳ ಕುರಿತು ರಾಹುಲ್ ಗಾಂಧಿ ಆಡಿರುವ ಮಾತುಗಳು ಹಾಸ್ಯಾಸ್ಪದವಾಗಿವೆ. ಶಿವಸೇನಾ ಅಸಹಕಾರ ತೋರುತ್ತಿದೆ ಎಂಬ ಆರೋಪಗಳ ಬಗ್ಗೆ ಮುಖ್ಯಮಂತ್ರಿಗಳು ಮಹಾರಾಷ್ಟ್ರದ ಜನತೆಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಉತ್ತರ ನೀಡಬೇಕಿದೆ ಎಂದು ಬಿಜೆಪಿಯ ವಕ್ತಾರ ಶೈನಾ ಎಂ.ಸಿ. ಹೇಳಿದ್ದಾರೆ.

ರಾಹುಲ್ ಹೇಳಿಕೆ ಚರ್ಚೆಗೆ ಗ್ರಾಸವಾಗುತ್ತಿದೆ ಶಿವಸೇನಾ ಟ್ರಬಲ್ ಶೂಟರ್ ಸಂಜಯ್ ರಾವತ್ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ತೇಪೆ ಹಚ್ಚಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಮಾಜಿ ಸಿಎಂ ನಾರಾಯಣ್‌ ರಾಣೆ ಮನವಿ

ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳಿಂದ ಸರ್ಕಾರ ನಡೆಯುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಹಾಗೆ ಹೇಳಿದ್ದಾರಷ್ಟೆ. ಮಿತ್ರಪಕ್ಷಗಳು ಒಗ್ಗಟ್ಟಾಗಿದ್ದು ಜನತೆಯ ಸೇವೆ ಮಾಡಲಿವೆ ಎಂದು ಮಲಿಕ್ ಹೇಳಿದ್ದಾರೆ

ರಾಹುಲ್ ಗಾಂಧಿ ಅವರು ಮಂಗಳವಾರ ಕೋವಿಡ್ ನಿರ್ವಹಣೆ ಬಗ್ಗೆ ಮಾತನಾಡುವುದಕ್ಕೂ ಮುನ್ನವೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಬಳಿಕ ಅವರು, ರಾಜ್ಯ ಸರ್ಕಾರ ಸ್ಥಿರವಾಗಿದ್ದು ಅವಧಿ ಪೂರೈಸಲಿದೆ ಎಂದೂ ಹೇಳಿದ್ದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಅಲ್ಲಿನ ಮಾಜಿ ಮುಖ್ಯಮಂತ್ರಿ, ರಾಜ್ಯಸಭೆ ಬಿಜೆಪಿ ಸಂಸದ ನಾರಾಯಣ್ ರಾಣೆ ಸೋಮವಾರ ಮಹಾರಾಷ್ಟ್ರ ರಾಜ್ಯಪಾಲ ಬಿ. ಎಸ್. ಕೋಶಿಯಾರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಶರದ್ ಪವಾರ್ – ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ | ಒಂದೇ ದಿನ 75 ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು