ಭಾನುವಾರ, ಸೆಪ್ಟೆಂಬರ್ 22, 2019
24 °C
ಪಟ್ಟುಬಿಡದ ಕಾಂಗ್ರೆಸ್‌ ಅಧ್ಯಕ್ಷ

ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಾಹುಲ್‌ ಗಾಂಧಿ

Published:
Updated:

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್‌ ಗಾಂಧಿ ಪುನರುಚ್ಚರಿಸಿರುವುದಾಗಿ ಮೂಲಗಳು ಹೇಳಿವೆ. 

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬಳಿಕ, ಸೋಲಿನ ಆತ್ಮಾವಲೋಕನಕ್ಕಾಗಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಸಭೆ ಶನಿವಾರ ನಡೆದಿತ್ತು. ರಾಜೀನಾಮೆ ನೀಡುವ ನಿರ್ಧಾರವನ್ನು ಆ ಸಭೆಯಲ್ಲಿಯೇ ರಾಹುಲ್‌ ಅವರು ಪ್ರಕಟಿಸಿದ್ದರು ಎಂದು ವರದಿಯಾಗಿತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಂಗಿ ಪ್ರಿಯಾಂಕಾ ವಾದ್ರಾ ಅವರ ಮನವೊಲಿಕೆಗೂ ರಾಹುಲ್ ಬಗ್ಗಿಲ್ಲ ಎಂದು ಹೇಳಲಾಗಿತ್ತು. 

ನೂತನವಾಗಿ ಆಯ್ಕೆಯಾದ ಕಾಂಗ್ರೆಸ್‌ ಸಂಸದರನ್ನು ಭೇಟಿಯಾಗಲು ರಾಹುಲ್‌ ಸೋಮವಾರ ನಿರಾಕರಿಸಿದ್ದಾರೆ, ಮುಖಂಡರನ್ನೂ ಅವರು ಭೇಟಿಯಾಗುತ್ತಿಲ್ಲ. ಅದಲ್ಲದೆ, ಅವರ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹಾಗಿದ್ದರೂ, ಪಕ್ಷದ ಮುಖಂಡರಾದ ಅಹ್ಮದ್‌ ಪಟೇಲ್‌ ಮತ್ತು ಕೆ.ಸಿ. ವೇಣುಗೋಪಾಲ್‌ ಅವರನ್ನು ರಾಹುಲ್‌ ಸೋಮವಾರ ಬೆಳಿಗ್ಗೆ ಭೇಟಿಯಾಗಿದ್ದಾರೆ. ತಮ್ಮ ಬದಲಿಗೆ ಹೊಸ ಅಧ್ಯಕ್ಷನನ್ನು ಆಯ್ಕೆ ಮಾಡುವಂತೆ ಈ ಇಬ್ಬರಿಗೆ ಅವರು ಸೂಚಿಸಿದ್ದಾರೆ. ಹೊಸ ವ್ಯಕ್ತಿಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವವರೆಗೆ ಮಾತ್ರ ಹುದ್ದೆಯಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್‌ನ ಹಲವು ಹಿರಿಯ ಮುಖಂಡರು ಸೋಮವಾರ ಭೇಟಿಯಾಗಿದ್ದಾರೆ. ಪಕ್ಷಕ್ಕಾಗಿ ಕೆಲಸ ಮಾಡಬೇಕು, ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕು ಎಂದು ಮುಖಂಡರು ಕೋರಿದ್ದಾರೆ. 

ರಾಹುಲ್‌ ಅವರು ಅಧ್ಯಕ್ಷರಾಗಿ ಮುಂದುವರಿಯುವುದಿಲ್ಲ ಎಂಬ ವದಂತಿ ದಟ್ಟವಾಗುತ್ತಿದ್ದಂತೆಯೇ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಸ್ಪಷ್ಟನೆ ನೀಡಿದ್ದಾರೆ. ಪಕ್ಷದೊಳಗೆ ಸಿಡಬ್ಲ್ಯುಸಿಯ ಮಹತ್ವವನ್ನು ಎಲ್ಲರೂ ಗೌರವಿಸಬೇಕು. ಪಕ್ಷದ ಆಂತರಿಕ ಚರ್ಚೆಗಳ ಬಗ್ಗೆ ವದಂತಿಗಳನ್ನು ಹರಡಬಾರದು ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನ ಉನ್ನತಾಧಿಕಾರ ಸಮಿತಿಯಾದ ಸಿಡಬ್ಲ್ಯುಸಿ ಮೇ 25ರ ಸಭೆಯ ತೀರ್ಮಾನಗಳನ್ನು ಉಲ್ಲೇಖಿಸಿದ ವಕ್ತಾರ ರಣದೀಪ್ ಸುರ್ಜೆವಾಲಾ, ‘ಪಕ್ಷದ ಸಾಂಸ್ಥಿಕ ಬದಲಾವಣೆ ಕುರಿತು ಅಗತ್ಯ ಕ್ರಮಕೈಗೊಳ್ಳುವ ಅಧಿಕಾರವನ್ನು ಅಧ್ಯಕ್ಷರಿಗೆ ಬಿಡಲಾಗಿದೆ’ ಎಂದಿದ್ದಾರೆ.

ರಾಜೀನಾಮೆಗೆ ಸಂಬಂಧಿಸಿ ಸೇರಿದಂತೆ ಮಾಧ್ಯಮಗಳಲ್ಲಿ  ವಿವಿಧ ಅಭಿಪ್ರಾಯಗಳು, ಊಹೆಗಳು, ವದಂತಿಗಳಿಗೆ ಅವಕಾಶ ನೀಡಬಾರದು ಎಂದು ಕೋರಿದರು. 

ಇದನ್ನೂ ಓದಿ: ಲೋಕಸಭೆ ಚುನಾವಣೆ ಸೋಲಿನ ಪರಿಣಾಮ: ಕಾಂಗ್ರೆಸ್‌ನಲ್ಲಿ ಮುಂದುವರಿದ ರಾಜೀನಾಮೆ ಪ‍ರ್ವ​

Post Comments (+)