ರಫೇಲ್‌ ಅಕ್ರಮ ಖಚಿತ: ರಾಹುಲ್‌ ಪುನರುಚ್ಚಾರ

7

ರಫೇಲ್‌ ಅಕ್ರಮ ಖಚಿತ: ರಾಹುಲ್‌ ಪುನರುಚ್ಚಾರ

Published:
Updated:

ನವದೆಹಲಿ: ರಫೇಲ್‌ ಒಪ್ಪಂದದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಕೂಡ ಈ ವಿಚಾರದ ಹೋರಾಟದಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಹಿಮ್ಮೆಟ್ಟಿಸಿಲ್ಲ. ಈ ಒಪ್ಪಂದದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಮಹಾಲೇಖಪಾಲರ (ಸಿಎಜಿ) ವರದಿಯನ್ನು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕೂಡ ನೋಡಿಲ್ಲ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಅನಿಲ್‌ ಅಂಬಾನಿ ಅವರ ಪಾತ್ರ ಏನು ಎಂಬುದು ಬಯಲಾಗಲಿದೆ ಎಂದು ಹೇಳಿದ್ದಾರೆ. ಆದರೆ, ಈ ಆರೋಪಗಳನ್ನು ಕೇಂದ್ರ ಸರ್ಕಾರ ಮತ್ತು ಅನಿಲ್‌ ಅಂಬಾನಿ ಅವರ ಕಂಪನಿ ನಿರಾಕರಿಸಿವೆ. 

 ಇದನ್ನೂ ಓದಿ: ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಸಿಎಜಿ ವರದಿಯನ್ನು ಪಿಎಸಿಗೆ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಪಿಎಸಿಗೆ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರು. ಅವರು ಈ ವರದಿಯನ್ನು ನೋಡಿಯೇ ಇಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ರಾಹುಲ್‌ ಹೇಳಿದರು. ಇಂತಹ ಯಾವುದೇ ವರದಿ ಬಂದಿಲ್ಲ ಎಂದು ಜತೆಗಿದ್ದ ಖರ್ಗೆಯವರೂ ತಿಳಿಸಿದರು. 

ಇದನ್ನೂ ಓದಿ: ರಫೇಲ್ ಒಪ್ಪಂದ: ಕೇಂದ್ರಕ್ಕೆ ನಿರಾಳತೆ ಒದಗಿಸಿದ ‘ಸುಪ್ರೀಂ’ ತೀರ್ಪು

ಹಾಗಿದ್ದರೆ ಸಿಎಜಿ ವರದಿ ಎಲ್ಲಿಗೆ ಹೋಯಿತು? ಮೋದಿ ಅವರು ಬೇರೆಯೇ ಆದ ಪಿಎಸಿಯನ್ನು ರಚಿಸಿದ್ದಾರೆಯೇ ಎಂದು ರಾಹುಲ್‌ ಪ್ರಶ್ನಿಸಿದ್ದಾರೆ. 

ಜೆಪಿಸಿ ತನಿಖೆ ನಡೆಸಿ: ಕಾಂಗ್ರೆಸ್‌ ಸವಾಲು

ರಫೇಲ್‌ ಒಪ್ಪಂದದಲ್ಲಿನ ‘ಭ್ರಷ್ಟಾಚಾರ’ದ ಬಗ್ಗೆ ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವುದು ಸಾಧ್ಯವಿಲ್ಲ ಎಂಬ ತನ್ನ ನಿಲುವನ್ನು ಸುಪ್ರೀಂ ಕೋರ್ಟ್‌ ತೀರ್ಪು ‍ಪುಷ್ಟೀಕರಿಸಿದೆ ಎಂದು ಕಾಂಗ್ರೆಸ್‌ ಹೇಳಿದೆ. ಹಾಗಾಗಿ, ಈ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಸವಾಲು ಹಾಕಿದೆ.

ಯುದ್ಧ ವಿಮಾನದ ದರ ವಿವರಗಳು ಮತ್ತು ಸರ್ಕಾರಿ ಖಾತರಿಯ ಬಗ್ಗೆ ಜೆಪಿಸಿ ಮಾತ್ರ ಪರಿಶೀಲನೆ ನಡೆಸಲು ಸಾಧ್ಯ. ಅಧಿಕಾರ ಶ್ರೇಣಿಯ ಅತ್ಯುನ್ನತ ಮಟ್ಟದಲ್ಲಿಯೇ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದ ಪದರಗಳು ಜೆಪಿಸಿ ತನಿಖೆಯಲ್ಲಿ ಬಿಚ್ಚಿಕೊಳ್ಳಲಿದೆ ಎಂದು ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.  

ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರೆಬರೆ ಮಾಹಿತಿಯನ್ನು ಮಾತ್ರ ನೀಡಿದೆ. ಇದನ್ನು ಯಾರೊಬ್ಬರೂ ಪರಿಶೀಲನೆಗೆ ಒಳಪಡಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. 

ಸಾಮಾಜಿಕ ಜಾಲ ತಾಣದಲ್ಲಿ ಪಾರದರ್ಶಕತೆಯನ್ನು ಆಗ್ರಹಿಸಿ ಅರ್ಜಿಯೊಂದನ್ನು ಕಾಂಗ್ರೆಸ್‌ ಪ್ರಕಟಿಸಿದೆ. ಇದಕ್ಕೆ ಡಿಜಿಟಲ್‌ ಸಹಿ ಮಾಡುವಂತೆ ಜನರನ್ನು ಕೋರಿದೆ. 

ಇದನ್ನೂ ಓದಿಮುಗಿಯದ ರಫೇಲ್ ಚರ್ಚೆ: ಅಂತಿಮ ದರ ನಿಗದಿ ವೇಳೆ ನಿಯಮ ಕಡೆಗಣಿಸಿದ್ರಾ ಮೋದಿ?

ರಫೇಲ್‌ ಪ್ರಕರಣಕ್ಕೆ ಸಂಬಂಧಿಸಿ ಮೂರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಯುಪಿಎ ಅವಧಿಯಲ್ಲಿ ಚರ್ಚಿಸಲಾದ ಸವಲತ್ತುಗಳು ಮಾತ್ರ ಈಗ ಖರೀದಿಸುತ್ತಿರುವ ಯುದ್ಧ ವಿಮಾನದಲ್ಲಿ ಇದೆ ಎಂದಾದರೆ ಬೆಲೆಯು ಶೇ 300ರಷ್ಟು ಏರಿಕೆಯಾಗಲು ಕಾರಣ ಏನು ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. 

ರಕ್ಷಣಾ ಸಲಕರಣೆ ತಯಾರಿಯಲ್ಲಿ 70ಕ್ಕೂ ಹೆಚ್ಚು ವರ್ಷಗಳ ಅನುಭವ ಇರುವ ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಮಾಲೀಕತ್ವದ ಈ ಕ್ಷೇತ್ರದಲ್ಲಿ ಅನುಭವವೇ ಇಲ್ಲದ ರಿಯಲನ್ಸ್‌ ಡಿಫೆನ್ಸ್‌ ಕಂಪನಿಯನ್ನು ಆಯ್ಕೆ ಮಾಡಲು ಪ್ರಧಾನಿ ಮುತುವರ್ಜಿ ವಹಿಸಿದ್ದು ಯಾಕೆ ಎಂಬುದು ಕಾಂಗ್ರೆಸ್‌ನ ಎರಡನೇ ಪ್ರಶ್ನೆಯಾಗಿದೆ. 

ರಕ್ಷಣಾ ಖರೀದಿಯ ಮಾರ್ಗದರ್ಶಿ ಸೂತ್ರಗಳನ್ನು ಪ್ರಧಾನಿ ಮೋದಿ ಅವರು ಉಲ್ಲಂಘಿಸಿದ್ದು ಯಾಕೆ ಮತ್ತು ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನು ಆಯ್ಕೆ ಮಾಡುವಂತೆ ಪೂರೈಕೆದಾರ ಕಂಪನಿ ಮೇಲೆ ಒತ್ತಡ ಹೇರಿದ್ದು ಯಾಕೆ ಎಂದು ಕೂಡ ಕಾಂಗ್ರೆಸ್‌ ಪ್ರಶ್ನಿಸಿದೆ. 

***

ಬರಹ ಇಷ್ಟವಾಯಿತೆ?

 • 21

  Happy
 • 1

  Amused
 • 0

  Sad
 • 2

  Frustrated
 • 9

  Angry

Comments:

0 comments

Write the first review for this !