ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾತ್ಯಕ್ಷಿಕೆ ಸಲ್ಲಿಸಲು ಸೂಚನೆ: ಸೇನಾ ಮುಖ್ಯಸ್ಥರ ಜೊತೆ ರಾಜನಾಥ್ ಚರ್ಚೆ

Last Updated 1 ಜೂನ್ 2019, 20:43 IST
ಅಕ್ಷರ ಗಾತ್ರ

ನವದೆಹಲಿ: ಭೂ ಸೇನೆ, ವಾಯುಪಡೆ ಮತ್ತು ನೌಕಾದಳದ ಒಟ್ಟಾರೆ ಕಾರ್ಯ ಚಟುವಟಿಕೆ ಮತ್ತು ಅವುಗಳ ಮುಂದಿರುವ ಸವಾಲುಗಳ ಕುರಿತು ಪ್ರಾತ್ಯಕ್ಷಿಕೆ ಮಂಡಿಸುವಂತೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಿದರು.

ರಕ್ಷಣಾ ಸಚಿವರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ ಬಳಿಕ, ಭೂ ಸೇನೆ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್ ಬಿ.ಎಸ್. ಧನೋಆ, ನೌಕಾಪಡೆಯ ನೂತನ ಮುಖ್ಯಸ್ಥ ಕರಂಬಿರ್‌ ಸಿಂಗ್ ಅವರ ಜೊತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಪ್ರತ್ಯೇಕವಾಗಿ ಪ್ರಾತ್ಯಕ್ಷಿಕೆ ಸಿದ್ಧಪಡಿಸುವಂತೆಸಚಿವಾಲಯದ ಇತರ ವಿಭಾಗಗಳಿಗೂ ಅವರು ಸೂಚನೆ ನೀಡಿದ್ದಾರೆ. ಸೇನೆಯ ವಿಭಾಗಗಳು ನೀಡಿದ ಪ್ರಾತ್ಯಕ್ಷಿಕೆಗಳ ಬಗ್ಗೆ ಸದ್ಯದಲ್ಲೇ ನಡೆಯಲಿರುವ ಉನ್ನತ ಮಟ್ಟದಸಭೆಯಲ್ಲಿ ಪರಾಮರ್ಶೆ ನಡೆಸಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್‌ ನಾಯಕ್‌, ರಕ್ಷಣಾ ಇಲಾಖೆಯ ಕಾರ್ಯದರ್ಶಿ ಸಂಜಯ್‌ ಮಿತ್ರಾ ಹಾಗೂ ಹಲವು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಭೆಗೂ ಮುನ್ನ ಸಿಂಗ್‌ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.

ಸೇನೆಯ ಮೂರೂ ವಿಭಾಗಗಳನ್ನು ಆಧುನೀಕರಣಗೊಳಿಸುವ ಮೂಲಕ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿರುವಂತೆ ಅವುಗಳನ್ನು ಸಜ್ಜುಗೊಳಿಸುವ ಸವಾಲು ಹೊಸ ಸಚಿವರ ಮುಂದಿದೆ. ಚೀನಾ ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ಸಿಂಗ್‌ ಎದುರಿರುವ ಇನ್ನೊಂದು ಸವಾಲು. ಪಾಕ್‌ ಗಡಿಭಾಗದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಹಿಂದಿನ ಸರ್ಕಾರದ ನೀತಿಯನ್ನೇ ಸಿಂಗ್‌ ಮುಂದುವರಿಸಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT