ಹಾಳಾದ ₹2000 ನೋಟು ಬದಲಾವಣೆ ಬವಣೆ: ಕಾನೂನು ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ

7

ಹಾಳಾದ ₹2000 ನೋಟು ಬದಲಾವಣೆ ಬವಣೆ: ಕಾನೂನು ತಿದ್ದುಪಡಿ ಪ್ರಕ್ರಿಯೆಗೆ ಚಾಲನೆ

Published:
Updated:

ನವದೆಹಲಿ: ನಿಮ್ಮಲ್ಲಿರುವ ₹200 ಮತ್ತು ₹2,000 ಮುಖಬೆಲೆಯ ನೋಟು ಹರಿದಿದ್ದರೆ, ಬಣ್ಣಗೆಟ್ಟಿದ್ದರೆ, ಕೊಳಕಾಗಿದ್ದರೆ, ಶಾಯಿಯ ಕಲೆ ಇದ್ದರೆ ಅಂತಹ ನೋಟನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಬ್ಯಾಂಕಿಗೆ ಹೋಗಿ ಬದಲಾಯಿಸಿಕೊಳ್ಳೋಣ ಎಂದರೆ ಬ್ಯಾಂಕಿನವರೂ ತೆಗೆದುಕೊಳ್ಳುವುದಿಲ್ಲ. ₹200 ಮತ್ತು ₹2,000 ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಡುವುದಕ್ಕೆ ನಿಯಮದಲ್ಲಿ ಅವಕಾಶವೇ ಇಲ್ಲ.

5, 10, 20, 50, 100, 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳು ಹಾಳಾಗಿದ್ದರೆ ಬದಲಾಯಿಸಿಕೊಡುವುದಕ್ಕೆ ಕಾನೂನು ಇದೆ. ಆದರೆ, ನೋಟು ರದ್ದತಿಯ ಬಳಿಕ ಚಲಾವಣೆಗೆ ತರಲಾದ ₹200 ಮತ್ತು ₹2,000 ಮುಖಬೆಲೆಯ ನೋಟುಗಳ ಪ್ರಸ್ತಾವ ಈ ಕಾನೂನಿನಲ್ಲಿ ಇಲ್ಲ. ಹಾಗಾಗಿ ಕಾನೂನಿಗೆ ತಿದ್ದುಪಡಿ ತರುವ ಪ್ರಕ್ರಿಯೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಆರಂಭಿಸಿವೆ. 

ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ಆರಂಭಿಸುವುದಕ್ಕೆ ಹಣಕಾಸು ಸಚಿವಾಲಯವು ಆರ್‌ಬಿಐಗೆ ಒಪ್ಪಿಗೆ ಕೊಟ್ಟಿದೆ. ಈಗ ಅದಕ್ಕೆ ಆರ್‌ಬಿಐ ಆಡಳಿತ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕು. 

ಈ ತಿದ್ದುಪಡಿ ಜಾರಿಗೆ ಬಂದರೆ ಬ್ಯಾಂಕುಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ. 

ಆರ್‌ಬಿಐ ಸೂಚನೆಗೆ ಕಾಯ್ದೆ ಬಲವಿಲ್ಲ:

₹200 ಮತ್ತು ₹2,000 ಮುಖಬೆಲೆಯ ನೋಟುಗಳು ಬಣ್ಣ ಕಳೆದುಕೊಳ್ಳುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇಂತಹ ನೋಟು ಬದಲಾಯಿಸಿಕೊಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ ಕೊಟ್ಟಿತ್ತು. ಆದರೆ, ಹೀಗೆ ಬದಲಾಯಿಸಿ ಕೊಡುವುದಕ್ಕೆ ಕಾಯ್ದೆಯ ಬೆಂಬಲ ಇಲ್ಲದಿದ್ದುದರಿಂದ ವಿನಿಮಯಕ್ಕೆ ಬ್ಯಾಂಕುಗಳು ಮನಸ್ಸು ಮಾಡುತ್ತಿಲ್ಲ.

* ಕಾನೂನು ಯಾವುದು: ಭಾರತೀಯ ರಿಸರ್ವ್‌ ಬ್ಯಾಂಕ್‌ (ನೋಟು ವಿನಿಮಯ) ಕಾಯ್ದೆ, 2009

* ಹಾಳಾದ ನೋಟಿನ ವ್ಯಾಖ್ಯಾನ: ಸಾಮಾನ್ಯ ಬಳಕೆಯಿಂದಾಗಿ ಜೀರ್ಣಗೊಂಡ ನೋಟುಗಳನ್ನು ಹಾಳಾದ ನೋಟುಗಳು ಎಂದು ಪರಿಗಣಿಸಲಾಗುತ್ತದೆ. ಎರಡು ತುಂಡಾಗಿ ಅಂಟಿಸಲಾದ ನೋಟುಗಳೂ ಈ ವ್ಯಾಪ್ತಿಗೆ ಬರುತ್ತವೆ. ಆದರೆ ಎರಡೂ ತುಂಡುಗಳು ಒಂದೇ ನೋಟಿನದ್ದಾಗಿರಬೇಕು. ಯಾವುದೇ ಅಗತ್ಯ ಅಂಶಗಳು ನಾಶವಾಗಿ ಹೋಗಿರಬಾರದು

* ಎಲ್ಲ ಬ್ಯಾಂಕುಗಳು ಹಾಳಾದ ನೋಟುಗಳನ್ನು ಗ್ರಾಹಕರಿಗೆ ವಿನಿಮಯ ಮಾಡಿಕೊಡಲೇಬೇಕು

* ಗರಿಷ್ಠ 20 ಅಥವಾ ₹5,000 ಮೌಲ್ಯದ ವರೆಗಿನ ನೋಟುಗಳ ವಿನಿಮಯವನ್ನು ಅದೇ ದಿನ ಮಾಡಿಕೊಡಬೇಕು. ಅದಕ್ಕೆ ಶುಲ್ಕ ಇಲ್ಲ. ಆದರೆ 20ಕ್ಕಿಂತ ಹೆಚ್ಚು ನೋಟುಗಳಿದ್ದರೆ ಅಥವಾ ಮೌಲ್ಯ ₹5,000ಕ್ಕಿಂತ ಹೆಚ್ಚಿದ್ದರೆ ಅದೇ ದಿನ ವಿನಿಮಯ ಮಾಡಿಕೊಡಬೇಕೆಂದಿಲ್ಲ. ಜತೆಗೆ ಅದಕ್ಕೆ ಶುಲ್ಕವನ್ನೂ ವಿಧಿಸಬಹುದು

 

 

 

ಬರಹ ಇಷ್ಟವಾಯಿತೆ?

 • 30

  Happy
 • 4

  Amused
 • 1

  Sad
 • 2

  Frustrated
 • 3

  Angry

Comments:

0 comments

Write the first review for this !