ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಹಿಮ ಕರಗಿದರೂ ಜನರ ಕೋಪ ತಣಿದಿಲ್ಲ

ಗಣರಾಜ್ಯೋತ್ಸವ ಆಚರಣೆ ಮಾಡದ ಜನ; ಕಾಣದ ಸಂಭ್ರಮ
Last Updated 27 ಜನವರಿ 2020, 10:49 IST
ಅಕ್ಷರ ಗಾತ್ರ

ಶ್ರೀನಗರ: ಇಡೀ ದೇಶವೇ ಭಾನುವಾರ (ಜ.26) 71ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದರೆ, ಕಣಿವೆ ರಾಜ್ಯದಲ್ಲಿ ಮಾತ್ರ ನೀರಾವ ಮೌನ ಆವರಿಸಿತ್ತು.ಸಂವಿಧಾನದ 370ನೇ ಕಲಂ ರದ್ದುಗೊಳಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಮೊದಲ ಬಾರಿಗೆ ನಡೆದ ಗಣರಾಜ್ಯೋತ್ಸವದಲ್ಲಿ ಜನರು ಪಾಲ್ಗೊಳ್ಳದೇ ದೂರ ಉಳಿದಿದ್ದರು. ಇಡೀ ಕಣಿವೆಯ 10 ಜಿಲ್ಲೆಗಳಲ್ಲಿ ಯಾವುದೇ ಹಬ್ಬದ ಸಂಭ್ರಮ ಕಂಡು ಬರಲಿಲ್ಲ.

ಶ್ರೀನಗರದಲ್ಲಿ ಮುಂಜಾನೆಯಿಂದಲೇ ಯಾವುದೇ ಖಾಸಗಿ ವಾಹನಗಳು ಸಹ ರಸ್ತೆಗೆ ಇಳಿಯದ ಪರಿಣಾಮ ಬಹುತೇಕ ರಸ್ತೆಗಳು ಬಿಕೊ ಎನ್ನುತ್ತಿದ್ದವು. ದ್ವಿಚಕ್ರ ವಾಹನಗಳ ಹಾಗೂ ಜನರ ಓಡಾಟವೂ ವಿರಳವಾಗಿತ್ತು. ಕೈಗಾಡಿ ಹೋಟೆಲ್‌ ಸೇರಿದಂತೆ ದೊಡ್ಡ ಪ್ರಮಾಣದ ಹೋಟೆಲ್‌ಗಳು ಸಹ ರಾತ್ರಿವರೆಗೂ ಸಂಪೂರ್ಣ ಮುಚ್ಚಿದ್ದವು. ಈ ಅನಿರೀಕ್ಷಿತ ಬೆಳವಣಿಗೆಯ ಅರಿವಿಲ್ಲದೇ ಇಲ್ಲಿಗೆ ಬಂದಿದ್ದ ಕೆಲ ಪ್ರವಾಸಿಗರು ಊಟಕ್ಕೆ ಪರಿತಪಿಸುತ್ತಿದ್ದ ದೃಶ್ಯ ಕಂಡು ಬಂತು.

ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಶೇರ್‌–ಇ–ಕಾಶ್ಮೀರ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 71ನೇ ಗಣರಾಜ್ಯೋತ್ಸವಕ್ಕೆ ಇಲ್ಲಿಂದ 300 ಕಿ.ಮೀ ದೂರದ ಜಮ್ಮುವಿನಿಂದ ವಿವಿಧ ಕಲಾತಂಡಗಳನ್ನು ಕರೆತಂದು ಕಾರ್ಯಕ್ರಮ ನಡೆಸಬೇಕಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡಿರಲಿಲ್ಲ, ಕೆಲ ಆಯ್ದ ಶಾಲೆಗಳ ಮಕ್ಕಳು ಮಾತ್ರ ಭಾಗವಹಿಸಿದ್ದರು. ಆದರೆ ಇಡೀ ನಗರವೇ ಅಘೋಷಿತ ಬಂದ್‌ ಗೋಚರಿಸಿತು. ನಗರದ ಎಲ್ಲೂ ತ್ರಿವರ್ಣ ಧ್ವಜ ಹಾರಾಡುವುದಾಗಲಿ, ಧ್ವಜ ಹಿಡಿದು ಓಡಾಡುವುದಾಗಲಿ ಕಂಡು ಬರಲಿಲ್ಲ.

‘ಕೇಂದ್ರ ಸರ್ಕಾರದ ಅಧೀನದ ಕೇಂದ್ರಿಯ ವಿದ್ಯಾಲಯ, ನವೋದಯ, ಸೈನಿಕ ಶಾಲೆ ಹಾಗೂ ದೆಹಲಿ ಪಬ್ಲಿಕ್ ಶಾಲೆಗಳಲ್ಲಿ ಮಾತ್ರ ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಅಧೀನದ ಯಾವುದೇ ಶಾಲೆಯಲ್ಲಿ ಆಚರಣೆ ಮಾಡಲಿಲ್ಲ. ಇದರ ಅರ್ಥ ನಾವು ಈ ದೇಶದ ಭಾಗ ಎಂದು ಇಲ್ಲಿನ ಜನ ಇನ್ನೂ ಒಪ್ಪಿಕೊಂಡಿಲ್ಲ ಹಾಗೂ ಒಪ್ಪಿಕೊಳ್ಳಲು ಸಿದ್ಧರಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ನವೋದಯ ಶಾಲೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮನ್‌ ಕೀ ಬಾತ್‌ನಲ್ಲಿ ,‘ದ್ವೇಷ ಮರೆತು, ಸಹಬಾಳ್ವೆ ಪ್ರೀತಿ, ಶಾಂತಿಯಿಂದ ದೇಶ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರೂ ಕಣಿವೆ ರಾಜ್ಯದ ಜನ ಇದಕ್ಕೆ ಕಿವಿಗೊಡದೇ 370 ಕಲಂ ರದ್ದುಪಡಿಸುವುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಅನೌಪಚಾರಿಕವಾಗಿ ತಿಳಿಸಿದರು.

ಹೋಟೆಲ್‌ ಮುಚ್ಚಿದ್ದ ಪರಿಣಾಮ ಇಲ್ಲಿನ ಖೈಬರ್ ಆಸ್ಪತ್ರೆಯ ಕ್ಯಾಂಟೀನ್‌ನಲ್ಲಿ ಬೆಳಗಿನ ಉಪಹಾರ ಸವಿದೆವು. ಹೊರಗೆ ಎಲ್ಲೂ ಹೋಟೆಲ್‌ ತೆರೆಯದಿದ್ದರಿಂದ ನಮಗೆ ಊಟಕ್ಕೆ ಸಮಸ್ಯೆಯಾಯಿತು ಎಂದು ಐದಾರು ಮಂದಿಯಿದ್ದ ಪ್ರವಾಸಿಗರ ತಂಡದ ಸದಸ್ಯರೊಬ್ಬರು ತಿಳಿಸಿದರು.

ಮುನ್ನಚ್ಚರಿಕೆ ಕ್ರಮವಾಗಿ ಕಣಿವೆಯ 10 ಜಿಲ್ಲೆಗಳಲ್ಲಿ ಸೆಕ್ಷನ್‌ 144ಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಕಣಿವೆಯ ವ್ಯಾಪ್ತಿಯಲ್ಲಿ ಮಧ್ಯಾಹ್ನ 3ರವರೆಗೆ ಲ್ಯಾಂಡ್‌ಲೈನ್‌ ಸಂಪರ್ಕ ಹೊರತು ಪಡಿಸಿ ಎಲ್ಲ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಮೊಬೈಲ್‌ಗಳ ಕರೆ ಹಾಗೂ ಇಂಟರ್‌ ನೆಟ್‌ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಆಸ್ಪತ್ರೆ ಹಾಗೂ ಮೆಡಿಕಲ್‌ಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟು ಬಂದ್‌ ಆಗಿದ್ದವು. ಪ್ರತಿ ಭಾನುವಾರ ನಡೆಯುವ ಸಂಡೇ ಮಾರ್ಕೆಟ್‌ನಲ್ಲೂ ಕೂಡ ಯಾವುದೇ ವಹಿವಾಟು ಕೂಡ ನಡೆಯಲಿಲ್ಲ.
ಸೋಮವಾರ(ಜ.27) ಎಂದಿನಂತೆ ತಮ್ಮ ಚಟುವಟಿಕೆಗಳು ಜನರು ನಿರತರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT