ಶನಿವಾರ, ಫೆಬ್ರವರಿ 29, 2020
19 °C
ಸಿಎಎ ವಿಚಾರದಲ್ಲಿ ರಾಜ್ಯ ಸರ್ಕಾರ–ರಾಜ್ಯಪಾಲರ ನಡುವೆ ಜಟಾಪಟಿ

ಸಿಎಎ ವಿರುದ್ಧದ ನಿರ್ಣಯ ಪ್ರಶ್ನಿಸಿದ್ದ ಕೇರಳದ ರಾಜ್ಯಪಾಲರ ವಿರುದ್ಧವೇ ನಿರ್ಣಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ/ಕೊಚ್ಚಿ: ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ) ವಿಚಾರದಲ್ಲಿ ಕೇರಳ ವಿಧಾನಸಭೆ ಹಾಗೂ ರಾಜ್ಯಪಾಲ ಆರಿಫ್‌ ಮೊಹ
ಮ್ಮದ್‌ ಖಾನ್‌ ನಡುವೆ ಜಟಾಪಟಿ ಪ್ರಾರಂಭವಾಗಿದೆ.  

‘ಕೇರಳ ವಿಧಾನಸಭೆಯು ಸಿಎಎ ವಿರುದ್ಧ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿರುವ ರಾಜ್ಯಪಾಲರ ವಿರುದ್ಧ ನಿರ್ಣಯ ಮಂಡಿಸಲು ಅನುಮತಿ ಕೋರಿ ಸಭಾಧ್ಯಕ್ಷರಿಗೆ ನೋಟಿಸ್ ನೀಡಿರುವುದಾಗಿ’ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಶನಿವಾರ ತಿಳಿಸಿದರು. 

‘ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ‘ಉಲ್ಲಂಘಿಸಿರುವ’ ರಾಜ್ಯಪಾಲರು, ಶಾಸನ ಸಭೆಯ ನಿರ್ಣಯವನ್ನು ‘ಬಹಿರಂಗವಾಗಿ ಪ್ರಶ್ನಿಸಿದ್ದಾರೆ’. ಹೀಗಾಗಿ ಅವರನ್ನು ವಾಪಸ್‌ ಕಳುಹಿಸಬೇಕು ಎಂದು ರಮೇಶ್‌ ಹೇಳಿದರು. ‘ಬಿಜೆಪಿ ಶಾಸಕರೂ ನಿರ್ಣಯದ ವಿರುದ್ಧವಾಗಿ  ಮತ ಹಾಕಿಲ್ಲ. ಆದರೆ, ರಾಜ್ಯಪಾಲರು ಈ ನಿರ್ಣಯವು ಅಸಂವಿಧಾನಿಕ ಎಂದು ಬಹಿರಂಗವಾದ ಹೇಳಿಕೆ ನೀಡುತ್ತಿದ್ದಾರೆ’ ಎಂದರು. 

ನಿರ್ಣಯಕ್ಕೆ ಸ್ವಾಗತ: ಕಾಂಗ್ರೆಸ್‌ ನಿರ್ಧಾರವನ್ನು ಸ್ವಾಗತಿಸಿರುವ ಖಾನ್‌, ‘ನಾನು ಸಂವಿಧಾನದ ನಿಯಮದಂತೆ ನಡೆಯುತ್ತಿದ್ದೇನೆ’ ಎಂದಿದ್ದಾರೆ. ‘ಎಲ್ಲರಿಗೂ ತನ್ನ ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಮುಕ್ತವಾಗಿದ್ದಾರೆ. ನಾನು ಸಾಂವಿಧಾನಿಕವಾಗಿ ರಾಜ್ಯದ ಮುಖ್ಯಸ್ಥ. ಸರ್ಕಾರಕ್ಕೆ ಸಲಹೆ ನೀಡುವುದು, ಎಚ್ಚರಿಸುವುದು, ಪ್ರೋತ್ಸಾಹಿಸುವುದು ನನ್ನ ಕರ್ತವ್ಯ. ನನಗೆ ಮಾಹಿತಿ ನೀಡದೇ ಸಿಎಎ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವು ದೂರು ದಾಖಲಿಸಿರುವುದು ಸರಿಯಲ್ಲ’ ಎಂದು ಮತ್ತೊಮ್ಮೆ ಪ್ರತಿಪಾದಿಸಿದರು.   

ಸಿಎಎ ವಿರುದ್ಧ ನಿರ್ಣಯ– ಜೈಪುರ ವರದಿ:  ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಜಸ್ಥಾನ ವಿಧಾನಸಭೆಯು ಶನಿವಾರ ನಿರ್ಣಯ ಅಂಗೀಕರಿಸಿದೆ. ಆಡಳಿತರೂಡ ಕಾಂಗ್ರೆಸ್‌ನ ಈ ನಿರ್ಧಾರಕ್ಕೆ ವಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ರಾಜಸ್ಥಾನ,  ಸಿಎಎ ವಿರುದ್ಧ ನಿರ್ಣಯ ಮಂಡಿಸಿದ ಕಾಂಗ್ರೆಸ್‌ ಆಡಳಿತದ ಎರಡನೇ ರಾಜ್ಯವಾಗಿದ್ದು, ಪಂಜಾಬ್‌ನಲ್ಲೂ ಇದೇ ರೀತಿ ನಿರ್ಣಯ ಮಂಡಿಸಲಾಗಿತ್ತು. ತೆಲಂಗಾಣ ಸರ್ಕಾರವೂ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿದೆ.

ಸಿಎಎ ವಿರೋಧಿಸಿ ಮೆಹೆಂದಿ: ಟಿಎಂಸಿ ಪಕ್ಷದ ಮಹಿಳಾ ಕಾರ್ಯಕರ್ತರು ಕೋಲ್ಕತ್ತದಲ್ಲಿ ತಮ್ಮ ಕೈಗಳಲ್ಲಿ ‘ನೊ ಸಿಎಎ’ ಹಾಗೂ ‘ನೊ ಎನ್‌ಆರ್‌ಸಿ’ ಎಂದು ಮೆಹೆಂದಿ ಹಾಕಿಸಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

‘ಮುಸ್ಲಿಂ ಅಕ್ರಮ ವಲಸಿಗರನ್ನು ಹೊರದಬ್ಬಿ’

ಮುಂಬೈ: ಅಕ್ರಮ ವಲಸಿಗರ ಉಚ್ಚಾಟನೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಬೆಂಬಲ ನೀಡಿದ ಎರಡು ದಿನಗಳ ನಂತರ ಶಿವಸೇನಾವೂ ಈ ವಿಚಾರಕ್ಕೆ ಸಮ್ಮತಿ ಸೂಚಿಸಿದೆ. 

‘ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಸ್ಲಿಂ ಅಕ್ರಮ ವಲಸಿಗರನ್ನು ಭಾರತದಿಂದ ಹೊರಹಾಕಬೇಕು. ಈ ಕುರಿತು ಯಾವುದೇ ಗೊಂದಲ ಬೇಡ. ಆದರೆ ಇದಕ್ಕಾಗಿ ಒಂದು ಪಕ್ಷವು ತನ್ನ ಧ್ವಜವನ್ನು ಬದಲಾಯಿಸುತ್ತಿರುವುದು ಆಶ್ಚರ್ಯಕರ. ಇದು ಆ ‍ಪಕ್ಷದ ಅಸ್ಪಷ್ಟತೆಯನ್ನು ತಿಳಿಸುತ್ತದೆ’ ಎಂದು ಎಂಎನ್‌ಎಸ್‌ ವಿರುದ್ಧ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಶಿವಸೇನಾ ಉಲ್ಲೇಖಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು