ಶನಿವಾರ, ಆಗಸ್ಟ್ 20, 2022
21 °C
ಲಾಕ್‌ಡೌನ್‌ ಸಡಿಲಿಕೆ ಬೆನ್ನಲೇ ಚುನಾವಣೆಯ ಕಾವು

ಬಿಹಾರ | ಸಿಎಂ ನಿತೀಶ್ ಕುಮಾರ್ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Tejashwi Yadav

ಪಟ್ನಾ: ‘ನನ್ನ ವಿರುದ್ಧ ಆರೋಪ ಮಾಡುವುದರಿಂದ ಬಿಹಾರಕ್ಕೆ ಏನೂ ದೊರಕದು. ನಿಜವಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ’ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉದ್ದೇಶಿಸಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನ್ನ ಮೇಲೆ ವೈಯಕ್ತಿಕ ಆರೋಪ ಮಾಡುವುದರಿಂದ ಬಿಹಾರಕ್ಕೆ ಏನೂ ಪ್ರಯೋಜನವಿಲ್ಲ. ಅದರ ಬದಲು ನಿರುದ್ಯೋಗ, ಕಾನೂನು-ಸುವ್ಯವಸ್ಥೆ, ವಲಸೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಮಾತನಾಡಿ. ಕಳೆದ 30 ವರ್ಷಗಳಿಂದ ನಿಮ್ಮೆಲ್ಲರಿಂದ ಈ ರೀತಿಯ ಅವಹೇಳನಕಾರಿ ಹಾಗೂ ಕೆಂಡಕಾರುವ ಭಾಷಣಗಳನ್ನು ನಾವು ಕೇಳಿದ್ದೇವೆ. ಆದರೆ, ನೀವೇಕೆ ಕೊರೊನಾ ಪ್ರಕರಣಗಳು, ಆರೋಗ್ಯ ನಿರ್ವಹಣೆ, ನಿರುದ್ಯೋಗ, ಕ್ವಾರಂಟೈನ್‌ ಸೆಂಟರ್‌ಗಳು, ವಲಸೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ಜನರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು, ಮಗ ತೇಜ್ ಪ್ರತಾಪ್ ಯಾದವ್ ಅಪ್ರಾಪ್ತರಾಗಿದ್ದಾಗ ಅವರ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಕೊಂಡಿದ್ದರು ಎಂದು ಬಿಹಾರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ನೀರಜ್ ಕುಮಾರ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ತೇಜಸ್ವಿ ಯಾದವ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಲಾಕ್‌ಡೌನ್ ಹಾನಿಯನ್ನು ಬಿಜೆಪಿ ಸಂಭ್ರಮಿಸುತ್ತಿದೆ: ತೇಜಸ್ವಿ ಯಾದವ್ ಆರೋಪ

‘15 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಕೇವಲ ನನ್ನ ಕುಟುಂಬದ ವಿರುದ್ಧ ನೀವು ಟೀಕೆ ಮಾಡುತ್ತಿರುವುದು, ಆಡಳಿತಾವಧಿಯಲ್ಲಿ ಏನೂ ಮಾಡದಿರುವುದನ್ನು ಸೂಚಿಸುತ್ತದೆ. ನಿಮ್ಮ ಆಡಳಿತ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ನಿಮ್ಮ ಭ್ರಷ್ಟಾಚಾರದ ಬಣ್ಣ ಬಯಲಾಗಲಿದೆ’ ಎಂದು ಯಾದವ್ ಹೇಳಿದ್ದಾರೆ.

ಬಿಹಾರದಲ್ಲಿ ಆಕ್ಟೋಬರ್‌ ಅಥವಾ ನವೆಂಬರ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ, ಲಾಕ್‌ಡೌನ್‌ ಸಡಿಲಿಕೆ ಬೆನ್ನಲೇ ಚುನಾವಣೆಯ ಕಾವು ತೀವ್ರಗೊಂಡಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ಬಿಹಾರದಲ್ಲಿ ಭಾನುವಾರ ನಡೆಸಲಿರುವ ಡಿಜಿಟಲ್ ರ‍್ಯಾಲಿಯನ್ನು ವಿರೋಧಿಸಿ ಆರ್‌ಜೆಡಿ ಕಾರ್ಯಕರ್ತರು ಈಗಾಗಲೇ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿ ಸಾರ್ವಜನಿಕ, ಬಹಿರಂಗ ಸಭೆಗಳು ನಡೆಯದ ಕಾರಣ ವರ್ಚುವಲ್‌ ವಿಡಿಯೊ ಕಾನ್ಫರೆನ್ಸ್‌ಗಳನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಬಿಹಾರ | ಚುನಾವಣೆ ಭರವಸೆ: ಎಲ್ಲಾ ಕೃಷಿ ಭೂಮಿಗೂ ನೀರಾವರಿ –ನಿತೀಶ್‌ ಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು