‘ಮ್ಯಾನ್ಮಾರ್‌ಗೆ ಹಿಂತಿರುಗಲಾರೆವು’, ರೋಹಿಂಗ್ಯಾ ನಿರಾಶ್ರಿತರ ಅಳಲು

7

‘ಮ್ಯಾನ್ಮಾರ್‌ಗೆ ಹಿಂತಿರುಗಲಾರೆವು’, ರೋಹಿಂಗ್ಯಾ ನಿರಾಶ್ರಿತರ ಅಳಲು

Published:
Updated:

ನವದೆಹಲಿ: ದೇಶದ ಹಲವು ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸ್ಲೀಮರನ್ನು ಮ್ಯಾನ್ಮಾರ್‌ಗೆ ಗಡಿಪಾರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿರಾಶ್ರಿತರು ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಶುಕ್ರವಾರ ಏಳು ಜನ ರೋಹಿಂಗ್ಯಾಗಳನ್ನು ಗಡಿಪಾರು ಮಾಡಿತ್ತು. ಇದಾದ ನಂತರ ಹಲವರು ತಮ್ಮ ದೇಶಕ್ಕೆ ಹಿಂದಿರುಗಲು ನಿರಾಕರಿಸಿದ್ದಾರೆ. ‘ತಾಯ‌್ನಾಡಿನಲ್ಲಿ ಶಾಂತಿ ಸ್ಥಾಪನೆಯಾಗುವವರೆಗೂ ಅಲ್ಲಿಗೆ ತೆರಳುವುದಿಲ್ಲ’ ಎಂದು ಹೇಳಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರೋಹಿಂಗ್ಯಾ ನಿರಾಶ್ರಿತ ಮೊಹಮ್ಮದ್‌ ಫಾರೂಕ್‌, ‘2012 ರಿಂದ ನಾನು ಇಲ್ಲಿ ವಾಸಿಸುತ್ತಿದ್ದೇನೆ. ನಮ್ಮನ್ನು ಇಲ್ಲಿಯೇ ಬದುಕಲು ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ದೇಶದಲ್ಲಿ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಾವು ದುರಾಸೆಯಿಂದ ದೇಶ ಬಿಟ್ಟವರಲ್ಲ. ಯಾರೊಬ್ಬರೂ ತಮ್ಮ ಸ್ವಂತ ದೇಶವನ್ನು ಬಿಡಲು ಬಯಸುವುದಿಲ್ಲ’ ಅಂದು ಅಳಲು ತೋಡಿಕೊಂಡರು.

 ಜೊತೆಗೆ ಇತ್ತೀಚೆಗೆ ಗಡಿಪಾರು ಆಗಿರುವ ಏಳು ಜನರನ್ನು ಶೀಘ್ರದಲ್ಲೇ ಕೊಲ್ಲಲಾಗುವುದು ಎಂದೂ ಪ್ರತಿಪಾದಿಸಿದರು.

‘ನಮ್ಮ ದಾಖಲೆಗಳು ವಿಶ್ವಸಂಸ್ಥೆ ಮತ್ತು ಮ್ಯಾನ್ಮಾರ್‌ ಅಧಿಕಾರಿಗಳ ಬಳಿ ಇವೆ. ಪೊಲೀಸರು ಬರ್ಮೀಸ್ ಭಾಷೆಯಲ್ಲಿದ್ದ ಅರ್ಜಿಯೊಂದನ್ನು ನೀಡಿ ಭರ್ತಿ ಮಾಡುವಂತೆ ಸೂಚಿಸಿದ್ದರು. ನಾವು ನಿರಾಕರಿಸಿದ್ದೆವು. ಸದ್ಯ ಗಡಿಪಾರು ಆಗಿರುವ ಏಳು ಜನರು ಶೀಘ್ರದಲ್ಲೇ ಹತ್ಯೆಯಾಗಲಿದ್ದಾರೆ’ ಎಂದು ದೃಢವಾಗಿ ಹೇಳಿದರು.

ಇದೇ ರೀತಿಯ ಆತಂಕ ವ್ಯಕ್ತಪಡಿಸಿದ ಮತ್ತೊಬ್ಬ ನಿರಾಶ್ರಿತ ಹರೂನ್‌, ‘ನಾವು 2005 ರಿಂದಲೂ ಇಲ್ಲಿ ವಾಸಿಸುತ್ತಿದ್ದೇವೆ. ದೀರ್ಘಾವಧಿಯ ವೀಸಾ ಒದಗಿಸಿರುವುದನ್ನು ಬಿಟ್ಟರೆ ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ. 2017ರಲ್ಲಿ ವೀಸಾ ನವೀಕರಿಸುವುದನ್ನೂ ನಿಲ್ಲಿಸಿದ್ದಾರೆ. ಈ ಹಿಂದೆ ಐದು ಬಾರಿ ನವೀಕರಣ ಮಾಡಿಕೊಡಲಾಗಿತ್ತು. ನಮ್ಮ ದೇಶದಲ್ಲಿ ಇನ್ನೂ ಶಾಂತಿ ನೆಲೆಸಿಲ್ಲ. ಮನೆಗಳೂ ಈಗಲೂ ಹೊತ್ತಿಉರಿಯುತ್ತಿವೆ’ ಎಂದರು.

‘ಬರ್ಮಾ(ಮ್ಯಾನ್ಮಾರ್‌) ರಾಯಭಾರ ಅಧಿಕಾರಿಗಳು ಕಳುಹಿಸಿದ್ದ ಅರ್ಜಿಯನ್ನು ಕೆಲವರು ಭರ್ತಿ ಮಾಡಿದ್ದಾರೆ. ಭಾರತ ಸರ್ಕಾರದಿಂದ ಬರುವ ಆದೇಶವನ್ನು ನಾವು ಪಾಲಿಸುತ್ತೇವೆ. ಆದರೆ, ಬರ್ಮೀಸ್ ಭಾಷೆಯಲ್ಲಿರುವ ಅರ್ಜಿಯನ್ನು ನಾವು ತುಂಬಲಾರೆವು. ಅದನ್ನು ಭರ್ತಿ ಮಾಡಿದರೆ ನಾವು ಬರ್ಮಾಗೆ ತೆರಳಲು ಒಪ್ಪಿಗೆ ನೀಡಿದಂತೆ. ನಾವು ಮ್ಯಾನ್ಮಾರ್‌ಗೆ ಮರಳಲು ಬಯಸುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ರಾಖೈನ್‌ ಪ್ರಾಂತ್ಯದಲ್ಲಿ 2017ರ ಆಗಸ್ಟ್‌ ವೇಳೆ ಮ್ಯಾನ್ಮಾರ್‌ ಸೇನೆ ನಡೆಸಿದ ಹಿಂಸಾ ಕಾರ್ಯಾಚರಣೆ ವೇಳೆ ಸುಮಾರು 6.50 ಲಕ್ಷ ರೋಹಿಂಗ್ಯಾ ಮುಸ್ಲಿಮರು ದೇಶದಿಂದ ಪಲಾಯನ ಮಾಡಿದ್ದಾರೆ. ದೇಶ ತೊರೆದ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾಗಳು ಭಾರತ, ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ಉಳಿದುಕೊಂಡಿದ್ದಾರೆ. ಹೀಗಾಗಿ ಮ್ಯಾನ್ಮಾರ್‌ ರಕ್ಷಣಾ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 2

  Sad
 • 2

  Frustrated
 • 11

  Angry

Comments:

0 comments

Write the first review for this !