ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಸೋಲಿನ ಜತೆ ಅತೃಪ್ತಿಯ ಬರೆ

Last Updated 9 ಆಗಸ್ಟ್ 2018, 18:43 IST
ಅಕ್ಷರ ಗಾತ್ರ

ನವದೆಹಲಿ : ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ, ಜೆಡಿಯುನ ಹರಿವಂಶ್‌ ನಾರಾಯಣ್‌ ಸಿಂಗ್‌ ಗೆದ್ದಿದ್ದಾರೆ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ಗೆ ಸೋಲಾಗಿದೆ. ಸೋಲಿನ ಜತೆಗೆ ಕಾಂಗ್ರೆಸ್‌ ಪಕ್ಷವು ಟೀಕೆ ಮತ್ತು ಅತೃಪ್ತಿಯನ್ನೂ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಉಪಸಭಾಪತಿ ಸ್ಥಾನಕ್ಕೆ ಬೇರೆ ಯಾವುದಾದರೂ‍ಪಕ್ಷದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂಬುದು ವಿರೋಧ ಪಕ್ಷಗಳ ಗುಂಪಿನಲ್ಲಿರುವ ಬಹುತೇಕ ಪಕ್ಷಗಳ ಅಭಿಪ್ರಾಯವಾಗಿದೆ.

ಎನ್‌ಡಿಎ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಈ ಸೋಲು ಹಿನ್ನಡೆ ಅಲ್ಲ ಎಂದು ಬಿಂಬಿಸಲು ಈ ಪಕ್ಷಗಳು ಯತ್ನಿಸಿವೆ. ಹಾಗಿದ್ದರೂ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಸಮಾಧಾನದ ಮಾತುಗಳು ಸಂಸತ್ತಿನ ಪಡಸಾಲೆಯಲ್ಲಿ ಕೇಳಿ ಬಂದಿವೆ. ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಬಿಜೆಡಿ ಮತ್ತು ಟಿಆರ್‌ಎಸ್‌ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದಾರೆ. ಈ ಪಕ್ಷಗಳ ಬೆಂಬಲ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅದೇ ರೀತಿ ರಾಹುಲ್‌ ಅವರು ಎಎಪಿಯಂತಹ ಪಕ್ಷಗಳ ಮುಖಂಡರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರೆ ಹೆಚ್ಚು ಮತಗಳು ದೊರೆಯುತ್ತಿದ್ದವು ಎಂದು ವಿರೋಧ ಪಕ್ಷಗಳ ಗುಂಪಿನ ಹಲವು ಮುಖಂಡರು ಹೇಳಿದ್ದಾರೆ.

ಕಾಂಗ್ರೆಸ್‌ ಅಥವಾ ಬಿಜೆಪಿ ಎರಡರಲ್ಲಿ ಯಾವುದರ ಜತೆಯೂ ಗುರುತಿಸಿಕೊಳ್ಳಲು ಬಯಸದ ಪಕ್ಷಗಳ ಮತ ಪಡೆಯಲುಕಾಂಗ್ರೆಸ್‌ ಅಭ್ಯರ್ಥಿಯು ಕಣದಲ್ಲಿ ಇದ್ದುದರಿಂದ ಸಾಧ್ಯವಾಗಲಿಲ್ಲ ಎಂದು ಕೆಲವು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

‘ಬಿಜೆಪಿ ಮತ್ತು ಎನ್‌ಡಿಎ ವಿರುದ್ಧದ ಹೋರಾಟದಲ್ಲಿ ನಾವು ಈಗಲೂ ಒಗ್ಗಟ್ಟಾಗಿಯೇ ಇದ್ದೇವೆ. ಫಲಿತಾಂಶವು ಸರ್ಕಾರದ ಹತಾಶೆಯನ್ನು ತೋರಿಸುತ್ತಿದೆ. ಎನ್‌ಡಿಎ ಅಭ್ಯರ್ಥಿಗೆ ಮತ ಯಾಚಿಸಲು ಪ್ರಧಾನಿಯೇ ದೂರವಾಣಿ ಕರೆಗಳನ್ನು ಮಾಡಬೇಕಾಯಿತು. ಈ ಚುನಾವಣೆ ನಮ್ಮ ಮುಂದಿದ್ದ ಕೊನೆಯ ಅವಕಾಶವೇನೂ ಆಗಿರಲಿಲ್ಲ. ವಿಶ್ವಕಪ್‌ ಪಂದ್ಯ ಮುಂದೆ ಬರಲಿದೆ. ಆ ಆಟದಲ್ಲಿನ ಮತದಾರರೇ ಬೇರೆ’ ಎಂದು ಟಿಎಂಸಿ ಮುಖಂಡ ಡೆರೆಕ್‌ ಒಬ್ರಯಾನ್‌ ಹೇಳಿದ್ದಾರೆ.

ಎನ್‌ಡಿಎ ಅಭ್ಯರ್ಥಿ ವಿರುದ್ಧ ಒಮ್ಮತದಅಭ್ಯರ್ಥಿಯನ್ನು ಕಣಕ್ಕಿಳಿಸಲು ವಿರೋಧ ಪಕ್ಷಗಳು ತೀರ್ಮಾನಿಸಿದ್ದವು. ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಕಾಂಗ್ರೆಸ್‌ಗೆ ಸೂಚಿಸಿದ್ದವು. ಆದರೆ, ಕಾಂಗ್ರೆಸ್ಸೇತರ ಅಭ್ಯರ್ಥಿಯನ್ನು ಆ ಪಕ್ಷವು ಕಣಕ್ಕಿಳಿಸಬಹುದು ಎಂಬ ನಿರೀಕ್ಷೆ ತಮ್ಮಲ್ಲಿತ್ತು ಎಂದು ಫಲಿತಾಂಶದ ಬಳಿಕ ಹಲವು ಮುಖಂಡರು ಹೇಳಿದ್ದಾರೆ.ಕಾಂಗ್ರೆಸ್‌ನ ಕಾರ್ಯತಂತ್ರದ ಬಗ್ಗೆಯೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಎಪಿ ಮುಖಂಡರಿಗೆ ರಾಹುಲ್‌ ಒಂದು ಕರೆ ಮಾಡಿದ್ದರೆ ಆ ಪಕ್ಷದ ಸಂಸದರು ಮತ ಹಾಕುತ್ತಿದ್ದರು. ಆದರೆ ಅದು ಆಗಲಿಲ್ಲ ಎಂದು ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಎಎಪಿಯ ಮೂವರು ಸಂಸದರು ಮತದಾನದಲ್ಲಿಭಾಗವಹಿಸಲಿಲ್ಲ.
**
ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಕೋರಿ ನಿತೀಶ್‌ ಕುಮಾರ್‌ ಅವರು ಕೇಜ್ರಿವಾಲ್‌ಗೆ ಕರೆ ಮಾಡಿದ್ದರು. ಕೇಜ್ರಿವಾಲ್‌ ಬೆಂಬಲ ನಿರಾಕರಿಸಿದ್ದರು. ನಿತೀಶ್‌ ಕರೆ ಮಾಡಬಹುದಾದರೆ ರಾಹುಲ್ ಯಾಕೆ ಮಾಡಬಾರದು.
ಸಂಜಯ ಸಿಂಗ್‌, ಎಎಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT