ಭಾನುವಾರ, ಡಿಸೆಂಬರ್ 8, 2019
25 °C

ರಾಮ ಮಂದಿರ ವಿಷಯ ಎತ್ತುವುದೇ ಆರ್‌ಎಸ್‌ಎಸ್‌ ಉದ್ಯೋಗ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನಾಗಪುರ: ‘ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಅನುಕೂಲವಾಗಲೆಂದು ರಾಮ ಮಂದಿರ ವಿಷಯವನ್ನು ಎತ್ತುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ಉದ್ಯೋಗವಾಗಿದೆ’ ಎಂದು ಲೋಕಸಭೆಯ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶನಿವಾರ ಟೀಕಿಸಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ಆರ್‌ಎಸ್‌ಎಸ್‌ ಹಮ್ಮಿಕೊಂಡಿರುವ ಸಂಕಲ್ಪ ಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಮತಗಳ ಧ್ರುವೀಕರಣಕ್ಕೆ ಇಂಥ ವಿಷಯಗಳನ್ನು ಎತ್ತುವುದು ಅವರಿಗೆ ಸಾಮಾನ್ಯವಾಗಿದೆ. ಲೋಕಸಭೆ ಚುನಾವಣೆಗೆ ಮೂರು ತಿಂಗಳು ಇದೆ. ಈ ಸಮಯದಲ್ಲಿಯೇ ಇಂಥ ವಿಷಯವನ್ನು ಮುನ್ನೆಲೆಗೆ ತರುವುದು ಅವರ ಕೆಲಸ’ ಎಂದು ವ್ಯಂಗ್ಯವಾಡಿದರು.

‘ಸಾಂಸ್ಕೃತಿಕ ಮತ್ತು ತಟಸ್ಥ ನಿಲುವು ಹೊಂದಿದ ಸಂಘಟನೆ ಎಂದು ಆರ್‌ಎಸ್‌ಎಸ್‌ ಹೇಳಿಕೊಳ್ಳುತ್ತದೆ. ಆದರೆ, ತಟಸ್ಥ ಸಂಘಟನೆಯಾಗಿ ಅದು ಉಳಿದಿಲ್ಲ. ಬಿಜೆಪಿಗೆ ಸಹಾಯ ಮಾಡುವುದೇ ಅದರ ಉದ್ದೇಶವಾಗಿದೆ’ ಎಂದರು.

ಇದಕ್ಕೂ ಮುನ್ನ, ಯುನೈಟೆಡ್ ಕ್ರಿಶ್ಚಿಯನ್ ಕಾಂಗ್ರೆಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕ್ರಿಶ್ಚಿಯನ್‌ರ ಕೊಡುಗೆ ಏನೂ ಇಲ್ಲ ಎಂದು ಬಿಜೆಪಿ ಶಾಸಕ ಗೋಪಾಲ್‌ ಶೆಟ್ಟಿ ಅವರ ಹೇಳಿಕೆ ಪ್ರಸ್ತಾಪಿಸಿ, ‘ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯವರು ಎಷ್ಟು ತ್ಯಾಗ ಮಾಡಿದ್ದಾರೆ ಎಂದು ಕೇಳುವುದಿಲ್ಲ. ಆದರೆ, ಸಮಾಜದ ಎಲ್ಲ ವರ್ಗದವರು ಮೂಲಭೂತ ಹಕ್ಕುಗಳನ್ನು ಕಾಪಾಡಲು ಸಂವಿಧಾನ ರಕ್ಷಣೆಗೆ ಮುಂದಾಗಬೇಕು’ ಎಂದು ಹೇಳಿದರು.

‘ಹಿಂದೂ ಧರ್ಮವು ಎಲ್ಲರಿಗೂ ಸೇರಿದ್ದು, ಆದರೆ, ಬಿಜೆಪಿಯ ಹೊಸ ಹಿಂದೂ ತತ್ವವು ಸಮಾಜವನ್ನು ಒಡೆಯುವ ಮತ್ತು ತ್ವೇಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ’ ಎಂದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕ್ರಿಶ್ಚಿಯನ್‌ರ ಕೊಡುಗೆ ಅಪಾರವಿದೆ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು