ಲೋಕಸಭಾ ಚುನಾವಣೆ: ಮೋಹನ್‌ಲಾಲ್ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಕಾರ್ಯತಂತ್ರ

7

ಲೋಕಸಭಾ ಚುನಾವಣೆ: ಮೋಹನ್‌ಲಾಲ್ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಕಾರ್ಯತಂತ್ರ

Published:
Updated:

ನವದೆಹಲಿ: ಬಿಜೆಪಿ ಅಭ್ಯರ್ಥಿಯಾಗಿ ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಆರ್‌ಎಸ್‌ಎಸ್‌ ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. 

ರಾಷ್ಟ್ರಪ್ರಶಸ್ತಿ ವಿಜೇತ ನಟ ಮೋಹನ್‌ಲಾಲ್‌(58) ಅವರನ್ನು ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವಂತೆ ಕೇಳಲಾಗಿದೆ. ಅವರು ಬಿಜೆಪಿ ಸೇರಲಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆಯಾದರೂ ಮೋಹನ್‌ಲಾಲ್‌ ಇದನ್ನು ಖಚಿತ ಪಡಿಸಿಲ್ಲ. 

ಮೋಹನ್‌ಲಾಲ್‌ರನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಆರ್‌ಎಸ್ಎಸ್‌ ಹೆಚ್ಚಿನ ಆಸಕ್ತಿ ವಹಿಸಿದೆ ಹಾಗೂ ಸಭೆ ನಡೆಸಿ ಚರ್ಚಿಸುತ್ತಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಆರ್‌ಎಸ್‌ಎಸ್‌ ಸಭೆಯ ಕುರಿತು ಬಿಜೆಪಿಗೆ ರಾಜ್ಯ ಘಟಕದ ಮುಖಂಡರಿಗೆ ಮಾಹಿತಿ ರವಾನೆಯಾಗಿಲ್ಲ. 

ವೈಯನಾಡಿನಲ್ಲಿ ತಮ್ಮ ಫೌಂಡೇಷನ್‌ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಸೋಮವಾರ ಮೋಹನ್‌ಲಾಲ್‌ ದೆಹಲಿ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ನಟನ ರಾಜಕೀಯ ಪ್ರವೇಶದ ಕುರಿತು ಸುದ್ದಿ ಹರಡಿದೆ. 

ವಿಶ್ವಶಾಂತಿ ಫೌಂಡೇಷನ್‌: ಮೋಹನ್‌ಲಾಲ್‌ ತನ್ನ ತಂದೆ ವಿಶ್ವನಾಥನ್‌ ನಾಯರ್‌ ಮತ್ತು ತಾಯಿ ಶಾಂತಾಕುಮಾರಿ ಅವರ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್‌ ಸ್ಥಾಪಿಸಿದ್ದಾರೆ. ವೈಯನಾಡಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಸಂಸ್ಥೆ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಅವರನ್ನು ಆಹ್ವಾನಿಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಗಳಲ್ಲಿ ವಿಶ್ವಶಾಂತಿ ಫೌಂಡೇಷನ್‌ ಆರ್‌ಎಸ್‌ಎಸ್‌ನ ಸೇವಾ ಭಾರತಿಯೊಂದಿಗೆ ಕೈಜೋಡಿಸಿದೆ. 

ಈ ಫೌಂಡೇಷನ್‌ ಮೂಲಕ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಯೋಜಿಸಲಾಗಿದ್ದು, ಆರ್‌ಎಸ್‌ಎಸ್ ಇದರ ಬೆನ್ನೆಗೆ ನಿಂತಿದೆ. ಕೇರಳದಲ್ಲಿ ಮೋಹನ್‌ಲಾಲ್‌ ನಟನಾಗಿ ಹೆಸರು ಮಾಡಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿನದು, ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. 

ಕೇರಳ ಬಿಜೆಪಿ ಮಾಜಿ ಮುಖಂಡ ಕುಮ್ಮನಾಂ ರಾಜಶೇಖರನ್‌ ಅವರನ್ನು ತಿರುವನಂತಪುರನಿಂದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಿಲು ನಿರ್ಧರಿಸಲಾಗಿತ್ತು. ಆದರೆ, ಮಿಜೋರಾಂ ರಾಜ್ಯಪಾಲರಾಗಿ ರಾಜಶೇಖರನ್‌ ನೇಮಕವಾಗಿರುವ ಕಾರಣದಿಂದ ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆರ್‌ಎಸ್ಎಸ್‌ ಪ್ರಯತ್ನಿಸುತ್ತಿದೆ. 

 

 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !