ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಇಲ್ಲ ಮಲೆ ಪ್ರವೇಶ

ಶಬರಿಮಲೆ ರಣರಂಗ: ಕಲ್ಲು ತೂರಾಟ, ಲಾಠಿ ಪ್ರಹಾರ, ಹಲವರಿಗೆ ಗಾಯ
Last Updated 17 ಅಕ್ಟೋಬರ್ 2018, 19:16 IST
ಅಕ್ಷರ ಗಾತ್ರ

ನಿಲಕ್ಕಲ್‌: ಕೇರಳದ ಪ್ರಸಿದ್ಧ ಅಯ್ಯ‍ಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿದೆ. ಆದರೆ ಅಯ್ಯಪ್ಪ ಭಕ್ತರು ಮತ್ತು ಕಾಂಗ್ರೆಸ್‌ ಹಾಗೂ ಬಿಜೆಪಿಯ ಪ್ರತಿಭಟನೆ ಒಡ್ಡಿದ ತಡೆಯಿಂದಾಗಿ ಮಹಿಳೆಯರು ದೇವಾಲಯ ಪ್ರವೇಶಿಸುವುದು ಸಾಧ್ಯವಾಗಲಿಲ್ಲ.

ಮಹಿಳೆಯರನ್ನು ತಡೆಯುವುದಕ್ಕಾಗಿ ದೇವಾಲಯದಿಂದ 20 ಕಿ.ಮೀ ದೂರದ ನಿಲಕ್ಕಲ್‌ ಮತ್ತು ತಳ ಶಿಬಿರ ಪಂಪಾದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ದೇವಾಲಯ ಪ್ರವೇಶಿಸಲು ಬಯಸುವ ಮಹಿಳೆಯರಿಗೆ ರಕ್ಷಣೆ ಕೊಡಲು ಭಾರಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಪ್ರತಿಭಟನಕಾರರು ಹಿಂಜರಿಯುವ ಸುಳಿವೇ ಇಲ್ಲದ್ದರಿಂದ ಈ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಯ್ಯಪ್ಪ ದರ್ಶನಕ್ಕಾಗಿ ಬಂದ ಮಹಿಳೆಯರ ರಕ್ಷಣೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಅದರ ನಡುವೆಯೂ ಮಹಿಳೆಯರನ್ನು ವಾಪಸ್‌ ಕಳುಹಿಸುವಲ್ಲಿ ಪ್ರತಿಭಟನಕಾರರು ಯಶಸ್ವಿಯಾದರು. ಮಲೆಯತ್ತ ಸಾಗುವ ರಸ್ತೆಯ ನಿಯಂತ್ರಣ ಸಂಪೂರ್ಣವಾಗಿ ಪ್ರತಿಭಟನಕಾರರ ಕೈಯಲ್ಲಿಯೇ ಇತ್ತು.

ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಸೆ.28ರಂದು ನೀಡಿದ್ದ ತೀರ್ಪಿನಿಂದ ಆಕ್ರೋಶಗೊಂಡಿದ್ದ ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ತಿರುಗೇಟು ನೀಡಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರ ಮತ್ತು ಕಲ್ಲು ತೂರಾಟದಿಂದ ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ಸಂಘರ್ಷ ನಿಲ್ಲದು

*ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧದ ಪ್ರತಿಭಟನೆಗೆ ಕೇರಳದ ವಿರೋಧ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಕೈಜೋಡಿಸಿವೆ

* ಬುಧವಾರ ಮಧ್ಯರಾತ್ರಿಯಿಂದ 24 ತಾಸು ಬಂದ್‌ಗೆ ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಮತ್ತು ಶಬರಿಮಲೆ ಸಂರಕ್ಷಣಾ ಸಮಿತಿ ಕರೆ ನೀಡಿದೆ

* ಭಕ್ತರ ಮೇಲೆ ಪೊಲೀಸ್‌ ದೌರ್ಜನ್ಯ ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಕರೆ ಕೊಟ್ಟ 12 ತಾಸು ಬಂದ್‌ಗೆ ಬಿಜೆಪಿ ಬೆಂಬಲ ಘೋಷಿಸಿದೆ

****

ಮಾಧ್ಯಮ ಮೊದಲ ಗುರಿ

ನಿಲಕ್ಕಲ್‌ ಪ್ರದೇಶ ಬುಧವಾರ ಬೆಳಿಗ್ಗೆಯಿಂದಲೇ ಪ್ರಕ್ಷುಬ್ಧವಾಗಿತ್ತು. ನಾಲ್ಕು ರಾಷ್ಟ್ರೀಯ ಸುದ್ದಿ ವಾಹಿನಿಗಳ ಪತ್ರಕರ್ತೆಯರ ಮೇಲೆ ಹಲ್ಲೆ ನಡೆಸಲಾಗಿದೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

10ರಿಂದ 50 ವರ್ಷದ ಒಳಗಿನ ಯಾವ ಮಹಿಳೆಯೂ ಈವರೆಗೆ ದೇವಾಲಯದ ಒಳಕ್ಕೆ ಪ್ರವೇಶಿಸಿಲ್ಲ

-ದೇವಸ್ವಂ ಹಿರಿಯ ಅಧಿಕಾರಿ

ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟಿದೆ. ಈಗ ನೀವು ಪರಂಪರೆಯ ಹೆಸರು ಹೇಳುತ್ತಿದ್ದೀರಿ. ತಲಾಖ್‌ ಕೂಡ ಒಂದು ಪರಂಪರೆ. ಆದರೆ ತಲಾಖ್‌ ಬಗ್ಗೆ ತೀರ್ಪು ಬಂದಾಗ ಖುಷಿ ಪಟ್ಟವರು ಈಗ ಬೀದಿಗೆ ಬಂದಿದ್ದಾರೆ
-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT