ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂತ್ರಜ್ಞಾನಕ್ಕಿಂತ ಕುಂಡಲಿಯೇ ಮೇಲು’

ಇ–ಸಮಾವೇಶದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಂಪ್ಯೂಟರ್‌ ಸಹಾಯದಿಂದ ಕೃತಕ ಬುದ್ಧಿಮತ್ತೆ (ಎಐ) ಕುರಿತು ಹೇಳುವ ಆಧುನಿಕ ತಂತ್ರಜ್ಞಾನಕ್ಕಿಂತ ನಮ್ಮ ಹಿರಿಯರು ಬರೆಯುತ್ತಿದ್ದ ಕುಂಡಲಿಗಳೇ ಮೇಲು’ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅಭಿಪ್ರಾಯಪಟ್ಟರು.

ನಗರದ ಬಿ.ವಿ.ಬಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಇ–ಸಮಾವೇಶದಲ್ಲಿ ಮಾತನಾಡಿದ ಅವರು, ‘ಎಐ ಬಳಸಿ ನಮ್ಮ ಸಂಪೂರ್ಣ ಮಾಹಿತಿಯನ್ನು ಕ್ರೋಡೀಕರಿಸಿಕೊಟ್ಟರೆ ಅದನ್ನು ಆಧುನಿಕ ತಂತ್ರಜ್ಞಾನ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ಜನ್ಮ ದಿನಾಂಕ, ಸಮಯ ಕೊಟ್ಟರೆ ಸಾಕು; ಆ ವ್ಯಕ್ತಿಯನ್ನೂ ನೋಡದೆ ಅವನ ವ್ಯಕ್ತಿತ್ವ, ಬಣ್ಣ, ನಿಲುವು, ಅವನ ಆರೋಗ್ಯ ಮತ್ತು ಅವನು ಎಂದು ಸಾಯುತ್ತಾನೆ ಎಂಬುದನ್ನು ನಮ್ಮ ಕುಂಡಲಿ ಹೇಳುತ್ತದೆ. ಆದರೆ, ಅದನ್ನು ನಾವು ಒಪ್ಪುವುದಿಲ್ಲ. ನಮಗೆ ಹಿತ್ತಲ ಗಿಡ ಮದ್ದಲ್ಲ ಎಂಬಂತಾಗಿದೆ’ ಎಂದರು.

ಅಧ್ಯಾತ್ಮ ತಳಹದಿಯ ‘ಶೂನ್ಯ’: ‘ಭಾರತವು ಜಗತ್ತಿಗೆ ಶೂನ್ಯವನ್ನು ಕೊಡುಗೆಯಾಗಿ ಕೊಡದೇ ಇದ್ದಿದ್ದರೆ, ಜಗತ್ತಿನಲ್ಲಿ ಈ ರೀತಿಯ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿರಲಿಲ್ಲ ಎಂದು ಆಲ್ಬರ್ಟ್‌ ಐನ್‌ಸ್ಟಿನ್‌ ಹೇಳಿದ್ದಾರೆ. ಇದೇ ಮಾತನ್ನು ಅನಂತಕುಮಾರ ಹೆಗಡೆ ಹೇಳಿದ್ದರೆ, ಚಡ್ಡಿ ಏನೋ ಹೇಳಿದ ಎಂದು ಎಡಬಿಡಂಗಿಗಳು ಹೇಳುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

‘ಭಾರತದ ಒಂದೊಂದು ಕೊಡುಗೆ ಹಿಂದೆಯೂ ಒಂದೊಂದು ತತ್ವಜ್ಞಾನವಿದೆ. ‘0’  ಬರೆಯುವಾಗ ನಾವು ಯಾವ ಬಿಂದುವಿನಿಂದ ಪ್ರಾರಂಭಿಸುತ್ತೇವೆಯೋ, ಅದೇ ಬಿಂದುವಿಗೆ ತಂದು ನಿಲ್ಲಿಸುತ್ತೇವೆ. ಎಲ್ಲಿ ಹುಟ್ಟುತ್ತೇವೆಯೋ, ಅಲ್ಲಿಯೇ ಸಾಯಬೇಕು, ಎಲ್ಲಿ ಪ್ರಾರಂಭವಾಗುತ್ತದೆಯೋ, ಅದು ಅಲ್ಲಿಯೇ ಮುಕ್ತಾಯವಾಗಬೇಕು ಎಂಬ ಅಧ್ಯಾತ್ಮ ತತ್ವ ಇದರ ಹಿಂದಿದೆ’ ಎಂದು ಅವರು ಹೇಳಿದರು.

‘ಮೆದುಳು– ಕಂಪ್ಯೂಟರ್‌ ಸಂವಹನ ತಂತ್ರಜ್ಞಾನದ ಬಗ್ಗೆ ಸ್ಟೀಫನ್‌ ಹಾಕಿಂಗ್ಸ್‌ ಈಗ ಮಾತನಾಡುತ್ತಾರೆ. ಆದರೆ, ನಮ್ಮವರು ಪುಷ್ಪಕ ವಿಮಾನವನ್ನು ರೂಪಿಸಿದ್ದು ಇದೇ ತಂತ್ರಜ್ಞಾನ ಬಳಸಿಕೊಂಡು’ ಎಂದು ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT