ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಿತಿ ಮುಖ್ಯಸ್ಥರನ್ನು ಭೇಟಿ ಮಾಡಿದ ನ್ಯಾಯಮೂರ್ತಿಗಳು: ವರದಿ ಅಲ್ಲಗಳೆದ ‘ಸುಪ್ರೀಂ’

ಸಿಜೆಐ ವಿರುದ್ಧದ ಆರೋಪ
Last Updated 5 ಮೇ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ಆಂತರಿಕ ತನಿಖಾ ಸಮಿತಿಯ ಮುಖ್ಯಸ್ಥ ನ್ಯಾಯ
ಮೂರ್ತಿ ಎಸ್‌.ಎ.ಬೋಬ್ಡೆ ಅವರನ್ನು ನ್ಯಾಯಮೂರ್ತಿಗಳಾದ ಆರ್‌.ಎಫ್‌.ನರಿಮನ್‌ ಮತ್ತು ಡಿ.ವೈ.ಚಂದ್ರಚೂಡ್‌ ಭೇಟಿಯಾಗಿದ್ದಾರೆ ಎಂಬ ವರದಿಯನ್ನು ಸುಪ್ರೀಂ ಕೋರ್ಟ್‌ ಅಲ್ಲಗಳೆದಿದೆ.

ಸುಪ್ರೀಂಕೋರ್ಟ್‌ನ ಮಹಾ ಕಾರ್ಯದರ್ಶಿ ಕಚೇರಿ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಇಬ್ಬರು ನ್ಯಾಯಮೂರ್ತಿಗಳು ಬೋಬ್ಡೆ ಅವರನ್ನು ಶುಕ್ರವಾರ ಸಂಜೆ ಭೇಟಿ ಮಾಡಿದ್ದಾರೆ ಎಂಬ ಮಾಧ್ಯಮ ವರದಿ ಅತ್ಯಂತ ದುರದೃಷ್ಟಕರ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್‌ನ ಯಾವುದೇ ನ್ಯಾಯಮೂರ್ತಿಗಳಿಂದ ಮಾಹಿತಿ ಪಡೆಯದೇ ತನ್ನದೇ ಆದ ರೀತಿಯಲ್ಲಿ ಆಂತರಿಕ ತನಿಖಾ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಮಿತಿಯ ಮುಖ್ಯಸ್ಥ, ನ್ಯಾಯಮೂರ್ತಿ ಬೋಬ್ಡೆ ಅವರನ್ನು ಭೇಟಿಯಾದ ಇಬ್ಬರು ನ್ಯಾಯಮೂರ್ತಿಗಳು, ಮೂವರು ಸದಸ್ಯರ ಸಮಿತಿಯು ಏಕಪಕ್ಷೀಯವಾಗಿ ಪ್ರಕ್ರಿಯೆ ನಡೆಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು.

‘ತನ್ನ ಪರ ವಾದಿಸಲು ವಕೀಲರ ನೆರವು ಪಡೆಯಲು ಅನುಮತಿ ನೀಡಬೇಕು ಎಂದು ಸಿಜೆಐ ವಿರುದ್ಧ ಆರೋಪ ಮಾಡಿರುವ ಸುಪ್ರೀಂಕೋರ್ಟ್‌ನ ಮಾಜಿ ಉದ್ಯೋಗಿಯ ಮನವಿಯನ್ನು ಪರಿಗಣಿಸಬೇಕು. ಇಲ್ಲವೇ, ಈ ವಿಷಯದಲ್ಲಿ ವಿಚಾರಣಾ ಸಮಿತಿಗೆ ನೆರವು ನೀಡುವ ಸಲುವಾಗಿ ವಕೀಲರೊಬ್ಬರನ್ನು (ಅಮಿಕಸ್‌ ಕ್ಯೂರಿ) ನೇಮಿಸಬೇಕು. ಇಲ್ಲದಿದ್ದರೆ ಸುಪ್ರೀಂಕೋರ್ಟ್‌ಗೆ ಕಳಂಕ ತಪ್ಪಿದ್ದಲ್ಲ ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಸಮಿತಿಗೆ ಪತ್ರ ಬರೆದಿದ್ದಾರೆ’ ಎಂದೂ ವರದಿಯಾಗಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಸಹ ವಿಚಾರಣೆಗೆ ಸಮಿತಿ ಎದುರು ಕಳೆದ ಬುಧವಾರ ಹಾಜರಾಗಿದ್ದರು. ನ್ಯಾಯಮೂರ್ತಿ ಬೋಬ್ಡೆ ಜತೆಗೆ ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರ ಮತ್ತು ಇಂದಿರಾ ಬ್ಯಾನರ್ಜಿ ಸಮಿತಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT