ಭಾನುವಾರ, ಜೂನ್ 20, 2021
29 °C
2024ರೊಳಗೆ ನುಸುಳುಕೋರರ ಹೊರಗಟ್ಟುವುದು ಖಚಿತ: ಅಮಿತ್‌ ಶಾ

ಎನ್‌ಆರ್‌ಸಿ ಜಾರಿ: ಗಡುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಕ್ರಧರಪುರ (ಜಾರ್ಖಂಡ್‌): 2024ರೊಳಗೆ ನುಸುಳುಕೋರರನ್ನು ದೇಶದಿಂದ ಹೊರಗಟ್ಟುವುದಾಗಿ ಗೃಹ ಸಚಿವ ಅಮಿತ್‌ ಶಾ ಸೋಮವಾರ ಹೇಳಿದ್ದಾರೆ.

ಇಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ನುಸುಳುಕೋರರನ್ನು ಹೊರದಬ್ಬಬೇಡಿ, ಅವರು ಎಲ್ಲಿಗೆ ಹೋಗಬೇಕು, ಅವರಿಗೆ ಆಹಾರ ಎಲ್ಲಿ ಸಿಗಬೇಕು ಎಂದು ರಾಹುಲ್‌ ಬಾಬಾ (ರಾಹುಲ್‌ ಗಾಂಧಿ) ಕೇಳುತ್ತಾರೆ. ಆದರೆ ನಾನು ಜನರಿಗೆ ಒಂದು ವಿಚಾರ ತಿಳಿಸಲು ಬಯಸುತ್ತೇನೆ. ಮುಂದಿನ ಲೋಕಸಭಾ ಚುನಾವಣೆಗೂ ಮುನ್ನ ಪ್ರತಿಯೊಬ್ಬ ನುಸುಳುಕೋರರನ್ನೂ ಗುರುತಿಸಿ ಹೊರಗಟ್ಟಲಾಗುವುದು’ ಎಂದರು.

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕುರಿತು ದೇಶದಲ್ಲಿ ಪರ–ವಿರೋಧ ಅಭಿಪ್ರಾಯಗಳಿವೆ. ರಾಷ್ಟ್ರದಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವ ತೀರ್ಮಾನದಿಂದ ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಅಲ್ಲಿನ ಕೆಲವು ನಾಯಕರು ಹೇಳಿಕೊಂಡಿದ್ದರು. ಪ್ರತಿ ಪಕ್ಷಗಳು ಸಹ ಎನ್‌ಆರ್‌ಸಿ ಜಾರಿ ಮಾಡುವುದನ್ನು ವಿರೋಧಿಸಿವೆ. ಹೀಗಿ
ದ್ದರೂ 2024ರೊಳಗೆ ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೊಳಿಸುವುದಾಗಿ ಶಾ ಹೇಳಿದ್ದಾರೆ.

ಜಾಗೃತಿ ಅಭಿಯಾನ: ಎನ್‌ಆರ್‌ಸಿ ವಿಚಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣವಾಗಿರುವುದರಿಂದ ಆ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಮಸೂದೆ (ಸಿಎಬಿ) ಬಗ್ಗೆ ಜಾಗೃತಿ ಮೂಡಿಸಲು ಪಕ್ಷವು ಯೋಜನೆ ರೂಪಿಸಿದೆ. ರಾಜ್ಯದಲ್ಲಿ ವಿಚಾರಸಂಕಿರಣ, ಪಕ್ಷದ ಕಾರ್ಯಕರ್ತರಿಗೆ ತರಬೇತಿ ಮುಂತಾದವುಗಳನ್ನು ಆಯೋಜಿಸಲಾಗುವುದು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

‘ಎನ್‌ಆರ್‌ಸಿ ವಿರುದ್ಧ ಟಿಎಂಸಿ ನಡೆಸುತ್ತಿರುವ ‘ತಪ್ಪು ಮಾಹಿತಿ ಅಭಿಯಾನ’ಕ್ಕೆ ಪ್ರತಿಯಾಗಿ ಬಿಜೆಪಿ ಈ ಯೋಜನೆ ರೂಪಿಸಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಧರ್ಮದ ಆಧಾರದಲ್ಲಿ ಕಿರುಕುಳಕ್ಕೆ ಒಳಗಾಗಿ, ಅಫ್ಗಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತ ಸಮುದಾಯದವರಿಗ ಇಲ್ಲಿಯ ಪೌರತ್ವ ನೀಡುವುದು ಈ ಮಸೂದೆಯ ಉದ್ದೇಶ. ಪ್ರಸಕ್ತ ಅಧಿವೇಶನದಲ್ಲೇ ಈ ಮಸೂದೆಯನ್ನು ಮಂಡಿಸುವ ಸೂಚನೆಯನ್ನು ಬಿಜೆಪಿ ನೀಡಿದೆ. ಸಿಎಬಿಗೆ ಈಶಾನ್ಯದ ಕೆಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದೆ.

‘ಮಸೂದೆಗೆ ಅಂಗೀಕಾರ ಲಭಿಸಿದ ಕೂಡಲೇ ಸಿಎಬಿ ಬಗ್ಗೆ ನಾವು ರಾಜ್ಯದಾದ್ಯಂತ ಪ್ರಚಾರ ಅಭಿಯಾನ ಆರಂಭಿಸುತ್ತೇವೆ. ಈ ಬಗ್ಗೆ ಕರಪತ್ರಗಳು ಮುಂತಾದ ಪ್ರಚಾರ ಸಾಮಗ್ರಿಯನ್ನೂ ವಿತರಿಸಲಾಗುವುದು’ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

 

ನನ್ನ ಪಾಲಕರು ಬಾಂಗ್ಲಾ ದೇಶದಿಂದ ವಲಸೆ ಬಂದವರು. ನಮ್ಮ ಬಳಿಯೂ ಕೆಲವು ದಾಖಲೆಗಳಿಲ್ಲ. ನಮ್ಮನ್ನೂ ನುಸುಳುಕೋರರು ಎಂದರೆ ಏನು ಮಾಡಬೇಕು?
-ಅಧಿರ್‌ ರಂಜನ್‌ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ

ಕಾಂಗ್ರೆಸ್‌ ಪಕ್ಷದ ನಾಯಕರೇ ನುಸುಳುಕೋರರಾಗಿರುವಾಗ, ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುವ ಅಧಿಕಾರ ಅವರಿಗೆಲ್ಲಿದೆ? -ಪ್ರಹ್ಲಾದ ಜೋಶಿ ಸಂಸದೀಯ ವ್ಯವಹಾರಗಳ ಸಚಿವ

ಕ್ಷಮೆಯಾಚನೆಗೆ ಒತ್ತಾಯ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರೂ ಒಳನುಸುಳುಕೋರರೇ’  ಎಂದು ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ಹೇಳಿರುವುದು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಮಾತಿನ ಚಕಮಕಿಗೆ ಕಾರಣವಾಯಿತು.

ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಇದನ್ನು ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು, ‘ಚೌಧರಿ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರು, ‘ಕಾಂಗ್ರೆಸ್‌ನಲ್ಲೇ ನುಸುಳುಕೋರರಿದ್ದಾರೆ. ಆದ್ದರಿಂದ ಅವರು ಎಲ್ಲರನ್ನೂ ತಮ್ಮಂತೆಯೇ ಕಾಣುತ್ತಾರೆ’ ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿ ಅವರ ವಿದೇಶಿ ಮೂಲವನ್ನು ಪ್ರಸ್ತಾಪಿಸಿದರು. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಚೌಧರಿ, ‘ನಾನು ಆ ಮಾತನ್ನು ಯಾವ ಹಿನ್ನೆಲೆಯಲ್ಲಿ ಹೇಳಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನನ್ನ ಪಾಲಕರೂ ಬಾಂಗ್ಲಾದಿಂದ ಬಂದವರೇ ಆಗಿದ್ದಾರೆ’ ಎಂದರು.  ಆದರೆ, ಬಿಜೆಪಿ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಗದ್ದಲ ಜೋರಾದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು