ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೇ ನುಗ್ಗಿ ಅತ್ಯಾಚಾರ ಎಸಗಬಹುದು: ಬಿಜೆಪಿ ಸಂಸದನ ಹೇಳಿಕೆ

ಶಾಹೀನ್‌ಬಾಗ್‌ ಪ್ರತಿಭಟನಕಾರರ ಗುರಿಯಾಗಿಸಿ ಬಿಜೆಪಿ ಸಂಸದ ವಾಗ್ದಾಳಿ
Last Updated 28 ಜನವರಿ 2020, 19:58 IST
ಅಕ್ಷರ ಗಾತ್ರ

ನವದೆಹಲಿ: ‘ಶಾಹೀನ್‌ಬಾಗ್‌ಗೆ ಸಿಎಎ ವಿರುದ್ಧ ಪ್ರತಿಭಟಿಸಲು ಲಕ್ಷಾಂತರ ಜನ ಬರುತ್ತಿದ್ದಾರೆ. ಅವರು ನಿಮ್ಮ ಮನೆಗೇ ನುಗ್ಗಬಹುದು. ಕೊಲೆ, ಅತ್ಯಾಚಾರ ಮಾಡಬಹುದು’ ಎಂದು ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಹೇಳಿದ್ದಾರೆ.

ಸಿಎಎಗೆ ಸಂಬಂಧಿಸಿ ಪ್ರತಿಭಟನಕಾರರ ವಿರುದ್ಧ ಬಿಜೆಪಿ ವಾಗ್ದಾಳಿ ತೀವ್ರಗೊಳಿಸಿರುವಂತೆಯೇ, ಆ ಪಕ್ಷದ ಸಂಸದ ಈ ಮಾತು ಹೇಳಿದ್ದಾರೆ. ‘ಕಾಶ್ಮೀರ ಪಂಡಿತ್‌ರಿಗೆ ಆದ ಸ್ಥಿತಿ ದೆಹಲಿಯಲ್ಲಿಯೂ ಆಗಬಹುದು’ ಎಂದೂ ಎಚ್ಚರಿಸಿದ್ದಾರೆ. ದೆಹಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಕಾರಣಕ್ಕೆ ಜನರಲ್ಲಿ ಸುರಕ್ಷತೆಯ ಭಾವನೆ ಇದೆ. ಇಂಥ ಪರಿಸ್ಥಿತಿ ಉದ್ಭವಿಸಿದರೆ ಅವರೂ ಬಹುಶಃ ರಕ್ಷಿಸಲಾಗದು. ಜನರು ಈಗ ತೀರ್ಮಾನಿಸಬೇಕಿದೆ’ ಎಂದು ಹೇಳಿದರು.

‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಶಾಹೀನ್‌ಬಾಗ್‌ ಪ್ರತಿಭಟನಕಾರರನ್ನು ಬೆಂಬಲಿಸಿದ್ದಾರೆ. ಫೆಬ್ರುವರಿ 8ರ ಚುನಾವಣೆಯಲ್ಲಿ ಯಾರಿಗೆ ಬೆಂಬಲಿಸಬೇಕು ಎಂಬುದನ್ನು ದೆಹಲಿಯ ಜನರು ಈಗ ತೀರ್ಮಾನಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತಿಯಲ್ಲೇ ಈ ಮಾತು ಹೇಳಿದ ಪಶ್ಚಿಮ ದೆಹಲಿ ಕ್ಷೇತ್ರ ಪ್ರತಿನಿಧಿಸುವ ವರ್ಮಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಶಾಹೀನ್‌ಬಾಗ್‌ನಿಂದ ಪ್ರತಿಭಟನಾಕಾರರ ತೆರವುಗೊಳಿಸಲಿದೆ’ ಎಂದರು.

ಠಾಕೂರ್‌ಗೆ ಷೋಕಾಸ್‌ ನೋಟಿಸ್‌: ಈ ನಡುವೆ, ಚುನಾವಣಾ ಪ್ರಚಾರ ಸಭೆಯಲ್ಲಿ ಕೇಳಿಬಂದ ‘ದೇಶದ್ರೋಹಿಗಳಿಗೆ ಗುಂಡಿಟ್ಟು ಕೊಲ್ಲಬೇಕು’ ಎಂಬ ಪ್ರಚೋದನಾಕಾರಿ ಘೋಷಣೆಗಳಿಗೆ ಸಂಬಂಧಿಸಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಚುನಾವಣಾ ಆಯೋಗ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ನಿರಂತರ ಪ್ರತಿಭಟನೆ: ‘ತುರ್ತುಪರಿಸ್ಥಿತಿಯ ಸಂದರ್ಭದಂತೆ, ಸಿಎಎ ವಿರುದ್ಧ ನಿರಂತರವಾಗಿ ಪ್ರತಿಭಟನೆ ಎದುರಾಗಲಿದೆ’ ಎಂದು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಹೇಳಿದ್ದಾರೆ.

ಸರಣಿ ಟ್ವೀಟ್‌ನಲ್ಲಿ ಅವರು, ‘ಸಂಸತ್ತಿನ ಅನುಮೋದನೆ ಪಡೆದಿರುವ ಸಿಎಎ ಪ್ರಶ್ನಿಸಲಾಗದು ಎಂದು ವಾದಿಸುವವರು ತುರ್ತುಪರಿಸ್ಥಿತಿ ಹೇರಲೂ ಸಂಸತ್ತು ಅನುಮೋದಿಸಿತ್ತು ಎಂಬುದನ್ನು ತಿಳಿಯಬೇಕು. ಅಸ್ಥಿರ ಆರ್ಥಿಕ ವ್ಯವಸ್ಥೆ, ಜೀವನಶೈಲಿ ಮೇಲಿನ ಬಿಜೆಪಿ ದಾಳಿ’ ಈಗ ದೇಶವನ್ನು ಒಗ್ಗೂಡಿಸುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT