ಸೋಮವಾರ, ಮಾರ್ಚ್ 30, 2020
19 °C

ಈಶಾನ್ಯ ದೆಹಲಿ: ಬೂದಿ ಮುಚ್ಚಿದ ಕೆಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋಮು ಗಲಭೆಯಿಂದ ನಲುಗಿದ್ದ ಈಶಾನ್ಯ ದೆಹಲಿಯಲ್ಲಿ ಭಾನುವಾರ ಪರಿಸ್ಥಿತಿ ಶಾಂತವಾಗಿದ್ದರೂ, ಈ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿತ್ತು. ಮುಖ್ಯರಸ್ತೆಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿದ್ದು, ಜನರ ಓಡಾಟ ವಿರಳವಾಗಿತ್ತು.

‘ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಈಶಾನ್ಯ ದೆಹಲಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಭಯ ಹೋಗಲಾಡಿಸಲು ಸ್ಥಳೀಯರೊಂದಿಗೆ ಮಾತುಕತೆಯನ್ನು ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಲ್ಲಿ ಇಲ್ಲಿ ಹಿಂಸಾತ್ಮಕ ಘಟನೆಗಳು ವರದಿಯಾಗಿಲ್ಲ. ವದಂತಿಗಳಿಗೆ ಕಿವಿಗೊಡದೆ ಅಂಥ ಮಾಹಿತಿಯನ್ನು ಪೊಲೀಸರಿಗೆ ತಿಳಿಸಲು ಸೂಚಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಭಯದ ವಾತಾವರಣ: ‘ನಮ್ಮ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದರೂ ಭಯದ ವಾತಾವರಣವಿದೆ. ನಾವು ಜೊತೆಯಾಗಿ ಈದ್‌, ಹೋಲಿ, ದೀಪಾವಳಿ ಆಚರಿಸಿದ್ದೆವು. ಆದರೆ ಇಂಥ ಘಟನೆಯನ್ನು ಎದುರಿಸಿರಲಿಲ್ಲ. ಹಿಂಸಾಚಾರದಲ್ಲಿ ತೊಡಗಿದ್ದವರು ಯಾರೂ ಈ ಪ್ರದೇಶದವರಲ್ಲ. ಅವರೆಲ್ಲ ಹೊರಗಿನಿಂದ ಬಂದವರು. ಶಿವವಿಹಾರ್‌ನಲ್ಲಿ ನನ್ನ ಬಟ್ಟೆ ಅಂಗಡಿಯಿದ್ದು, ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ಅಂಗಡಿ ಮೇಲೆ ದಾಳಿ ನಡೆಸಿದಾಗ ಸ್ಥಳೀಯ ಹಿಂದೂಗಳು ನನ್ನನ್ನು ರಕ್ಷಣೆ ಮಾಡಿದರು’ ಎಂದು ಮೊಹಮ್ಮದ್‌ ಯೂನಸ್‌ ಹೇಳಿದರು.

₹10 ಲಕ್ಷ ಪರಿಹಾರ: ಗಲಭೆಯಲ್ಲಿ ಮನೆ ಕಳೆದುಕೊಂಡ ಬಿಎಸ್‌ಎಫ್‌ ಕಾನ್‌ಸ್ಟೆಬಲ್‌ ಮೊಹಮ್ಮದ್‌ ಅನೀಸ್‌ಗೆ ₹10 ಲಕ್ಷ ಪರಿಹಾರವನ್ನು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಭಾನುವಾರ ಬಿಡುಗಡೆಗೊಳಿಸಿದ್ದಾರೆ. ಗಲಭೆ ವೇಳೆ ದುಷ್ಕರ್ಮಿಗಳು ಅನೀಸ್‌ ಅವರ ಮನೆಗೆ ಬೆಂಕಿ ಇಟ್ಟಿದ್ದರು.

ಸಂತ್ರಸ್ತರಿಗೆ ಆಶ್ರಯ: ‘ದೆಹಲಿ ಗಲಭೆಯ ಸಂತ್ರಸ್ತರಿಗೆ ವಿಶ್ವವಿದ್ಯಾಲಯವು ತೆರೆದಿರುತ್ತದೆ’ ಎಂದು ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ (ಜೆಎನ್‌ಯುಎಸ್‌ಯು) ಹೇಳಿದೆ. ಸಂತ್ರಸ್ತರಿಗೆ ಆಶ್ರಯ ನೀಡಿದರೆ ಅಂಥ ವಿದ್ಯಾರ್ಥಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜೆಎನ್‌ಯು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಶುಕ್ರವಾರ ನೋಟಿಸ್‌ ಮೂಲಕ ಎಚ್ಚರಿಸಿದ್ದರು.

ಶ್ರೀಶ್ರೀ ರವಿಶಂಕರ್‌ ಗುರೂಜಿ ಭೇಟಿ
ಬ್ರಹ್ಮಪುರಿ ಸೇರಿದಂತೆ ಹಿಂಸಾಚಾರ ನಡೆದ ಕೆಲ ಪ್ರದೇಶಗಳಿಗೆ ಭಾನುವಾರ ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ ಭೇಟಿ ನೀಡಿ ಮಾತುಕತೆ ನಡೆಸಿದರು. ‘ಹಿಂಸಾಚಾರದಿಂದ ಹಲವರು ಆಘಾತಕ್ಕೊಳಗಾಗಿದ್ದು, ಅಂಥವರಿಗೆ ಸಮಾಧಾನ ಹೇಳಲು ಎಲ್ಲರೂ ಜೊತೆಯಾಗಬೇಕು. ಸಮಾಜಘಾತುಕ ಶಕ್ತಿಗಳಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ಗುರೂಜಿ ಆಗ್ರಹಿಸಿದರು. 

‘ಪೂರ್ವಯೋಜಿತ ಹಿಂಸಾಚಾರ’
ಹೈದರಾಬಾದ್‌
: ‘ದೆಹಲಿ ಕೋಮುಗಲಭೆ ‘ಪೂರ್ವಯೋಜಿತ ಹಿಂಸಾಚಾರ’ವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ದೆಹಲಿಗೆ ಭೇಟಿ ನೀಡಬೇಕು’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಆಗ್ರಹಿಸಿದ್ದಾರೆ. 

ಎಐಎಂಐಎಂನ 62ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಒವೈಸಿ, ‘ಈ ಹಿಂಸಾಚಾರಕ್ಕೆ ಬಿಜೆಪಿ ನಾಯಕರ ಭಾಷಣಗಳೇ ಕಾರಣ. ಪೂರ್ವಯೋಜಿತವಾಗಿ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೇ ಈ ಗಲಭೆ ಮಾಡಲಾಗಿದೆ’ ಎಂದರು.

**

ಸಂತ್ರಸ್ತರಿಗೆ ಪರಿಹಾರ ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪರಿಸ್ಥಿತಿ ಹಾಗೂ ಜನರ ಜೀವನವನ್ನು ಯತಾಸ್ಥಿತಿಗೆ ತರುವುದು ನಮ್ಮ ಗುರಿ.
–ಅರವಿಂದ್‌ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು