ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್ ಸೇರಿ 16 ಜೈಲು, ಒಬ್ಬನೇ ಕಾನೂನು ಅಧಿಕಾರಿ: ದೆಹಲಿ ಹೈಕೋರ್ಟ್ ತರಾಟೆ

Last Updated 8 ಜನವರಿ 2020, 11:14 IST
ಅಕ್ಷರ ಗಾತ್ರ

ದೆಹಲಿ: ಹದಿನಾರು ಕಾರಾಗೃಹಗಳಿಗೂ ಒಬ್ಬನೇ ಕಾನೂನು ಅಧಿಕಾರಿ ಇರುವ ಕುರಿತು ಆರು ತಿಂಗಳ ಒಳಗಾಗಿ ವರದಿ ಸಹಿತ ವಿವರಣೆ ನೀಡಬೇಕೆಂದು ಅಮ್ ಆದ್ಮಿ ಪಕ್ಷ ನೇತೃತ್ವದ ದೆಹಲಿ ಸರ್ಕಾರ ಹಾಗೂ ಗೃಹ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

ಇದರಿಂದಾಗಿ ಅಮ್ ಅದ್ಮಿ ಪಕ್ಷ ಹಾಗೂ ಕಾರಾಗೃಹ ಇಲಾಖೆಯ ಮುಖ್ಯಸ್ಥರು ಈ ಪ್ರಕರಣದಲ್ಲಿ ಇಕ್ಕಟ್ಟಿಗೆಸಿಲುಕಿಕೊಳ್ಳುವ ಸಾಧ್ಯತೆ ಇದೆ.

ದೆಹಲಿಯ 16 ಕಾರಾಗೃಹಗಳಿಗೂ ಒಬ್ಬರೇ ಕಾನೂನು ಅಧಿಕಾರಿ ಇದ್ದು, ಹೈಕೋರ್ಟ್ ಆದೇಶ ನೀಡಿ ಕಾನೂನು ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕೆಂದು ಹೇಳಿದ್ದರೂ ಅದನ್ನು ಧಿಕ್ಕರಿಸಿರುವ ಸರ್ಕಾರ ಹಾಗೂ ದೆಹಲಿಯ ಕಾರಾಗೃಹ ಇಲಾಖೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಬುಧವಾರ ಅರ್ಜಿ ಮೇಲಿನ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎ.ಕೆ.ಚಾವ್ಲಾ ಅವರನ್ನೊಳಗೊಂಡ ಪೀಠ, ಜುಲೈ 2ರ ಒಳಗೆ ಈ ಸಂಬಂಧ ವಸ್ತು ಸ್ಥಿತಿ ಒಳಗೊಂಡ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಇಲ್ಲದಿದ್ದರೆ, ಮಾನನಷ್ಟ ಮೊಕದ್ದಮೆ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ.

ವಕೀಲ ಅಮಿತ್ ಸಾಹ್ನಿ ಎಂಬುವರು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ 2019 ಸೆಪ್ಟೆಂಬರ್ 27ರಂದು ಆದೇಶ ನೀಡಿ 12 ವಾರಗಳ ಒಳಗೆ ಎಲ್ಲಾ ಕಾರಾಗೃಹಗಳಿಗೂ ಕಾನೂನು ಅಧಿಕಾರಿಯನ್ನು ನೇಮಕ ಮಾಡಬೇಕೆಂದು ತಿಳಿಸಿತ್ತು. ಹೈಕೋರ್ಟ್ ಆದೇಶ ನೀಡಿ 12 ವಾರ ಕಳೆದು 2020 ಜನವರಿ ಆರಂಭವಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದೆಹಲಿ ಗೃಹ ಇಲಾಖೆ ಹಾಗೂ ಕಾರಾಗೃಹಗಳ ಇಲಾಖೆಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಕಾರಾಗೃಹ ಕಾಯ್ದೆ ಪ್ರಕಾರ ಪ್ರತಿಯೊಂದು ಕಾರಾಗೃಹಕ್ಕೂ ಡಿವೈಎಸ್ಪಿ ಮಟ್ಟದ ಒಬ್ಬೊಬ್ಬ ಕಾನೂನು ಅಧಿಕಾರಿಯನ್ನು ನೇಮಕ ಮಾಡಬೇಕು. ದೆಹಲಿಯ ತಿಹಾರ್ ಕಾರಾಗೃಹದ 9, ಮಂಡೋಲಿ ಪ್ರದೇಶದಲ್ಲಿರುವ ಒಂದು, ರೋಹಿಣಿ ಪ್ರದೇಶದ ಒಂದು ಸೇರಿದಂತೆ ಒಟ್ಟು 16 ಕಾರಾಗೃಹಗಳಿಗೂ ಒಬ್ಬನೇ ಕಾನೂನು ಅಧಿಕಾರಿ ಎಲ್ಲಾ ಪ್ರಕರಣಗಳನ್ನೂ ನಿಭಾಯಿಸುತ್ತಿದ್ದಾರೆ. ಈ ಸಂಬಂಧ ಹೈಕೋರ್ಟ್ ಆದೇಶ ನೀಡಿದರೂ ಈ ಪ್ರಕ್ರಿಯೆ ನಡೆದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT