ಸರ್ಕಾರಿ ಶಾಲೆ: ತಿನ್ನಲು ಕೊಟ್ಟ ಕಿಚಡಿಯಲ್ಲಿ ಸತ್ತ ಹಾವು!

7

ಸರ್ಕಾರಿ ಶಾಲೆ: ತಿನ್ನಲು ಕೊಟ್ಟ ಕಿಚಡಿಯಲ್ಲಿ ಸತ್ತ ಹಾವು!

Published:
Updated:

ನಾಂದೇಡ್‌(ಮಹಾರಾಷ್ಟ್ರ): ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಿನ್ನಲು ಕಿಚಡಿ ನೀಡಲಾಗಿದ್ದು, ಅದರಲ್ಲಿ ಹಾವು ಕೂಡ ಇತ್ತು ಎಂಬುದನ್ನು ನಂಬಲೇ ಬೇಕಿದೆ. 

ಗರ್ಗವಾನ್‌ ಜಿಲ್ಲಾ ಪರಿಷತ್ತಿನ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಘಟನೆ ನಡೆದಿದೆ. ನಾಂದೇಡ್‌ನಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವರೆಗೂ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟ ನೀಡಲಾಗುತ್ತದೆ.

ಶಾಲೆಯ ಸಿಬ್ಬಂದಿ ಮಕ್ಕಳಿಗೆ ಕಿಚಡಿಯನ್ನು ಉಣಬಡಿಸಲು ಶುರು ಮಾಡಿದ್ದಾರೆ. ಕೆಲ ಸಮಯದ ನಂತರ ಕಿಚಡಿ ತುಂಬಿದ್ದ ದೊಡ್ಡ ಪಾತ್ರೆಯಲ್ಲಿ ಹಾವು ಮುಳುಗಿರುವುದನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ಪಾತ್ರೆಯಲ್ಲಿ ಉರಗ ಕಂಡೊಡನೆ ವಿದ್ಯಾರ್ಥಿಗಳಿಗೆ ಕಿಚಡಿ ಬಡಿಸುವುದನ್ನು ನಿಲ್ಲಿಸಲಾಗಿದೆ. ಇದರಿಂದ ಹಲವು ಮಕ್ಕಳು ಇಡೀ ದಿನ ಹಸಿವಿನಲ್ಲಿಯೇ ಇರಬೇಕಾಯಿತು.

ಊಟದಲ್ಲಿ ಹಾವು ಕಂಡು ಬಂದಿರುವುದು ನಿಜ ಎಂದು ಶಿಕ್ಷಣ ಅಧಿಕಾರಿ ಪ್ರಶಾಂತ್‌ ದಿಗ್ರಸ್ಕರ್‌ ಸ್ಪಷ್ಟಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ತನಿಖೆ ಕೈಗೊಂಡಿದ್ದು, ವರದಿಯ ಬಳಿಕ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದಿರುವುದಾಗಿ ಐಎಎನ್ಎಸ್‌ ವರದಿ ಮಾಡಿದೆ. 

ಶಾಲೆಯ ಆಡಳಿತ ಮಂಡಳಿಯು ಕಿಚಡಿ ಸಿದ್ಧಪಡಿಸಲು ಸ್ಥಳೀಯ ತಂಡಕ್ಕೆ ಅಥವಾ ಸರ್ಕಾರೇತರ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. 

ಶಾಲೆಯ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಪೂರೈಕೆಯ ಭಾಗವಾಗಿ 1996ರಲ್ಲಿ ಕಿಚಿಡಿ ನೀಡುವುದನ್ನು ಜಾರಿಗೊಳಿಸಲಾಯಿತು. ಬಾಲಕಿಯರು ಸೇರಿದಂತೆ ಶಾಲೆ ತೊರೆಯುತ್ತಿದ್ದ ಹಲವು ಮಕ್ಕಳನ್ನು ಮತ್ತೆ ಶಾಲೆಗೆ ಮರಳಿಸುವ ಕಾರ್ಯಕ್ರಮದ ಭಾಗವಾಗಿಯೂ ಮಧ್ಯಾಹ್ನ ಊಟ ನೀಡಲಾಗುತ್ತಿದ್ದು, ಇದರಿಂದ ಸುಮಾರು 1.25 ಕೋಟಿ ಮಕ್ಕಳಿಗೆ ಅನುಕೂಲವಾಗಿದೆ. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 10

  Angry

Comments:

0 comments

Write the first review for this !