ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿಯ ಸಮಗ್ರ ವಿವರ ಪಡೆಯಲು ಆಧಾರ್‌ ಕೂಡ ಬೇಕಿಲ್ಲ

Last Updated 18 ಮಾರ್ಚ್ 2020, 23:30 IST
ಅಕ್ಷರ ಗಾತ್ರ
ADVERTISEMENT
""
""
""

ನವದೆಹಲಿ: ಭಾರತದ 120 ಕೋಟಿ ಜನರ 360 ಡಿಗ್ರಿ ವೈಯಕ್ತಿಕ ವಿವರಗಳನ್ನುಆಧಾರ್‌ ಅನ್ನು ಅವಲಂಭಿಸದೇಕಟ್ಟಿಕೊಡುವ ಮತ್ತು ಹುಡುಕಲು ಸಾಧ್ಯವಿರುವ ವ್ಯವಸ್ಥೆಯನ್ನು ರಚಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ನೆರವು ನೀಡುವುದಾಗಿ ತೆಲಂಗಾಣ ರಾಜ್ಯ ಸರ್ಕಾರ ಹೇಳಿತ್ತು. ಹಫ್‌ಪೋಸ್ಟ್‌ ಇಂಡಿಯಾ ಪರಿಶೀಲಿಸಿರುವ ದಾಖಲೆಗಳಲ್ಲಿ ಈ ಮಾಹಿತಿ ಇದೆ.

ಕುಮಾರ ಸಂಭವ ಶ್ರೀವತ್ಸ

ತೆಲಂಗಾಣದ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯೇಶ್ ರಂಜನ್ ಅವರು 2018ರ ಅಕ್ಟೋಬರ್ 19ರಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ಸಾಹ್ನಿ ಅವರಿಗೆ ಇ–ಮೇಲ್ ಬರೆದಿದ್ದರು. ‘ತತ್‌ಕ್ಷಣದಲ್ಲೇ ರಾಜ್ಯದ 3 ಕೋಟಿಗೂ ಹೆಚ್ಚು ಜನರ ಮೇಲೆ ನಿಗಾ ಇರಿಸುವಂತಹ ವ್ಯವಸ್ಥೆಯನ್ನು ತೆಲಂಗಾಣ ಸರ್ಕಾರವು ಈಗಾಗಲೇ ಅಳವಡಿಸಿಕೊಂಡಿದೆ. ದೇಶದ 120 ಕೋಟಿ ಜನರ ಮೇಲೆ ಹೀಗೆ ನಿಗಾ ಇರಿಸುವ ಮತ್ತು ವ್ಯಕ್ತಿವಿವರ ನೀಡುವ ವ್ಯವಸ್ಥೆಯನ್ನು ರೂಪಿಸುವಲ್ಲಿ, ಕೇಂದ್ರ ಸರ್ಕಾರಕ್ಕೆ ನೆರವು ನೀಡಲು ನಾವು ಉತ್ಸುಕರಾಗಿದ್ದೇವೆ’ ಎಂದು ರಂಜನ್ ಅವರು ಬರೆದಿದ್ದರು.

ಆಧಾರ್‌ನ ಸಾಂವಿಧಾನಿಕತೆಯನ್ನು ಎತ್ತಿಹಿಡಿದರೂ, ಅದನ್ನು ನಾಗರಿಕರ ಖಾಸಗಿತನದ ಹರಣಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳನ್ನು ತಡೆದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಕೆಲವೇ ವಾರಗಳಲ್ಲಿ ರಂಜನ್ ಅವರು ಕೇಂದ್ರ ಸರ್ಕಾರಕ್ಕೆ ಈ ಇ–ಮೇಲ್ ಬರೆದಿದ್ದರು.

‘ಆಧಾರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಗಮನಿಸಿದರೆ, ಆಧಾರ್ ಅನ್ನು ಅವಲಂಬಿಸದೇ 360 ಡಿಗ್ರಿಯ ಮಾಹಿತಿ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ತೆಲಂಗಾಣವು ಸಮಗ್ರಂ ಹೆಸರಿನ ವ್ಯವಸ್ಥೆಯನ್ನು ಎರಡೂವರೆ ವರ್ಷಗಳ ಹಿಂದೆಯೇ ಆರಂಭಿಸಿದೆ. ಇದು ಆಧಾರ್‌ನಂತಹ ವಿಶಿಷ್ಟ ಗುರುತಿನ ಅವಶ್ಯಕತೆ ಇಲ್ಲದೆಯೇ ವಿವಿಧ ದತ್ತಾಂಶಗಳ ಮಧ್ಯೆ ಕೊಂಡಿ ಏರ್ಪಡಿಸುವಚತುರ ಆಡಳಿತ ವೇದಿಕೆ’ ಎಂದು ಅವರು ಇಮೇಲ್‌ನಲ್ಲಿ ವಿವರಿಸಿದ್ದರು.

ತೆಲಂಗಾಣದ ವ್ಯವಸ್ಥೆಯನ್ನು ಪ್ರತ್ಯಕ್ಷವಾಗಿ ಪರಿಶೀಲಿಸಲಾಗಿದೆ. ಸರ್ಕಾರದ ಅಗಾಧ ದತ್ತಾಂಶಗಳನ್ನು ಬಳಸಿಕೊಂಡು ಕುಟುಂಬಗಳ ಜಾಲವನ್ನೇ ರಚಿಸಲು ಸಾಧ್ಯವಿರುವ, ಪ್ರತಿ ನಿವಾಸಿಯ ಪ್ರತಿ ಮಾಹಿತಿಯನ್ನೂ ಹೊಂದಿರುವ ಈ ವ್ಯವಸ್ಥೆಯು ತೆಲಂಗಾಣ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಕಾನೂನು ಜಾರಿ ಅಧಿಕಾರಿಗಳಿಗೆ ಲಭ್ಯ ಇದೆ. ತೆಲಂಗಾಣದಲ್ಲಿ ಇಂತಹ ವ್ಯಸವ್ಥೆ ಇದೆ ಎಂದು ಈ ಹಿಂದೆಯೇ ವರದಿ ಮಾಡಲಾಗಿದೆ. ಆದರೆ ಈಗಿನದು, ಈ ವ್ಯವಸ್ಥೆ ಎಷ್ಟು ಶಕ್ತಿಯುತವಾಗಿದೆ ಎಂಬುದರ ಚಿತ್ರಣ.

‘ಇದನ್ನು ಬೇರೆ ರಾಜ್ಯಗಳ ಜತೆ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಜತೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಇದರ ವಿವರವನ್ನು ಹಂಚಿಕೊಳ್ಳಲು ನಾವು ದೆಹಲಿಗೆ ಬರಲು ಸಿದ್ಧರಿದ್ದೇವೆ’ ಎಂದು ರಂಜನ್ ಬರೆದಿದ್ದರು.

ಮಹಾ ದತ್ತಾಂಶ ಕಣ್ಗಾವಲು ವ್ಯವಸ್ಥೆ ಎಂಬುದು ಕನಸಲ್ಲ, ಬದಲಿಗೆ ಚಿಂತೆಗೀಡುಮಾಡುವಂತಹ ವಾಸ್ತವ ಎಂಬುದನ್ನು ತೆಲಂಗಾಣದ ಸಮಗ್ರಂ ವ್ಯವಸ್ಥೆ ಸಾಬೀತು ಮಾಡಿದೆ. ಸಮಗ್ರಂ ವ್ಯವಸ್ಥೆಯು, ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಮತ್ತು ವಿವಾದಾತ್ಮಕ ಸಾಮಾಜಿಕ ನೋಂದಣಿಯ ಪ್ರಾಯೋಗಿಕ ಪರಿಕಲ್ಪನೆಯಂತೆಯೇ ಇದೆ.

2011ರಲ್ಲಿ ನಡೆಸಲಾಗಿದ್ದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶಗಳ ಆಧಾರದ ಮೇಲೆ ಸಾಮಾಜಿಕ ನೋಂದಣಿಯನ್ನು ರಚಿಸಲಾಗುತ್ತಿದೆ. ಇದೇ ರೀತಿ, ತೆಲಂಗಾಣದಲ್ಲಿ 2014ರಲ್ಲಿ ರಾಜ್ಯದ ಪ್ರತಿ ವ್ಯಕ್ತಿಯ ಸಾಮಾಜಿಕ–ಆರ್ಥಿಕ ದತ್ತಾಂಶ ಕಲೆ ಹಾಕಿ ಸಮಗ್ರ ಕುಟುಂಬ ಸಮೀಕ್ಷೆಯ ಆಧಾರದಲ್ಲಿ ಸಮಗ್ರಂ ವ್ಯವಸ್ಥೆಯನ್ನು ರೂಪಿಸಲಾಗಿದೆ.

ತೆಲಂಗಾಣದ ಕಾನೂನು ಜಾರಿ ಸಂಸ್ಥೆಗಳಿಗೆ ಸಮಗ್ರಂ ವ್ಯವಸ್ಥೆಯ ಮಾಹಿತಿ ಲಭ್ಯವಾಗುವಂತೆ ಮಾಡಲಾಗಿದೆ. ಬಡತನ ನಿರ್ಮೂಲನೆ ನೆಪದಲ್ಲಿ ದತ್ತಾಂಶ ಕಲೆಹಾಕಿ, ಸರ್ಕಾರದ ದಬ್ಬಾಳಿಕೆಯ ಸಂಸ್ಥೆಗಳು ಆ ದತ್ತಾಂಶವನ್ನು ಬಳಸುತ್ತಿವೆ ಎಂಬುದನ್ನು ಇದು ದೃಢಪಡಿಸುತ್ತದೆ.

ಕೇಂದ್ರ ಸರ್ಕಾರದ ಸಾಮಾಜಿಕ ನೋಂದಣಿಯ ನಿರ್ಮಾತೃಗಳಲ್ಲಿ ಒಬ್ಬರಾದ, ಆಗಿನ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಆರ್ಥಿಕ ಸಲಹೆಗಾರ ಮನೋರಂಜನ್ ಕುಮಾರ್ ಅವರು, ಸಾಮಾಜಿಕ ನೋಂದಣಿಯು ದುರ್ಬಳಕೆ ಆಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ನಲ್ಲಿರುವ ಎರಡು ಅಂತಸ್ತಿನ ಕಟ್ಟಡದ ಐಷಾರಾಮಿ ಕಚೇರಿಯಲ್ಲಿ ಕುಳಿತಿದ್ದ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು, ಅದೇ ನಗರದ ನಿವಾಸಿ, ಖ್ಯಾತ ಕ್ರೀಡಾಪಟುವೊಬ್ಬರ ಹೆಸರು ಹಾಗೂ ಅವರ ತಂದೆಯ ಹೆಸರನ್ನು ಟೈಪ್‌ ಮಾಡಿದರು. ಕೆಲವೇ ಸೆಕೆಂಡ್‌ಗಳಲ್ಲಿ ಅವರಿಬ್ಬರ ಹೆಸರಿನಲ್ಲಿರುವ 12 ದಾಖಲೆಗಳು ಗೋಡೆಗೆ ಅಳವಡಿಸಿದ್ದ ದೊಡ್ಡ ಪರದೆಯ ಮೇಲೆ ತೆರೆದುಕೊಂಡವು. ವಿಳಾಸ, ದೂರವಾಣಿ ಸಂಖ್ಯೆ, ಹೈಸ್ಕೂಲ್‌ ಮತ್ತು ಪಿಯುಸಿಯಲ್ಲಿ ಪಡೆದ ಅಂಕಗಳು, ಪಾಸ್‌ಪೋರ್ಟ್‌, ವಾಹನ ಚಾಲನೆ ಪರವಾನಗಿಪ‍ತ್ರ, ವಾಹನ ಮಾಲೀಕತ್ವ ವಿವರ...

‘ಅವರು ಶ್ರೀಮಂತರು, ನಾಲ್ಕು ವಾಹನಗಳನ್ನು ಹೊಂದಿದ್ದಾರೆ’ ಎಂದು ಅಧಿಕಾರಿ ಮುಗುಳುನಗುತ್ತಾ ಹೇಳಿದರು. ‘ಅವರು ಬೇರೆಯವರ ಜತೆ ಹೇಗೆ ಬೆಸೆದುಕೊಂಡಿದ್ದಾರೆ ಎಂಬ ಜಾಲವನ್ನು ರೂಪಿಸಲು ನಾವೀಗ ಶ್ರಮಿಸುತ್ತೇವೆ. ಇದು ಕಾನೂನು ಸುವ್ಯವಸ್ಥೆಯ ಉದ್ದೇಶದಿಂದ ಮಾತ್ರ. ನೀವು ಬರಿಯ ದೂರವಾಣಿ ಸಂಖ್ಯೆ ನೀಡಿದರೂ ಎಲ್ಲಾ ಮಾಹಿತಿಯನ್ನು ಅದೇ ಜೋಡಿಸುತ್ತದೆ’.

ಅಧಿಕಾರಿಯು ಮೌಸ್‌ನಲ್ಲಿ ಇನ್ನೊಂದೆರಡು ಕ್ಲಿಕ್‌ ಮಾಡಿದರು. ಅವರ ಸಂಬಂಧಿಗಳ ಬಗೆಗಿನ ಸಂಪೂರ್ಣ ವಿವರವು ಚಿತ್ರಗಳ ಸಹಿತ ತೆರೆದುಕೊಂಡಿತು. ಸಂಬಂಧಿಕರ ಹೆಸರು, ಅವರ ಜತೆಗಿನ ಸಂಬಂಧ, ಕ್ರೀಡಾಪಟುವಿನ ಪಾಲಕರು ಮತ್ತು ಒಡಹುಟ್ಟಿದವರ ವಿವರಗಳೂ ಬಂದವು. ಕ್ರೀಡಾಪಟುವಿನ ಒಡಹುಟ್ಟಿದವರನ್ನು ತೋರಿಸಿ ಅಧಿಕಾರಿ ಹೇಳಿದರು, ‘ಇವರು ಒಡಹುಟ್ಟಿದವರು ಎಂಬುದು ಸರ್ಕಾರದ ಯಾವ ದಾಖಲೆಯಲ್ಲೂ ನಮೂದಾಗಿಲ್ಲ. ಆದರೆ ಈ ವ್ಯವಸ್ಥೆ ತಾನಾಗಿಯೇ ಎಲ್ಲವನ್ನೂ (ಚುಕ್ಕಿಗಳನ್ನು) ಜೋಡಿಸಿ ಸಂಬಂಧವನ್ನು ದಾಖಲಿಸಿದೆ’.

ಖಾಸಗಿತನದ ಹಕ್ಕಿಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಈ ಕ್ರೀಡಾಪಟುವಿನ ಹೆಸರು, ಲಿಂಗ ಮುಂತಾದ ವಿವರಗಳನ್ನು ಹಫ್‌ಪೋಸ್ಟ್‌ ಮುಚ್ಚಿಟ್ಟಿದೆ.

‘ಸಮಗ್ರಂ ವ್ಯವಸ್ಥೆಯು ಐದು ರೀತಿಯ ಸಂಬಂಧಗಳ ನಕ್ಷೆಯನ್ನು ತಯಾರಿಸುತ್ತದೆ. ಅವುಗಳೆಂದರೆ, ಪಾಲಕರು, ಮಕ್ಕಳು, ಒಡಹುಟ್ಟಿದವರು, ಪತ್ನಿ ಹಾಗೂ ಅದೇ ವಿಳಾಸದಲ್ಲಿ ಇರುವ, ಅದೇ ದೂರವಾಣಿ ಅಥವಾ ಇ–ಮೇಲ್‌ ಬಳಸುವ ಇತರರನ್ನು ಕುರಿತ ವಿವರಗಳು’ ಎಂದು ಅಧಿಕಾರಿ ಹಫ್‌ಪೋಸ್ಟ್‌ಗೆ ತಿಳಿಸಿದರು.

‘ನೀವು ಅವರಲ್ಲಿ ಯಾರಾದರೂ ಒಬ್ಬರ ಹೆಸರಿನ ಮೇಲೆ ಕ್ಲಿಕ್‌ ಮಾಡಿದರೆ, ಆ ವ್ಯಕ್ತಿಯ ಇನ್ನಷ್ಟು ಸಂಬಂಧಗಳ ವಂಶವೃಕ್ಷ ತೆರೆದುಕೊಳ್ಳುತ್ತದೆ. ಕೊನೆಯ ಕೊಂಡಿ ಲಭಿಸುವವರೆಗೂ ನೀವು ಈ ಮಾಹಿತಿಯನ್ನು ಪಡೆಯುತ್ತಲೇ ಹೋಗಬಹುದು’ ಎಂದರು.

‘ಸಮಗ್ರಂ ತಂತ್ರಾಂಶದ ಸಂಬಂಧಗಳ ನಕ್ಷೆಯು ಕಾನೂನು ಮತ್ತು ಸುವ್ಯವಸ್ಥೆ ಜಾರಿ ಸಂಸ್ಥೆಗಳ ಅತಿ ಹಿರಿಯ ಅಧಿಕಾರಿಗಳಿಗೆ ಮಾತ್ರ ಲಭ್ಯವಿರುತ್ತದೆ. ಇದು ದೇಶದಲ್ಲೇ ಇಂಥ ಮೊದಲ ವ್ಯವಸ್ಥೆಯಾಗಿದೆ. ಕಾನೂನು ಜಾರಿ ಸಂಸ್ಥೆಗಳಲ್ಲಿರುವ ಶಕ್ತಿ ಎಷ್ಟು ಎಂಬುದನ್ನು ಊಹಿಸಿಕೊಳ್ಳಿ. ನಿಮ್ಮಲ್ಲಿ ಇದ್ದಿದ್ದು ಎರಡೇ ಎರಡು ಮಾಹಿತಿಗಳು– ಹೆಸರು ಮತ್ತು ವಿಳಾಸ. ಆದರೆ, ಇಂದು ಎಂಥ ಚಿತ್ರಣ ನಿಮ್ಮ ಮುಂದೆ ಇದೆ...’ ಎಂದು ಅಧಿಕಾರಿ ಹೇಳಿದರು.

ಹಣಕಾಸು ಗುಪ್ತಚರ ಘಟಕ, ಆದಾಯ ತೆರಿಗೆ ಇಲಾಖೆ, ರಾಷ್ಟ್ರೀಯ ಗುಪ್ತಚರ ಜಾಲ ಮುಂತಾಗಿ ದೇಶದ ಅನೇಕ ಕಾನೂನು ಜಾರಿ ಸಂಸ್ಥೆಗಳು ಇಂಥ ಡೇಟಾಬೇಸ್‌ ನಿರ್ಮಿಸುವ ಪ್ರಯತ್ನ ಮಾಡುತ್ತಿವೆ. ಅವರು ಬೇರೆಬೇರೆ ಹಂತದಲ್ಲಿದ್ದಾರೆ. ಯಾರೂ ಇಷ್ಟೊಂದು ದೊಡ್ಡ ಪ್ರಮಾಣದ ಮತ್ತು ಮುಂದುವರಿದ ಹಂತವನ್ನು ತಲುಪಿಲ್ಲ ಎಂದೂ ಅಧಿಕಾರಿ ತಿಳಿಸಿದರು.

ಗುಪ್ತಚರ ಜಾಲ ಎಂಬುದು ಭಯೋತ್ಪಾದನೆಯನ್ನು ನಿಗ್ರಹಿಸುವ ಮತ್ತು ಕಣ್ಗಾವಲು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ತಮ್ಮ ಟ್ರ್ಯಾಕಿಂಗ್‌ (ನಿಗಾ) ಹಾಗೂ ಮ್ಯಾಚಿಂಗ್‌ (ಜೋಡಣೆ) ವ್ಯವಸ್ಥೆಯು ಭಯಹುಟ್ಟಿಸುವಷ್ಟು ನಿಖರವಾಗಿದೆ ಎಂದು ತೆಲಂಗಾಣ ರಾಜ್ಯದ ಅಧಿಕಾರಿಗಳು ಹೇಳುತ್ತಾರೆ.

‘ನಾವೆಲ್ಲರೂ ಡಿಜಿಟಲ್‌ ಹೆಜ್ಜೆ ಗುರುತುಗಳನ್ನು ಹೊಂದಿದ್ದೇವೆ ಎಂಬುದು ಎಲ್ಲರಿಗೂ ತಿಳಿದಿದೆ. ದಾಖಲೆಗಳನ್ನು ಇಟ್ಟುಕೊಳ್ಳಬೇಕಾದಂಥ ಯಾವುದೇ ವ್ಯವಹಾರವನ್ನು ನಡೆಸುವಾಗಲೂ ನಾವು ಡಿಜಿಟಲ್‌ ಹೆಜ್ಜೆಗುರುತೊಂದನ್ನು ಬಿಟ್ಟಿರುತ್ತೇವೆ’ ಎಂದು ತೆಲಂಗಾಣದ ಐಟಿ ಇಲಾಖೆಯ ಅಧಿಕಾರಿ ರಂಜನ್‌ ಅವರು 2019ರಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಹೇಳಿದ್ದರು.

‘ನೀವು ಒಬ್ಬ ವ್ಯಕ್ತಿಯ ಹೆಸರನ್ನು ಹೇಳಿದರೆ ಶೇ 96ರಷ್ಟು ನಿಖರವಾಗಿರುವ ಅವರ ಸಂಪೂರ್ಣ ಡಿಜಿಟಲ್‌ ಹೆಜ್ಜೆ ಗುರುತುಗಳನ್ನು ನಾನು ನೀಡಬಲ್ಲೆ’ ಎಂದು ಅವರು ಹೇಳಿದ್ದರು.

ತೆಲಂಗಾಣದ ‘ಸಮಗ್ರಂ’ –ಅದಕ್ಕೆ ಸಮಗ್ರ ವೇದಿಕಾ ಎಂದೂ ಹೇಳಲಾಗುತ್ತದೆ– ವ್ಯವಸ್ಥೆಯು ಕ್ರಮಾವಳಿ ವಿಧಾನದ (algorithms) ಮೂಲಕ ವ್ಯಕ್ತಿಯನ್ನು ಗುರುತಿಸುವಂತಹ ಕೆಲಸ ಮಾಡುತ್ತದೆ. ದತ್ತಾಂಶಗಳ ನಿಖರತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಕ್ರಮಾವಳಿಯು ಸ್ವಯಂ ಸರಿಪಡಿಸಿಕೊಳ್ಳುವ ಸೌಲಭ್ಯವನ್ನೂ ಹೊಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ರಂಜನ್‌ ಅವರು ಸಾರ್ವಜನಿಕ ಸಭೆಯೊಂದರಲ್ಲಿ ವಿವರಿಸಿದಂತೆ, ರಾಜ್ಯ ಸರ್ಕಾರದ 30 ವಿವಿಧ ದತ್ತಾಂಶಗಳನ್ನು ಏಕೀಕರಿಸಿ ಪ್ರತಿಯೊಬ್ಬ ನಿವಾಸಿಯ ಸಮಗ್ರ ಡಿಜಿಟಲ್‌ ಪ್ರೊಫೈಲ್‌ ರಚಿಸಲಾಗಿದೆ.

ಉದಾಹರಣೆಗೆ ಹೇಳುವುದಾದರೆ, ನೀವೊಂದು ಬ್ಯಾಂಕ್‌ ಖಾತೆಯನ್ನು ತೆರೆದಿರಿ ಎಂದಿಟ್ಟುಕೊಳ್ಳಿ. ಬ್ಯಾಂಕ್‌ ದತ್ತಾಂಶದಲ್ಲಿ ನಿಮ್ಮ ಗುರುತು ದಾಖಲಾಗುತ್ತದೆ. ನೀವು ಹೊಸ ಮೊಬೈಲ್‌ ಖರೀದಿಸಿ ಅಥವಾ ಸಿಮ್‌ ಕಾರ್ಡ್‌ ಪಡೆಯಿರಿ, ಮೊಬೈಲ್‌ ಸೇವಾ ಸಂಸ್ಥೆಗಳ ದತ್ತಾಂಶದಲ್ಲಿ ನಿಮ್ಮ ವಿವರ ನಮೂದಾಗುತ್ತದೆ. ಮತದಾರರ ಗುರುತಿನ ಚೀಟಿ ಪಡೆದಿದ್ದರೆ ಅಲ್ಲಿನ ದತ್ತಾಂಶದಲ್ಲೂ ನಿಮ್ಮ ಗುರುತು ಮೂಡಿರುತ್ತದೆ. ನೀವೊಂದು ವೇಳೆ ಆಸ್ತಿ ತೆರಿಗೆದಾರರಾದರೆ ಆ ಪಟ್ಟಿಯಲ್ಲೂ ನೀವು ಇರುತ್ತೀರಿ. ನೀವು ಯಾವುದಾದರೂ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆ ದತ್ತಾಂಶದಲ್ಲೂ ನಿಮ್ಮ ಹೆಜ್ಜೆ ಗುರುತು ಮೂಡಿರುತ್ತದೆ. ಇಲ್ಲಿಯೂ ಒಂದು ಉದಾಹರಣೆಯನ್ನು ಕೊಡುವುದಾದರೆ ನೀವು ಜಿಎಸ್‌ಟಿ ಪಾವತಿಸುತ್ತಿದ್ದರೆ ಜಿಎಸ್‌ಟಿ ದತ್ತಾಂಶದಲ್ಲಿ ನಿಮ್ಮ ವಿವರಗಳು ದಾಖಲಾಗಿರುತ್ತವೆ’ ಎಂದು ರಂಜನ್‌ ಹೇಳಿದ್ದರು.

‘ರಾಜ್ಯ ಸರ್ಕಾರದಲ್ಲಿ ಹೀಗೆ ಲಭ್ಯವಿರುವ ವಿವಿಧ ದತ್ತಾಂಶಗಳಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿಯನ್ನು ಹೆಕ್ಕಿ ತೆಗೆದು ಡಿಜಿಟಲ್‌ ಪ್ರೊಫೈಲ್‌ ರೂಪಿಸಲಾಗಿದೆ’ ಎಂದು ಅವರು ವಿವರಿಸಿದ್ದರು.

ಪ್ರತಿಯೊಬ್ಬ ವ್ಯಕ್ತಿಯ ಹೆಸರು ಹಾಗೂ ವಿಳಾಸವನ್ನು ಮೂಲ ಮಾಹಿತಿಯಾಗಿ ಇಟ್ಟುಕೊಂಡು ‘ಸಮಗ್ರಂ’ ವ್ಯವಸ್ಥೆಯ ಡಿಜಿಟಲ್‌ ಪ್ರೊಫೈಲ್‌ಗಳನ್ನು ರೂಪಿಸಲಾಗಿದೆ. ಅದಕ್ಕೆ ಫೋನ್‌ ಸಂಖ್ಯೆಯಂತಹ ಇತರ ಮಾಹಿತಿಗಳನ್ನೂ ಲಿಂಕ್‌ ಮಾಡುತ್ತಿರುವುದರಿಂದ ಪ್ರೊಫೈಲ್‌ಗಳ ನಿಖರತೆಯು ಹೆಚ್ಚುತ್ತಿದೆ.

‘ತಳಮಟ್ಟದ ಆಡಳಿತವನ್ನು ಸುಧಾರಿಸುವ ಸಲುವಾಗಿ ಈ ಹಂತದ ಕಣ್ಗಾವಲು ಅಗತ್ಯ’ ಎಂದು ರಾಜ್ಯ ಸರ್ಕಾರದ ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ.

‘ಆಸ್ತಿ ತೆರಿಗೆ, ವ್ಯಾಪಾರ ಪರವಾನಗಿ ದರ, ವಾಹನ ನೋಂದಣಿ ಶುಲ್ಕ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಕಂದಾಯ ಸರಿಯಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಸಂದಾಯವಾಗುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ’ ಎನ್ನುವುದು ತೆಲಂಗಾಣದ ಇ–ಸೇವಾ ವ್ಯವಸ್ಥೆಯ ಆಯುಕ್ತ ಜಿ.ಟಿ. ವೆಂಕಟೇಶ್ವರಾವ್‌ ಅವರು ‘ಹಫ್‌ಪೋಸ್ಟ್‌ ಇಂಡಿಯಾ’ಗೆಇಮೇಲ್‌ ಮೂಲಕ ನೀಡಿರುವ ಅಭಿಪ್ರಾಯ.

‘ಕಾರು ಇಲ್ಲವೆ ದೊಡ್ಡ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದವರು, ವಾಣಿಜ್ಯ ವಹಿವಾಟು ನಡೆಸುವವರು ಸಹ ವೃದ್ಧಾಪ್ಯ ವೇತನದಂತಹ ಸಾಮಾಜಿಕ ಕಲ್ಯಾಣ ಯೋಜನೆಗಳ ದುರ್ಲಾಭ ಪಡೆಯುತ್ತಿದ್ದಾರೆ. ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ ಪೂರೈಸುವ ಆಹಾರ ಧಾನ್ಯವು ಉಳ್ಳವರ ಮನೆಗಳನ್ನೂ ಸೇರುತ್ತಿದೆ. ಇದೇ ವೇಳೆ ಅರ್ಹರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಈ ಕಾರಣದಿಂದ ಲಭ್ಯವಿರುವ ದತ್ತಾಂಶವನ್ನು ಏಕತ್ರಗೊಳಿಸಿ ‘ಸಮಗ್ರ ವೇದಿಕಾ’ ಯೋಜನೆಯನ್ನು ಜಾರಿಗೆ ತಂದು, ಆಡಳಿತದ ಸುಧಾರಣೆಯ ಸವಾಲುಗಳನ್ನು ಎದುರಿಸಲು ನಿರ್ಧಾರ ಮಾಡಿದ್ದು’ ಎಂದು ಮಾಹಿತಿ ನೀಡುತ್ತಾರೆ.

ಆಧಾರ್‌ನ ದತ್ತಾಂಶಗಳನ್ನು ಈ ಯೋಜನೆಯಲ್ಲಿ ಬಳಕೆ ಮಾಡಿಲ್ಲ ಎಂದು ರಾವ್‌ ಸ್ಪಷ್ಟಪಡಿಸುತ್ತಾರೆ. ಸುಪ್ರೀಂ ಕೋರ್ಟ್‌ 2019ರ ಸೆಪ್ಟೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲಿ ಆಧಾರ್‌ನ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಆಧಾರ್‌ ಪರಿಧಿಯಿಂದ ಹೊರಗಿರುವ ಈ ಯೋಜನೆಯು ಕೋರ್ಟ್‌ ತೀರ್ಪಿನ ನಿರ್ಬಂಧಗಳಿಗೆ ಒಳಪಡುವುದಿಲ್ಲ.

ಸುಪ್ರೀಂ ಕೋರ್ಟ್‌ 2018ರಲ್ಲಿ ನೀಡಿದ ಖಾಸಗಿತನದ ಹಕ್ಕು ಕುರಿತಂತೆ ನೀಡಿದ ತೀರ್ಪಿನ ಮಹತ್ವವನ್ನು ರಾವ್‌ ಅವರು ಒಪ್ಪಿಕೊಳ್ಳುತ್ತಾರೆ. ಆದರೆ, ಸರ್ಕಾರ ನ್ಯಾಯಸಮ್ಮತವಾಗಿ ಖಾಸಗಿತನವನ್ನು ನಿಯಂತ್ರಿಸಲು ಅವಕಾಶಕೊಟ್ಟಿದೆ ಎಂದೂ ಅವರು ವಾದಿಸುತ್ತಾರೆ.

‘ಸರ್ಕಾರದ ಕಂದಾಯದ ರಕ್ಷಣೆ, ಸಾಮಾಜಿಕ ಕಲ್ಯಾಣ ಸೌಲಭ್ಯಗಳ ಹಂಚಿಕೆ, ರಾಷ್ಟ್ರೀಯ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವಿಕೆ, ಅಪರಾಧಗಳ ತಡೆಗಟ್ಟುವಿಕೆ ಇವು ಸರ್ಕಾರದ ನ್ಯಾಯಬದ್ಧವಾದ ಗುರಿಗಳು ಎಂಬುದನ್ನು ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಕೋರ್ಟ್‌ನ ಈ ತೀರ್ಪಿಗೆ ಅನುಗುಣವಾಗಿಯೇ ‘ಸಮಗ್ರ ವೇದಿಕಾ’ ಯೋಜನೆಯನ್ನು ರೂಪಿಸಲಾಗಿದೆ’ ಎಂದು ಅವರು ವಾದ ಮುಂದಿಡುತ್ತಾರೆ.

ಈ ರೀತಿಯ ಪ್ರೊಫೈಲ್‌ಗಳನ್ನು ಸಿದ್ಧಪಡಿಸಲು ರಾಜ್ಯದ ಜನರಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಏಕೆಂದರೆ, ಸಮಗ್ರಂ ಯೋಜನೆಯು ಹೊಸ ಮಾಹಿತಿಯನ್ನೇನೂ ಸಂಗ್ರಹಿಸುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಈಗಾಗಲೇ ಲಭ್ಯವಿರುವ ಮಾಹಿತಿಯನ್ನೇ ಬಳಕೆ ಮಾಡಲಾಗುತ್ತಿದೆ ಎಂದು ರಾವ್‌ ಹೇಳುತ್ತಾರೆ.

‘ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸಣ್ಣ ಸಣ್ಣ ಮಾಹಿತಿಯನ್ನಷ್ಟೇ ನಾವು ಬಳಕೆ ಮಾಡಿಕೊಂಡಿರುವುದು. ಈ ಯೋಜನೆಯಡಿ ವ್ಯಕ್ತಿಗಳ ಸಮಗ್ರ ಮಾಹಿತಿಯನ್ನೇನೂ ನಾವು ಕಲೆ ಹಾಕುತ್ತಿಲ್ಲ. ಆಯಾ ದಾಖಲೆಗಳನ್ನು ಲಿಂಕ್‌ ಮಾಡಿದ್ದರಿಂದ ಯೋಜನೆಗಳ ಪ್ರಯೋಜನ ಪಡೆಯಲು ಬಂದಂತಹ ಅರ್ಜಿಗಳು, ಕಂದಾಯ ಬಾಕಿ ಮೊದಲಾದ ವಿಷಯಗಳ ವಿಶ್ಲೇಷಣೆ ಸುಲಭವಾಗುತ್ತದೆ’ ಎಂದು ವಿವರಿಸುತ್ತಾರೆ.

‘ಸರ್ಕಾರದ ಬಳಿ ಇರುವ ಮಾಹಿತಿ ಸುರಕ್ಷಿತವಾಗಿದೆ. ಸರ್ಕಾರದ ಹಿರಿಯ ಅಧಿಕಾರಿಗಳು ಮಾತ್ರ ಅದನ್ನು ಅವಲೋಕನ ಮಾಡಲು ಸಾಧ್ಯವಿದೆ. ಯಾರು, ಯಾರು ಈ ದತ್ತಾಂಶವನ್ನು ಬಳಕೆ ಮಾಡುತ್ತಾರೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ. ಕಡಿಮೆ ದತ್ತಾಂಶ ಬಳಕೆಯ ನೀತಿಯನ್ನು ಅನುಸರಿಸಲಾಗುತ್ತಿದೆ’ ಎಂದೂ ರಾವ್‌ ಹೇಳುತ್ತಾರೆ.

ಖಾಸಗಿತನದ ತಜ್ಞರು ಮಾತ್ರ ಸಮಗ್ರಂ ವ್ಯವಸ್ಥೆಯ ಕುರಿತು ರಾವ್‌ ಅವರ ವಾದವನ್ನು ಒಪ್ಪುವುದಿಲ್ಲ.‌

‘ಸರ್ಕಾರದ ಕಾನೂನುಸಮ್ಮತ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಖಾಸಗಿತನದ ಹಕ್ಕಿನ ಮೇಲೆ ನಿರ್ಬಂಧಗಳನ್ನು ಹೇರಬಹುದು ಎಂಬುದು ನಿಜ. ಸರ್ಕಾರದ ಕಾನೂನುಸಮ್ಮತ ಉದ್ದೇಶ ಎಂಬುದು ಖಾಸಗಿತನದ ಹಕ್ಕಿನ ಮೇಲೆ ನಿರ್ಬಂಧ ಹೇರಲು ಸುಪ್ರೀಂ ಕೋರ್ಟ್‌ ಹೇರಿರುವ ಹಲವು ಷರತ್ತುಗಳಲ್ಲಿ ಒಂದು ಮಾತ್ರ’ ಎಂದು ದೆಹಲಿಯ ನ್ಯಾಷನಲ್‌ ಲಾ ಯುನಿರ್ವಸಿಟಿಯ ಸೆಂಟರ್‌ ಫಾರ್‌ ಕಮ್ಯುನಿಕೇಷನ್‌ ಗವರ್ನೆನ್ಸ್‌ನ ಸಹ ನಿರ್ದೇಶಕಿ ಸ್ಮಿತಾ ಕೃಷ್ಣ ಪ್ರಸಾದ್‌ ಹೇಳುತ್ತಾರೆ.

ಖಾಸಗಿತನದ ಹಕ್ಕುಗಳಿಗೆ ನಿರ್ಬಂಧ ಹೇರುವುದಕ್ಕೆ ಕಾನೂನಿನ ಮನ್ನಣೆಯೂ ಇರಬೇಕು. ಸರ್ಕಾರದ ಕಾನೂನುಸಮ್ಮತ ಉದ್ದೇಶಗಳು ಮತ್ತು ವ್ಯಕ್ತಿಯ ಖಾಸಗಿತನದ ಹಕ್ಕುಗಳ ಮೇಲಿನ ನಿರ್ಬಂಧಗಳು ಪ್ರಮಾಣಾತ್ಮಕವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ ಎಂಬುದರತ್ತಲೂ ಸ್ಮಿತಾ ಅವರು ಗಮನ ಸೆಳೆಯುತ್ತಾರೆ.

‘ಪೌರರ ಹಕ್ಕುಗಳನ್ನು ಮೊಟಕುಗೊಳಿಸುವುದಕ್ಕಾಗಿ ಕಾನೂನುಸಮ್ಮತ ಗುರಿಗಳು ಎಂಬ ವಾದವನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್‌ ಷರತ್ತುಗಳನ್ನು ಹಾಕಿದೆ. ಹಾಗಾಗಿ, ಇಡೀ ಜನ ಸಮುದಾಯದ ಮೇಲೆ ಸಾಮೂಹಿಕ ಕಣ್ಗಾವಲು ಇರಿಸುವುದಕ್ಕೆ ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿಯೂ ಅವಕಾಶ ಇಲ್ಲ’ ಎಂಬುದು ಅವರ ವಾದ.

‘ಈ ಪ್ರಕರಣವನ್ನೇ ಗಮನಿಸಿ, ಒಂದು ಇಲಾಖೆಯು ಮಾಹಿತಿ ಸಂಗ್ರಹಿಸಲು ಕಾನೂನಿನ ಸಮ್ಮತಿ ಇದ್ದರೂ ಅದು ನಿರ್ದಿಷ್ಟ ಉದ್ದೇಶಕ್ಕೆ ಮಾತ್ರ. ಈ ಮಾಹಿತಿಯನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಇಲ್ಲ ಎಂಬುದೇ ಅದರ ಅರ್ಥ. ಇಡೀ ಸಮುದಾಯದ ಪ್ರತಿಯೊಬ್ಬರ ಮಾಹಿತಿಯನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸುವುದು ನಿರ್ದಿಷ್ಟ ಉದ್ದೇಶಕ್ಕೆ ಪ್ರಮಾಣಾತ್ಮಕ ಅಲ್ಲ’ ಎಂದು ಅವರು ವಿವರಿಸುತ್ತಾರೆ.

‘ಮಾಹಿತಿಯನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ವ್ಯಕ್ತಿಯ 360 ಡಿಗ್ರಿ ಚಿತ್ರಣವನ್ನು ಪಡೆದು, ಅದನ್ನು ವಿವಿಧ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಇದೆ. ದತ್ತಾಂಶ ರಕ್ಷಣೆಗೆ ಗಟ್ಟಿಯಾದ ಕಾನೂನು ಇಲ್ಲದ ಭಾರತದಂತಹ ದೇಶದಲ್ಲಿ ಈ ಅಪಾಯ ಇನ್ನೂ ಹೆಚ್ಚು’ ಎಂದು ಇಂಟರ್‌ನೆಟ್‌ ಫ್ರೀಡಂ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅಪರ್ ಗುಪ್ತಾ ಹೇಳುತ್ತಾರೆ.

‘ವೈಯಕ್ತಿಕ ಮಾಹಿತಿಯನ್ನು ಈಗ ಯಾವ ನಿರ್ಬಂಧವೂ ಇಲ್ಲದೆ ಮಾರುಕಟ್ಟೆ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ. ಅಥವಾ, ಈ ಮಾಹಿತಿಯನ್ನು ಇರಿಸಿಕೊಂಡಿರುವವರು ತಮ್ಮ ಪೂರ್ವಗ್ರಹ, ವರ್ತನೆಗಳನ್ನು ಹೇರುವುದಕ್ಕೆ ವ್ಯಕ್ತಿಯನ್ನು ಗುರಿ ಮಾಡಿಕೊಳ್ಳುವ ಅಪಾಯವೂ ಇದೆ. ಸಂಗ್ರಹವಾಗಿರುವ ಭಾರಿ ಮಾಹಿತಿಯಿಂದ ಆಯ್ದು ವ್ಯಕ್ತಿಯನ್ನು ಗುರಿ ಮಾಡುವುದು ಸುಲಭವೂ ಹೌದು. ಇಂತಹ ತಂತ್ರಜ್ಞಾನ ವ್ಯಾಪಕವಾಗಿ ಲಭ್ಯವಿದೆ ಮತ್ತು ಅದರ ವಿಸ್ತೃತ ಬಳಕೆಯೂ ಆಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT