ಗುರುವಾರ , ಆಗಸ್ಟ್ 13, 2020
21 °C

ಸೋನಿಯಾಗೆ ಮಾಜಿ ಆಪ್ತನ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಒಂದು ಕಾಲದ ಆಪ್ತ ದಿನೇಶ್ ಪ್ರತಾಪ್ ಸಿಂಗ್‌ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ರಾಯ್‌ಬರೇಲಿಯಲ್ಲಿ ಹಣಾಹಣಿ ನಡೆಸಲಿದ್ದಾರೆ. ದಿನೇಶ್ ಪ್ರತಾಪ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟಿದೆ. 

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯರೂ ಆಗಿದ್ದ ದಿನೇಶ್, ಕಳೆದ ವರ್ಷ ಬಿಜೆಪಿ ಸೇರಿದ್ದರು. ಇತ್ತೀಚೆಗೆ ರಾಯ್‌ಬರೇಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಾರ್ವಜನಿಕ ರ್‍ಯಾಲಿಯನ್ನು ದಿನೇಶ್ ಸಂಘಟಿಸಿದ್ದರು. 

ರಾಜಕೀಯ ಹಿನ್ನೆಲೆಯ ದಿನೇಶ್ ಪ್ರತಾಪ್ ಅವರ ಕುಟುಂಬದವರು ಮೊದಲಿನಿಂದಲೂ ಕಾಂಗ್ರೆಸ್‌ ನಿಷ್ಠರು. ಪ್ರತಾಪ್ ಅವರ ಸಹೋದರ ರಾಕೇಶ್ ಪ್ರತಾಪ್ ಸಿಂಗ್ ಅವರು ಹರ್‌ಚಾಂದ್‌ಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಇವರೂ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳಿವೆ. ಆದರೆ ಅದಿನ್ನೂ ಖಚಿತಗೊಂಡಿಲ್ಲ. 

ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ರಾಯ್‌ಬರೇಲಿಯಲ್ಲಿ ಸೋನಿಯಾ ಅವರು 2004ರಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. 2014ರಲ್ಲಿ ಪರಾಭವಗೊಂಡಿದ್ದ ಅಜಯ್ ಅಗರ್‌ವಾಲ್ ಅವರು ಈ ಬಾರಿಯೂ ಟಿಕೆಟ್ ಕೇಳಿದ್ದರು. ಒಂದು ವೇಳೆ ಟಿಕೆಟ್ ನೀಡದಿದ್ದಲ್ಲಿ ತಮ್ಮ ಸಮುದಾಯದ ಜನರು (ಬನಿಯಾ) ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಎಚ್ಚರಿಸಿದ್ದರು. ಅಜಯ್ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಬಿಜೆಪಿ, ಪ್ರಬಲ ಸ್ಥಳೀಯ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. 

ಸಮಾಜವಾದಿ ಪಕ್ಷದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಅವರ ಎದುರಾಳಿಗಳನ್ನೂ ಬಿಜೆಪಿ ಪ್ರಕಟಿಸಿದೆ. 

ಖ್ಯಾತ ಭೋಜ್‌ಪುರಿ ನಟ–ಗಾಯಕ ದಿನೇಶ್ ಲಾಲ್ ಯಾದವ್ ಅವರನ್ನು ಆಜಂಗಡದಲ್ಲಿ ಅಖಿಲೇಶ್ ವಿರುದ್ಧ ಕಣಕ್ಕಿಳಿಸಿದೆ. ಮುಲಾಯಂ ಅವರು ಸ್ಪರ್ಧಿಸಿರುವ ಮೈನ್‌ಪುರಿ ಕ್ಷೇತ್ರದಲ್ಲಿ ಪ್ರೇಮ್ ಸಿಂಗ್ ಶಕ್ಯ ಅವರನ್ನು ಬಿಜೆಪಿ ಹೆಸರಿಸಿದೆ.

ಸೇನಾ ಆಕ್ಷೇಪ: ಕಿರೀಟ್‌ಗೆ ಬಿಜೆಪಿ ಕೊಕ್

ಮಿತ್ರಪಕ್ಷ ಶಿವಸೇನಾದ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ಮುಂಬೈನಲ್ಲಿ ತನ್ನ ಅಭ್ಯರ್ಥಿಯನ್ನು ಬಿಜೆಪಿ ಬದಲಿಸಿದೆ. ಶಿವಸೇನಾ ಆಕ್ಷೇಪದ ಕಾರಣ ಮುಂಬೈ ಈಶಾನ್ಯ ಕ್ಷೇತ್ರದ ಹಾಲಿ ಸಂಸದ ಕಿರೀಟ್ ಸೋಮಯ್ಯ ಅವರನ್ನು ಕೈಬಿಟ್ಟಿದೆ. ಈ ಕ್ಷೇತ್ರಕ್ಕೆ ಮನೋಜ್ ಕೋಟಕ್ ಅವರನ್ನು ಆಯ್ಕೆ ಮಾಡಿದೆ. ಆರ್ಥಿಕ ವಿಚಾರಗಳ ಕುರಿತು ಮಾತನಾಡಬಲ್ಲ ಬಿಜೆಪಿಯ ಪ್ರಮುಖ ಮುಖಂಡ ಎನಿಸಿರುವ ಸೋಮಯ್ಯ ಅವರು ಶಿವಸೇನಾದ ಟೀಕಾಕಾರರೂ ಆಗಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು