ಶುಕ್ರವಾರ, ಮಾರ್ಚ್ 5, 2021
24 °C
ಬರ, ಪ್ರವಾಹದಿಂದ ರಾಜ್ಯದ ಜನ ತತ್ತರಿಸಿದ್ದರೂ ಗಮನಹರಿಸಿಲ್ಲ: ಆರೋಪ

ಪಂಚತಾರಾ ಹೋಟೆಲ್‌ನಲ್ಲಿ ಸಂಸದರ ಸಭೆ!

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಗಾರು ವೈಫಲ್ಯದಿಂದ ಸತತ ಬರಗಾಲಕ್ಕೆ ತುತ್ತಾಗಿರುವ ರಾಜ್ಯಕ್ಕೆ ಕೇಂದ್ರದ ನೆರವು ಕೋರುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲು ಮಂಗಳವಾರ ಸಂಜೆ ಇಲ್ಲಿನ ದುಬಾರಿ ಪಂಚತಾರಾ ಹೋಟೆಲ್‌ನಲ್ಲಿ ಸರ್ವಪಕ್ಷಗಳ ಸಂಸದರ ಸಭೆ ಆಯೋಜಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಭಾನುವಾರ ಸಂಜೆ ದೆಹಲಿಗೆ ಆಗಮಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ಇಲ್ಲಿನ ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ಸಂಸದರ ಸಭೆ ಆಯೋಜಿಸಿದ್ದಾರೆ.

ಪಂಚತಾರಾ ಸಂಸ್ಕೃತಿಗೂ, ದುಂದುವೆಚ್ಚಕ್ಕೂ ಮುಂದಾಗಿ ಸರ್ಕಾರದ ಬೊಕ್ಕಸಕ್ಕೆ ಹತ್ತಾರು ಲಕ್ಷ ರೂಪಾಯಿ ಹಾನಿಗೆ ಕಾರಣರಾಗುತ್ತಿದ್ದಾರೆ ಎಂಬುದು ವಿಪಕ್ಷ ಮುಖಂಡರ ದೂರಾಗಿದೆ.

‘ಮುಂಗಾರು ವೈಫಲ್ಯದಿಂದ 100ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಬರ ಸ್ಥಿತಿ ಇದೆ ಎಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ಕೃಷ್ಣಾ ನದಿಯ ಪ್ರವಾಹದಿಂದಾಗಿ ಬೆಳಗಾವಿ, ರಾಯಚೂರು ಜಿಲ್ಲೆಯಲ್ಲಿ ಕೃತಕ ಪ್ರವಾಹ ತಲೆದೋರಿದೆ. ಆದರೂ ರಾಜ್ಯ ಸರ್ಕಾರ ಕರ್ನಾಟಕ ಭವನವನ್ನು ಬಿಟ್ಟು, ದುಬಾರಿ ಹೋಟೆಲ್‌ನಲ್ಲಿ ಸಭೆ ಕರೆಯುವ ಔಚಿತ್ಯ ಏನಿತ್ತು’ ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಂಸದರ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿಯವರು ತಮ್ಮ ಅಧಿಕಾರಾವಧಿಯ ಆರಂಭದಲ್ಲೇ ದುಂದುವೆಚ್ಚಕ್ಕೆ ಮುಂದಾಗಿರುವುದು ಸರಿಯಲ್ಲ ಎಂಬ ಮಾತುಗಳು ವಿರೋಧಿ ಪಾಳಯದಿಂದ ಕೇಳಿಬರುತ್ತಿವೆ.

ಲೋಕಸಭೆಯ 28 ಹಾಗೂ ರಾಜ್ಯಸಭೆಯ 12 ಸದಸ್ಯರು ಸೇರಿದಂತೆ ರಾಜ್ಯದ ಒಟ್ಟು 40 ಜನ ಸಂಸದರು ಭಾಗವಹಿಸುವ ಸಭೆಯಲ್ಲಿ ಅವರ ಸಹಾಯಕರು, ಅಧಿಕಾರಿಗಳು ಮತ್ತು ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಏನಿಲ್ಲವೆಂದರೂ ಕನಿಷ್ಠ 200 ಜನ ಭಾಗವಹಿಸುವ ನಿರೀಕ್ಷೆ ಇದೆ.

ಸಭೆಯ ನಂತರ ಊಟದ ವ್ಯವಸ್ಥೆ ಇರುವುದರಿಂದ ಪ್ರತಿ ಊಟಕ್ಕೆ ಕನಿಷ್ಠ ₹4,000 ನೀಡಬೇಕಾಗುತ್ತದೆ. ಸಭಾ ಕೊಠಡಿ ಮತ್ತು ಆತಿಥ್ಯಕ್ಕಾಗಿ ನಾಲ್ಕೈದು ಲಕ್ಷ ರೂಪಾಯಿ ಕೊಡಲೇಬೇಕು. ಇಷ್ಟೆಲ್ಲ ಖರ್ಚು ಮಾಡುವ ಬದಲು ಕರ್ನಾಟಕ ಭವನದಲ್ಲೇ ಸರಳವಾಗಿ ಸಭೆ ಆಯೋಜಿ ಸಬಹುದಿತ್ತು.

‘ಪಂಚತಾರಾ ಸಂಸ್ಕೃತಿಯಿಂದ ದೂರವಿರಿ, ಅನಗತ್ಯ ಹಾಗೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ’ ಎಂಬುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೀಡುವ ಎಚ್ಚರಿಕೆ. ಆದರೆ, ಅವರದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಆ ಸೂಚನೆಯನ್ನು ಧಿಕ್ಕರಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ ಎನ್ನುತ್ತಾರೆ ವಿಪಕ್ಷಗಳ ಸಂಸದರು.

* ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಹೇಳುವ ಮುಖ್ಯಮಂತ್ರಿಯವರೇ ಪಂಚತಾರಾ ಹೋಟೆಲ್‌ನಲ್ಲಿ ಸಭೆ ನಡೆಸಲು ಮುಂದಾಗಿರುವುದು ಸರಿಯಲ್ಲ

-ಪ್ರಜ್ವಲ್‌ ರೇವಣ್ಣ, ಲೋಕಸಭೆ ಸದಸ್ಯ

* ಸಭೆಯನ್ನು ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕರ್ನಾಟಕ ಭವನದಲ್ಲೇ ಸಭೆ ನಡೆಸಿದ್ದರೆ ದುಂದು ವೆಚ್ಚ ತಪ್ಪಿಸಬಹುದಿತ್ತು

-ಕೆ.ಸಿ. ರಾಮಮೂರ್ತಿ, ರಾಜ್ಯಸಭೆ ಸದಸ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು