ವರದಕ್ಷಿಣೆ ಕಿರುಕುಳ ದೂರು: ಪೊಲೀಸರಿಗೆ ಮತ್ತೆ ತಕ್ಷಣ ಬಂಧಿಸುವ ಅಧಿಕಾರ

7
ಕುಟುಂಬ ಕಲ್ಯಾಣ ಸಮಿತಿ ರಚನೆ ನಿರ್ಧಾರ ಕೈಬಿಟ್ಟ ‘ಸುಪ್ರೀಂ’

ವರದಕ್ಷಿಣೆ ಕಿರುಕುಳ ದೂರು: ಪೊಲೀಸರಿಗೆ ಮತ್ತೆ ತಕ್ಷಣ ಬಂಧಿಸುವ ಅಧಿಕಾರ

Published:
Updated:

ನವದೆಹಲಿ: ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣಗಳಲ್ಲಿ ಸಂತ್ರಸ್ತ ಪತ್ನಿಯ ಗಂಡ ಮತ್ತು ಆತನ ಸಂಬಂಧಿಕರನ್ನು ತಕ್ಷಣ ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪೊಲೀಸರಿಗೆ ಸುಪ್ರೀಂ ಕೋರ್ಟ್ ನೀಡಿದೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯ ಪತಿ ಇಲ್ಲವೇ ಆತನ ಸಂಬಂಧಿಕರ ವಿರುದ್ಧ ಸೂಕ್ತ ಪುರಾವೆಗಳು ಇಲ್ಲದಿದ್ದರೆ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ 2017ರ ಜುಲೈನಲ್ಲಿ ನೀಡಿದ್ದ ತೀರ್ಪನ್ನು ಮಾರ್ಪಾಡು ಮಾಡಲಾಗಿದೆ.

ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಪೊಲೀಸರು ತಕ್ಷಣವೇ ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಶುಕ್ರವಾರ ಹೇಳಿದೆ.

ಜಿಲ್ಲಾ ಮಟ್ಟದ ಕುಟುಂಬ ಕಲ್ಯಾಣ ಸಮಿತಿ ಅಥವಾ ನಾಗರಿಕ ಸಮಿತಿಯ ಸದಸ್ಯರು ದೂರನ್ನು ಪರಿಶೀಲಿಸಿ ವೈವಾಹಿಕ ವಿವಾದ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ಒಪ್ಪಿಗೆ ನೀಡುವುದು ಕಡ್ಡಾಯ ಎಂದು ದ್ವಿಸದಸ್ಯ ಪೀಠ ಹೇಳಿತ್ತು. ಆ ಆದೇಶವನ್ನು ಈಗ ರದ್ದು ಮಾಡಲಾಗಿದೆ.

ಶಾಸನ ರೂಪಿಸುವ ಅಧಿಕಾರ ಇಲ್ಲ

ನ್ಯಾಯಾಲಯಗಳು ಶಾಸನ ರೂಪಿಸಲು ಸಾಧ್ಯವಿಲ್ಲ. ಅಗತ್ಯಬಿದ್ದರೆ ಸಂಸತ್‌ ಸೂಕ್ತ ಕಾನೂನು ರೂಪಿಸಲಿ ಎಂದು ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಸಲಹೆ ಮಾಡಿದೆ.

ಸೆಕ್ಷನ್‌ 41ಎ (ಮುಂಚಿತವಾಗಿ ಬಂಧನ) ಮತ್ತು ನಿರೀಕ್ಷಣಾ ಜಾಮೀನು ಸೇರಿದಂತೆ ವರದಕ್ಷಿಣೆ ಕಾನೂನು ಉಲ್ಲಂಘನೆ ಮತ್ತು ದುರಪಯೋಗವಾಗದಂತೆ ತಡೆಯಲು ಅಪರಾಧ ದಂಡಸಂಹಿತೆ ಪ್ರಕ್ರಿಯೆಯಲ್ಲಿಯೇ ಪರಿಹಾರವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಉತ್ತರ ಪ್ರದೇಶದ ರಾಜೇಶ್‌ ಶರ್ಮಾ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿ ನಾಲ್ಕು ತಿಂಗಳಾದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ವಕೀಲರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಮಹಾರಾಷ್ಟ್ರದ ಸ್ವಯಂಸೇವಾ ಸಂಸ್ಥೆಗಳಾದ ನ್ಯಾಯಾಧಾರ ಮತ್ತು ಸೋಷಿಯಲ್‌ ಆ್ಯಕ್ಷನ್ ಫೋರಂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿತ್ತು.

**

ತ್ರಿಸದಸ್ಯ ಪೀಠ ಹೇಳಿದ್ದೇನು?

* ವರದಕ್ಷಿಣೆ ಕಿರುಕುಳ ಪ್ರಕರಣಗಳ ತನಿಖೆಗೆ ಪೊಲೀಸ್‌ ಅಧಿಕಾರಿ ನಿಯೋಜನೆ, ಸೂಕ್ತ ತರಬೇತಿ ನೀಡಲು ಸೂಚನೆ

* ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಕ್ಕೆ ಪತಿ, ಪತ್ನಿ ಒಪ್ಪಿದರೆ ಪ್ರಕರಣ ಸಮಾಪ್ತಿಗೊಳಿಸಲು ಜಿಲ್ಲಾ ನ್ಯಾಯಾಧೀಶರಿಗೆ ನೀಡಿದ್ದ ಅಧಿಕಾರ ಮೊಟಕು

* ದೂರು ವಜಾಗೊಳಿಸುವ ಅಧಿಕಾರ ಹೈಕೋರ್ಟ್‌ಗೆ 

* ಖುದ್ದಾಗಿ ವಿಚಾರಣೆಗೆ ಹಾಜರಾಗುವುದರಿಂದ ಆರೋಪಿಗಳಿಗೆ ವಿನಾಯ್ತಿ

**

498ಎ ಏನು ಹೇಳುತ್ತದೆ?

ಭಾರತೀಯ ದಂಡ ಸಂಹಿತೆ (ಐಪಿಸಿ) ಐಪಿಸಿ ಸೆಕ್ಷನ್‌ 498ಎ ಅಡಿ ವರದಕ್ಷಿಣೆ ಕಿರುಕುಳ ಅತ್ಯಂತ ಗುರುತರ ಅಪರಾಧ ಎಂಬ ಅಂಶ ಕಾನೂನು ಪುಸ್ತಕದಲ್ಲಿಯೇ ಇದೆ.

ಈ ಅಪರಾಧಕ್ಕೆ ಜಾಮೀನು ದೊರೆಯುವುದಿಲ್ಲ. ತಪ್ಪಿತಸ್ಥರಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಇದೆ.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !