ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಎಲ್‌ಪಿಜಿ ಡೀಲರ್‌ಶಿಪ್‌: ಮೀಸಲಾತಿ ಕೋರಿದ್ದ ಮೇಲ್ಮನವಿ ವಜಾ

Last Updated 17 ನವೆಂಬರ್ 2018, 17:30 IST
ಅಕ್ಷರ ಗಾತ್ರ

ನವದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ವಿತರಿಸುವ ಡೀಲರ್‌ಶಿಪ್‌ ಹಂಚಿಕೆ ಸಂದರ್ಭದಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸುವಂತೆ ತೈಲ ಕಂಪೆನಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಕಳೆದ ಆಗಸ್ಟ್ 31ರಂದು ಈ ಕುರಿತ ಅರ್ಜಿಯನ್ನು ವಜಾ ಮಾಡಿ ರಾಜ್ಯ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ ಮೇಲ್ಮನವಿ ಸಲ್ಲಿಸಿತ್ತು.

ಆದರೆ, ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಹಾಗೂ ದೀಪಕ್‌ ಗುಪ್ತಾ ಅವರಿದ್ದ ಪೀಠ ತಿಳಿಸಿತು.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದುಸ್ತಾನ್‌ ಪೆಟ್ರೋಲಿಯಂ ಸೇರಿದಂತೆ ಸಾರ್ವಜನಿಕ ವಲಯದ ತೈಲ ಕಂಪನಿಗಳು ರಾಜ್ಯದ ಒಟ್ಟು 238 ಎಲ್‌ಪಿಜಿ ವಿತರಣೆ ಡೀಲರ್‌ಶಿಪ್‌ ನೀಡಲು ಕಳೆದ ವರ್ಷ ಅರ್ಜಿ ಆಹ್ವಾನಿಸಿವೆ. ಆದರೆ, ಅಂಗವಿಕಲರ ಹಕ್ಕುಗಳ ಕಾಯ್ದೆ ಅಡಿ ಶೇ 5ರಷ್ಟು ಮೀಸಲಾತಿ ಕಲ್ಪಿಸುವುದು ಕಡ್ಡಾಯವಾದರೂ ಅದನ್ನು ಕಡೆಗಣಿಸಿವೆ ಎಂದು ಅರ್ಜಿದಾರರ ಪರ ವಕೀಲರಾದ ಆನಂದಿತಾ ಪೂಜಾರಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಅಂಗವಿಕಲರು, ಹಿಂದುಳಿದವರು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳು, ಮಹಿಳೆಯರು ಮತ್ತು ಮಾಜಿ ಸೈನಿಕರನ್ನು ಒಳಗೊಂಡಂತೆ ಶೇ 3ರಷ್ಟು ಮೀಸಲಾತಿಯನ್ನು ಮಾತ್ರ ತೈಲ ಕಂಪನಿಗಳು ಕಲ್ಪಿಸಿವೆ. ಅಭಿವೃದ್ಧಿ ಯೋಜನೆ ಅಡಿ ಅಂಗವಿಕಲರ ಬಡತನ ನಿವಾರಣೆ ಹಾಗೂ ಸಬಲೀಕರಣಕ್ಕಾಗಾಗಿ ಶೇ 5ರಷ್ಟು ಮೀಸಲಾತಿ ಕಲ್ಪಿಸಬೇಕಿದೆ ಎಂದು ಅವರು ಹೇಳಿದರು.

ಎಲ್‌ಪಿಜಿ ವಿತರಿಸುವ ಡೀಲರ್‌ಶಿಪ್‌ ಹಂಚಿಕೆಯು ಬಡತನ ನಿವಾರಣೆ ಮತ್ತು ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಕಾರಣದಿಂದ ಹೈಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT