ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕಾರಣ | ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಶಾಸಕರಿಂದ ಪೆರೇಡ್

Last Updated 26 ನವೆಂಬರ್ 2019, 1:34 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ: ಮಹಾರಾಷ್ಟ್ರದ ರಾಜಕಾರಣ ಹೊಸ ಬಗೆಯ ಬಲಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಮುಂಬೈನ ಹಯಾಟ್‌ ಪಂಚತಾರಾ ಹೋಟೆಲ್‌ನಲ್ಲಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿಕೂಟವಾದ ಮಹಾ ವಿಕಾಸ ಅಘಾಡಿಯ ಶಾಸಕರು ಸೋಮವಾರ ಸಂಜೆ ಪರೇಡ್‌ ನಡೆಸಿದರು. ಈ ಮೈತ್ರಿಕೂಟವು 162 ಸದಸ್ಯರ ಬೆಂಬಲ ಹೊಂದಿದೆ ಎಂಬುದನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿತ್ತು.

ಶಿವಸೇನಾದ ಮುಖಂಡ ಸಂಜಯ್‌ ರಾವುತ್‌ ಅವರು ಈ ಪ್ರದರ್ಶನಕ್ಕೂ ಮೊದಲು ಟ್ವೀಟ್‌ ಮಾಡಿ ‘ನಾವೆಲ್ಲರೂ ಒಂದು, ಜತೆಗಿದ್ದೇವೆ. ನಮ್ಮ 162 ಶಾಸಕರನ್ನು ಹಯಾಟ್‌ ಹೋಟೆಲ್‌ನಲ್ಲಿ ಸಂಜೆ ಏಳು ಗಂಟೆಗೆ ಮಹಾರಾಷ್ಟ್ರದ ರಾಜ್ಯಪಾಲರು ಬಂದು ನೋಡಬಹುದು’ ಎಂದು ಸವಾಲು ಒಡ್ಡಿದ್ದರು.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಅಶೋಕ್‌ ಚವಾಣ್‌ ಈ ಬಲಪ್ರದರ್ಶನದಲ್ಲಿ ಹಾಜರಿದ್ದರು. ತಮ್ಮ ಮೈತ್ರಿಕೂಟಕ್ಕೆ ಬಹುಮತ ಇದೆ, ಹಾಗಾಗಿ ಸರ್ಕಾರ ರಚನೆಗೆ ಆಹ್ವಾನಿಸಿ ಎಂದು ರಾಜ್ಯ
ಪಾಲರ ಮುಂದೆ ಹಕ್ಕು ಮಂಡನೆ ಬಳಿಕ ಈ ಬಲಪ್ರದರ್ಶನ ನಡೆದಿದೆ.

ಮೂರೂ ಪಕ್ಷಗಳ ಶಾಸಕರು ನಿಷ್ಠೆಯ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ‘ಶರದ್ ಪವಾರ್‌, ಉದ್ಧವ್‌ ಠಾಕ್ರೆ ಮತ್ತು ಸೋನಿಯಾ ಗಾಂಧಿ ಅವರ ನಾಯಕತ್ವಕ್ಕೆ ಪ್ರಾಮಾಣಿಕ ನಿಷ್ಠೆ ಹೊಂದಿದ್ದೇನೆ. ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ, ಬಿಜೆಪಿಗೆ ಅನುಕೂಲವಾಗುವ ಏನನ್ನೂ ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ’ ಎಂದು ಶಾಸಕರು ಮಾತು ಕೊಟ್ಟಿದ್ದಾರೆ. ಹಿಂದೆಲ್ಲ, ರಾಜಭವನದಲ್ಲಿ ಶಾಸಕರ ಪರೇಡ್‌ ನಡೆಯುತ್ತಿತ್ತು. ಹೋಟೆಲ್‌ನಲ್ಲಿ ಪರೇಡ್‌ ಇದೇ ಮೊದಲು.

ವಿಡಂಬನೆ: ಮಹಾ ವಿಕಾಸ ಅಗಾಡಿಯ ಬಲಪ್ರದರ್ಶನವು ಪ್ರಜಾಪ್ರಭುತ್ವದ ವಿಡಂಬನೆ ಎಂದು ಬಿಜೆಪಿ ಹೇಳಿದೆ.

ನಾಯಕರ ಪ್ರತಿಕ್ರಿಯೆ

ಬಹುಮತ ಇಲ್ಲದೆಯೇ ಸರ್ಕಾರ ರಚನೆಯಾಗಿದೆ. ಕರ್ನಾಟಕ, ಗೋವಾ ಮತ್ತು ಮಣಿಪುರದಲ್ಲಿಯೂ ಬಿಜೆಪಿ ಹೀಗೆಯೇ ಮಾಡಿದೆ. ಆದರೆ, ಇದು ಮಹಾರಾಷ್ಟ್ರ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

162 ಶಾಸಕರ ಪರೇಡ್‌ ನಡೆಸಲಾಗಿದೆ. ವಾಸ್ತವದಲ್ಲಿ ಅವರಿಗೆ 145 ಶಾಸಕರ ಬೆಂಬಲವಾದರೂ ಇದೆಯೇ? ಫಡಣವೀಸ್‌ ಮತ್ತು ಅಜಿತ್‌ ಪವಾರ್‌ ಗೆಲುವು ನಿಶ್ಚಿತ ಎನ್ನುವುದು ಬಿಜೆಪಿ ವಕ್ತಾರ ಆಶಿಷ್ ತೆಲಾರ್ ಅವರ ವಿಶ್ವಾಸ.

ಇಂದು ‘ಸುಪ್ರೀಂ’ ತೀರ್ಪು?

ಮಹಾರಾಷ್ಟ್ರದ ಸರ್ಕಾರ ರಚನೆಯ ವಿಚಾರದಲ್ಲಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ಆದೇಶ ನೀಡುವುದಾಗಿ ಸುಪ್ರೀಂ ಕೋರ್ಟ್‌ ಪ್ರಕಟಿಸಿದೆ. ಹಾಗಾಗಿ,ಶನಿವಾರ ಬೆಳಿಗ್ಗೆ 7.50ಕ್ಕೆ ಅಸ್ತಿತ್ವಕ್ಕೆ ಬಂದ ಬಿಜೆಪಿಯ ದೇವೇಂದ್ರ ಫಡಣವೀಸ್‌ ಮತ್ತು ಎನ್‌ಸಿಪಿಯ ಅಜಿತ್‌ ಪವಾರ್‌ ನೇತೃತ್ವದ ಸರ್ಕಾರಕ್ಕೆ ಬಲ ಕ್ರೋಡೀಕರಣಕ್ಕೆ ಮತ್ತೂ ಒಂದು ದಿನ ಸಿಕ್ಕಂತಾಗಿದೆ.

‘ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಎನ್‌ಸಿಪಿಯ ಎಲ್ಲ 54 ಶಾಸಕರ ಬೆಂಬಲ ಬಿಜೆಪಿಗೆ ಇದೆ. ಸರ್ಕಾರ ರಚನೆಗೆ ಫಡಣವೀಸ್‌ ಅವರನ್ನು ಆಹ್ವಾನಿಸಿದ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಪ್ರತಿಕ್ರಿಯೆ ನೀಡಲು 2–3 ದಿನ ಬೇಕು’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

ಸರ್ಕಾರ ರಚಿಸುವುದಕ್ಕಾಗಿ ಅತಿ ದೊಡ್ಡ ಪಕ್ಷವನ್ನು ಆಹ್ವಾನಿಸುವುದು ರಾಜ್ಯಪಾಲರ ವಿವೇಚನಾಧಿಕಾರ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ಆದರೆ, ಶಿವಸೇನಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಬಿಜೆಪಿಯ ವಾದವನ್ನು ವಿರೋಧಿಸಿದ್ದಾರೆ. ಶಿವಸೇನಾ ನೇತೃತ್ವದ ಸರ್ಕಾರ ರಚನೆಗೆ ಬೆಂಬಲ ಸೂಚಿಸಿ ಹೊಸದಾಗಿ ಆಯ್ಕೆಯಾಗಿರುವ 154 ಶಾಸಕರು ಕೊಟ್ಟ ಪ್ರಮಾಣಪತ್ರ ತಮ್ಮ ಬಳಿ ಇದೆ. ಹಾಗಾಗಿ, ಬಹುಮತ ಇದೆ ಎಂಬುದನ್ನು ಬಿಜೆಪಿ 24 ತಾಸುಗಳಲ್ಲಿ ಸಾಬೀಡು ಮಾಡುವಂತೆ ನಿರ್ದೇಶಿಸಬೇಕು ಎಂದು ಸಿಬಲ್‌ ವಾದಿಸಿದ್ದಾರೆ.

ರೆಸಾರ್ಟ್‌ನಿಂದ ಹೋಟೆಲ್‌ಗೆ

ಶಾಸಕರನ್ನು ರಕ್ಷಿಸಿಕೊಳ್ಳುವುದು ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ.

ಪಂಚತಾರಾ ರೆಸಾರ್ಟ್‌ನಲ್ಲಿ ಇದ್ದ ಎನ್‌ಸಿಪಿ ಶಾಸಕರನ್ನು ಮುಂಬೈನ ಎರಡು ಹೋಟೆಲ್‌ಗಳಿಗೆ ಸ್ಥಳಾಂತರಿಸಲಾಗಿದೆ. ಶಿವಸೇನಾ ಮತ್ತು ಕಾಂಗ್ರೆಸ್‌ನ ಶಾಸಕರು ಅಂಧೇರಿಯ ಹೋಟೆಲ್‌ನಲ್ಲಿದ್ದಾರೆ. ಬಿಜೆಪಿಯ ಕೆಲವು ಮುಖಂಡರು ಇದೇ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿ
ಸಿದ್ದಾರೆ. ತಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಶೋಕ್‌ ಚವಾಣ್‌ ಆರೋಪಿಸಿದ್ದರು.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಒಬ್ಬೊಬ್ಬ ಶಾಸಕರಿಗೂ ಭಾರಿ ಮಹತ್ವ ಇದೆ. ಹಾಗಾಗಿ, ಬಿಜೆಪಿ ಮತ್ತು ಅಜಿತ್‌ ಪವಾರ್‌ ಅವರ ಸೆಳೆತಕ್ಕೆ ಒಳಗಾಗದಂತೆ ಶಾಸಕರನ್ನು ಕಾಯಲು ಮೂರೂ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ.

ಸಂಸತ್ತು ಗದ್ದಲದ ಗೂಡು

ಲೋಕಸಭೆ ಸ್ಪೀಕರ್‌ ಓ ಬಿರ್ಲಾ ಅವರ ಪೀಠದ ಮುಂದೆ ಕಾಂಗ್ರೆಸ್‌ ಸಂಸದರು ನಡೆಸಿದ ಪ್ರತಿಭಟನೆಯು ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಪ್ರತಿಭಟನೆ ನಡೆಸುತ್ತಿರುವವರನ್ನು ಹೊರಗೆ ಹಾಕುವಂತೆ ಮಾರ್ಷಲ್‌ಗಳಿಗೆ ಸ್ಪೀಕರ್‌ ಸೂಚಿಸಿದರು.

ತಮ್ಮ ಮೇಲೆ ಕೈಮಾಡಲಾಗಿದೆ ಎಂದು ಕಾಂಗ್ರೆಸ್‌ ಸಂಸದೆಯರಾದ ಜ್ಯೋತಿಮಣಿ ಮತ್ತು ರಮ್ಯಾ ಹರಿದಾಸ್‌ ಅವರು ಸ್ಪೀಕರ್‌ಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT