ಮಾಯಾವತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮಂಗಳವಾರ, ಏಪ್ರಿಲ್ 23, 2019
27 °C

ಮಾಯಾವತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Published:
Updated:
Prajavani

ನವದೆಹಲಿ: ತನ್ನ ಮೇಲೆ ಚುನಾವಣಾ ಆಯೋಗ ಹೇರಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಸಂವಿಧಾನದ 324ನೇ ವಿಧಿಯ ಅಡಿಯಲ್ಲಿ ಇರುವ ಅಧಿಕಾರ ಉಪಯೋಗಿಸಿ ಚುನಾವಣಾ ಆಯೋಗ ನಿಷೇಧ ಹೇರಿದೆ. ನಿಷೇಧದಂತೆ ಇವರು ಸಾರ್ವಜನಿಕ ಸಮಾರಂಭ, ಮೆರವಣಿಗೆ, ರೋಡ್‌ ಶೋ, ಸಂದರ್ಶನಗಳಲ್ಲಿ ಭಾಗಿಯಾಗುವಂತಿಲ್ಲ. ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಯಾವುದೇ ಹೇಳಿಕೆ ನೀಡುವಂತಿಲ್ಲ.

ಆಯೋಗದ ಈ ಕ್ರಮ ಆಡಳಿತ ಪಕ್ಷ ವಿರೋಧ ಪಕ್ಷಗಳ ಮೇಲೆ ಹೇರುತ್ತಿರುವ ಒತ್ತಡದ ತಂತ್ರ ಎಂದು ಆರೋಪಿಸಿರುವ ಮಾಯಾವತಿ, ಈ ನಿಷೇಧವನ್ನು ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌‌ಗೆ ಮನವಿ ಸಲ್ಲಿಸಿದ್ದರು. ಆದರೆ, ಸುಪ್ರೀಂಕೋರ್ಟ್ ಮಾಯಾವತಿಯವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳದೆ ವಜಾಗೊಳಿಸಿದೆ.

ತಮ್ಮ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಹೇಳುವುದಕ್ಕೆ ದೇಶದ ಎಲ್ಲಾ ಪ್ರಜೆಗಳಿಗೂ ಹಕ್ಕಿದೆ. ಆದರೆ, ಚುನಾವಣಾ ಆಯೋಗವು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಈ ನಿಷೇಧ ಹೇರಿದೆ. ಆ ಮೂಲಕ ನನ್ನನ್ನು ಮೂಲಭೂತ ಹಕ್ಕುಗಳಿಂದ ವಂಚಿತಳನ್ನಾಗಿ ಮಾಡಿ ಕೆಟ್ಟದಾಗಿ ನಡೆದುಕೊಂಡಿದೆ. ಈ ಆದೇಶವು ಚುನಾವಣಾ ಆಯೋಗದ ಇತಿಹಾಸದಲ್ಲಿ ಕರಾಳ ದಿನವನ್ನಾಗಿ ನೆನಪಿಟ್ಟುಕೊಳ್ಳುವಂತಹ ಆದೇಶವಾಗಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದ ಚುನಾವಣಾ ರ‌್ಯಾಲಿಯಲ್ಲಿ ಮಾಯಾವತಿ ಮಾಡಿದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗ ಈ ನಿಷೇಧ ಹೇರಿದೆ. ಉತ್ತರ ಪ್ರದೇಶದಲ್ಲಿ ಕಳೆದ ವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಮಾಯಾವತಿ, ಮುಸ್ಲಿಮರು ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳಿಗೆ ಮಾತ್ರ ಮತನೀಡಿ, ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಡಿ. ಯಾಕೆಂದರೆ, ಬಿಜೆಪಿ ವಿರುದ್ಧ ಇರುವ ಮತಗಳು ಯಾವುದೇ ಕಾರಣಕ್ಕೂ ಹಂಚಿಹೋಗಬಾರದು ಎಂದು ಹೇಳಿದ್ದರು.

ಇತ್ತೀಚೆಗೆ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ಸಂವಿಧಾನದತ್ತವಾಗಿ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರವನ್ನು ಯಾವುದೇ ಅಳುಕಿಲ್ಲದೆ, ಆಯೋಗ ಉಪಯೋಗಿಸಬೇಕು ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಹೇಳಿದ ನಂತರ ಆಯೋಗ ಪ್ರಚೋದನಕಾರಿ ಭಾಷಣ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಅಭ್ಯರ್ಥಿ ಆಜಂಖಾನ್ ಅವರಿಗೆ 72ತಾಸು ನಿಷೇಧ ಹೇರಿದೆ. ಮಂಗಳವಾರದಿಂದ ಈ ನಿಷೇಧ ಅನ್ವಯವಾಗಲಿದೆ.

ಪ್ರಧಾನಮಂತ್ರಿಯವರಿಗೂ ಹೇಳಲಿ: ಅಖಿಲೇಶ್ ಯಾದವ್

ಚುನಾವಣಾ ಆಯೋಗವು ಮಾಯಾವತಿ ವಿರುದ್ಧ ನಿಷೇಧ ಹೇರಿದಂತೆ, ಇವರಿಗೆ ದೇಶದ ಸಮಗ್ರತೆ ಬಗ್ಗೆ ಗೌರವ ಇದ್ದರೆ, ಸೈನಿಕರು ಹಾಗೂ ಸೇನೆಯ ಹೆಸರಿನಲ್ಲಿ ಮತ ಯಾಚನೆ ಮಾಡುವುದನ್ನು ನಿಲ್ಲಿಸುವಂತೆ ಪ್ರಧಾನಮಂತ್ರಿಯವರಿಗೆ ಹೇಳಲಿ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !