ಶುಕ್ರವಾರ, ಡಿಸೆಂಬರ್ 13, 2019
24 °C

ಡಿಕೆಶಿ ಜಾಮೀನು ಅಬಾಧಿತ: ಇಡಿ ಮನವಿ ತಳ್ಳಿ ಹಾಕಿದ ಸುಪ್ರೀಂ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿ.ಕೆ.ಶಿವಕುಮಾರ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕರ್ನಾಟಕದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್‌ ನೀಡಿರುವ ಜಾಮೀನು ರದ್ದತಿಗೆ ಜಾರಿ ನಿರ್ದೇಶನಾಲಯ ಮಾಡಿಕೊಂಡ ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಳ್ಳಿಹಾಕಿತು.

‘ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ನಾಗರಿಕರನ್ನು ಈ ರೀತಿ ನಡೆಸಿಕೊಳ್ಳಬಾರದು’ ಎಂದು ಜಾರಿ ನಿರ್ದೇಶನಾಲಯದ ಅರ್ಜಿಯನ್ನು ತಳ್ಳಿಹಾಕುವ ಮೊದಲು ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅಭಿಪ್ರಾಯಪಟ್ಟರು.

ಪ್ರಕರಣದ ವಿಚಾರಣೆ ಇನ್ನೇನು ಮುಕ್ತಾಯಗೊಂಡಿತು ಎನ್ನುವಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಜಾಮೀನು ರದ್ದತಿ ಅರ್ಜಿಯನ್ನು ವಜಾ ಮಾಡಬೇಡಿ’ ಎಂದು ಮನವಿ ಮಾಡಿದರು.

ಈ ಮನವಿಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾರಿಮನ್, ಶಬರಿಮಲೆ ಕುರಿತ ನಮ್ಮ ತೀರ್ಪನ್ನು ಇನ್ನೊಮ್ಮೆ ಓದಿಕೊಳ್ಳಿ. ನಮ್ಮ ತೀರ್ಪುಗಳೊಂದಿಗೆ ಆಟವಾಡಬೇಡಿ. ನಮ್ಮ ತೀರ್ಪುಗಳಿಗೆ ಬೆಲೆಯಿದೆ ಎಂದು ನಿಮ್ಮ ಸರ್ಕಾರಕ್ಕೆ ಹೇಳಿ’ ಎಂದು ಖಾರವಾಗಿ ನುಡಿದರು.

ನ್ಯಾಯಮೂರ್ತಿಗಳ ಮಾತು ಕೇಳಿ ಆಘಾತಗೊಂಡಂತೆ ಕಂಡ ತುಷಾರ್‌ ಮೆಹ್ತಾ, ‘ಸುಪ್ರೀಂ ಕೋರ್ಟ್‌ನ ಎಲ್ಲ ತೀರ್ಪುಗಳನ್ನೂ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ, ಗೌರವಿಸುತ್ತೇವೆ’ ಎಂದು ಅನುನಯದ ದನಿಯಲ್ಲಿ ಹೇಳಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕಾಯ್ದೆಯ 45ನೇ ಸೆಕ್ಷನ್‌ ಉಲ್ಲೇಖಿಸಿರುವುದನ್ನು ಶಿವಕುಮಾರ್ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈಗಾಗಲೇ ಅನೂರ್ಜಿತಗೊಳಿಸಿರುವ ಸೆಕ್ಷನ್‌ ಪ್ರಸ್ತಾಪಿಸಿರುವುದು ತಿಳಿದ ನಂತರ ನ್ಯಾಯಮೂರ್ತಿಗಳು, ‘ನಾಗರಿಕರನ್ನು ನಡೆಸಿಕೊಳ್ಳುವ ರೀತಿ ಇದಲ್ಲ’ ಎಂದು ಎಚ್ಚರಿಕೆ ನೀಡಿತು.

2017ರಲ್ಲಿ ನ್ಯಾಯಮೂರ್ತಿ ನಾರಿಮನ್ ನೇತೃತ್ವದ ನ್ಯಾಯಪೀಠವು ಅಕ್ರಮ ಹಣ ವರ್ಗಾವಣೆ ಕಾಯ್ದೆಯ 45ನೇ ಸೆಕ್ಷನ್‌ ಅನೂರ್ಜಿತಗೊಳಿಸಿತ್ತು. ಕೇವಲ ಅನುಮಾನಗಳ ಮೇಲೆಯೇ ಅಪಾದಿತರ ಹಕ್ಕುಗಳನ್ನು ಮೊಟಕುಗೊಳಿಸುತ್ತೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

‘ಆಪಾದಿತ ಸಲ್ಲಿಸಿದ ಜಾಮೀನು ಅರ್ಜಿಯ ವಿರುದ್ಧ ಸರ್ಕಾರಿ ವಕೀಲರು ವಾದ ಮಂಡಿಸುವವರೆಗೆ ಅಥವಾ ವಾದ ಮಂಡಿಸಲು ನಿರ್ಧರಿಸುವವರೆಗೆ ಹಾಗೂ ನ್ಯಾಯಾಲಯಕ್ಕೆ ಆಪಾದಿತನು ತಪ್ಪು ಮಾಡಿಲ್ಲ ಎಂದು ಮನವರಿಕೆಯಾದರೆ ಮಾತ್ರ ಜಾಮೀನು ಮಂಜೂರು ಮಾಡಬಹುದು’ ಎಂದು ಸೆಕ್ಷನ್ 45 ಹೇಳುತ್ತಿತ್ತು.

ಸ್ವಾತಂತ್ರ್ಯದ ಹಕ್ಕಿಗೆ ಪ್ರತಿಬಂಧಕವಾಗಿರುವ ಇದೇ ಸೆಕ್ಷನ್‌ ಅನ್ನು ಮತ್ತೊಮ್ಮೆ ಉಲ್ಲೇಖಿಸಿರುವುದನ್ನು ಡಿ.ಕೆ.ಶಿವಕುಮಾರ್ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಪ್ರಸ್ತುತ ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಆಡಳಿತಾರೂಢ ಪಕ್ಷದ ನಾಯಕರಲ್ಲ. ಹೀಗಾಗಿ ಅವರಿಂದ ಸಾಕ್ಷ್ಯನಾಶದ ಸಾಧ್ಯತೆ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ₹142 ಕೋಟಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಎರಡು ತಿಂಗಳು ಜೈಲಿನಲ್ಲಿದ್ದ ಶಿವಕುಮಾರ್‌ಗೆ ಕಳೆದ ತಿಂಗಳು ದೆಹಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು