ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ತಿಗಾಗಿ ತಂದೆಯನ್ನೇ ಬ್ಲ್ಯಾಕ್‌ಮೇಲ್ ಮಾಡಿದ್ದ ಮಧು ಬಂಗಾರಪ್ಪ’

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸೊರಬ: ‘ತಾಯಿ, ತಂದೆಯನ್ನು ನಾನು ಮನೆಯಿಂದ ಹೊರಹಾಕಿದ್ದೇನೆ ಎಂದು ಪದೇ ಪದೇ ಆರೋಪ ಮಾಡುವ ಶಾಸಕ ಮಧು ಬಂಗಾರಪ್ಪ ಬಹಿರಂಗ ಚರ್ಚೆಗೆ ಬರಲಿ’ ಎಂದು ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಸವಾಲು ಹಾಕಿದರು.

‘ಆಸ್ತಿಯಲ್ಲಿ ಅಣ್ಣನಿಗೆ (ನನಗೆ) ಪಾಲು ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ತಂದೆ ಎಸ್‌. ಬಂಗಾರಪ್ಪ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ, ರಾತ್ರಿ ಸಮಯದಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದು ಇದೇ ಮಧು ಬಂಗಾರಪ್ಪ. ಈ ವಿಷಯ ಕುಟುಂಬದ ಎಲ್ಲರಿಗೂ ಗೊತ್ತಿದೆ. ನಮ್ಮ ಕುಟುಂಬದ ಮರ್ಯಾದೆ ಕಳೆಯಬಾರದು ಎನ್ನುವ ಒಂದೇ ಕಾರಣಕ್ಕೆ ಸಹಿಸಿಕೊಂಡಿದ್ದೆ. ಈಗ ಚುನಾವಣೆಯಲ್ಲಿ ಗೆಲುವು ಸಾಧಿಸಲು ನನ್ನನ್ನು ಸ್ವಾರ್ಥಿ ಎಂದು ಬಿಂಬಿಸಲಾಗುತ್ತಿದೆ. ಮತ್ತೆ ನನ್ನ ವಿರುದ್ಧ ಅದೇ ಆರೋಪ ಮಾಡುತ್ತಿದ್ದಾರೆ. ಇನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲ ವಿಷಯಗಳನ್ನೂ ಸಾಕ್ಷಿ ಸಮೇತ ಮಾಧ್ಯಮದ ಮುಂದೆ ಬಹಿರಂಗಪಡಿಸುತ್ತೇನೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಡಾ.ರಾಜ್‌ಕುಮಾರ್ ಕುಟುಂಬದ ವಕ್ತಾರನಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಅಣ್ಣಾವ್ರ ಕುಟುಂಬಕ್ಕೆ ಇಡೀ ರಾಜ್ಯದ ಜನರ ಪ್ರೀತಿ ಇದೆ. ಅದನ್ನು ಯಾರೂ ಮರೆಯಬಾರದು ಎಂದರು.

‘ತಾಲ್ಲೂಕಿನ ಅಂದವಳ್ಳಿ ರೈತ ಗಿಡ್ಡಪ್ಪ ಅವರಿಗೆ 1979ರಲ್ಲಿ ಮಂಜೂರಾದ ಗೇಣಿ ಭೂಮಿ ಖರೀದಿಗೆ ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ. ಕೊಡಲು ನಿರಾಕರಿಸಿದ್ದಕ್ಕೆ ಅವರ ಮೊಣಕಾಲಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಇಳಿದಿರುವ ಶಾಸಕ ಮತ್ತು ಅವರ ಬೆಂಬಲಿಗರು ಪ್ರಜಾಪ್ರಭುತ್ವಕ್ಕೆ ಮಾರಕ’ ಎಂದು ದೂರಿದರು.

‘ಸಮಾಜದ ಅಭಿವೃದ್ಧಿಗೆ ಖರೀದಿಸಿದ ಶರಾವತಿ ಡೆಂಟಲ್ ಕಾಲೇಜಿನ 187 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಸಂಸ್ಥಾಪಕ ಸದಸ್ಯ (ಟ್ರಸ್ಟಿ) ಆಗಿರುವ ಸಚಿವ ಕಾಗೋಡು ತಿಮ್ಮಪ್ಪ  ಅವರು ಗುಳುಂ ಆಗಿರುವ ಈ ಜಮೀನಿನ ಕುರಿತು ತುಟಿ ಬಿಚ್ಚಲಿಲ್ಲ. ಈ ಗುರು–ಶಿಷ್ಯರು ಸಮಾಜದ ಆಸ್ತಿ ಕೊಳ್ಳೆ ಹೊಡೆಯಲು ನಿಂತಿರುವ ತಿಮಿಂಗಿಲಗಳು’ ಎಂದು ಕುಟುಕಿದರು.

**

ಕಾಗೋಡು ತಮ್ಮ ಘನತೆ ಅರಿತು ಮಾತನಾಡಬೇಕು. ಕೀಳುಮಟ್ಟದ ಭಾಷೆ ಬಳಸಿ ಗೌರವ ಕಡಿಮೆ ಮಾಡಿಕೊಳ್ಳಬಾರದು
- ಕುಮಾರ್ ಬಂಗಾರಪ್ಪ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT