ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ದೇಶದ ಮೊದಲ ಮೆಷಿನ್ ಟೂಲ್ ಹಬ್

Last Updated 10 ಫೆಬ್ರುವರಿ 2018, 16:31 IST
ಅಕ್ಷರ ಗಾತ್ರ

ತುಮಕೂರು: ಪುಣೆ, ಚೆನ್ನೈ, ಹರಿಯಾಣ ರಾಜ್ಯದ ಕೆಲ ನಗರಗಳು ಆಟೊ ಹಬ್‌ಗಳಾಗಿದ್ದು, ತುಮಕೂರು ದೇಶದ ಮೆಷಿನ್ ಟೂಲ್ ಹಬ್ ಆಗಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಅನಂತ ಜಿ.ಗೀತೆ ಹೇಳಿದರು.

ಶನಿವಾರ ತುಮಕೂರು ತಾಲ್ಲೂಕು ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತುಮಕೂರು ಮೆಷಿನ್ ಟೂಲ್ ಪಾರ್ಕ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ದೇಶ, ವಿದೇಶಕ್ಕೆ ಪೂರೈಕೆಯಾಗುತ್ತಿರುವ ಮೆಷಿನ್ ಟೂಲ್‌ಗಳಲ್ಲಿ ಶೇ 50ರಷ್ಟು ಕರ್ನಾಟಕದಿಂದಲೇ ಪೂರೈಕೆಯಾಗುತ್ತಿದೆ. ಹೀಗಾಗಿ, ಇಲ್ಲಿ ಮೆಷಿನ್ ಟೂಲ್ ಪಾರ್ಕ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಉತ್ಸುಕತೆ ತೋರಿತು. ಕರ್ನಾಟಕದಲ್ಲಿ ಕೈಗಾರಿಕೆ ಉತ್ತೇಜನ ಕಾರ್ಯಕ್ಕೆ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.

ಕೈಗಾರಿಕೆ ಸ್ಥಾಪನೆಗೆ ಭೂಮಿ ಕಳೆದುಕೊಂಡ ಕುಟುಂಬಗಳಲ್ಲಿ ಒಬ್ಬರಿಗೆ ಉದ್ಯೋಗ ಕಲ್ಪಿಸಬೇಕು. ಕೇಂದ್ರ ಸರ್ಕಾರವೇ ಭೂಸ್ವಾಧೀನ ಕಾಯ್ದೆ ತಿದ್ದುಪಡಿಯಲ್ಲಿ ಇದನ್ನು ಉಲ್ಲೇಖಿಸಿದೆ. ರಾಜ್ಯ ಸರ್ಕಾರವು ಈ ದಿಶೆಯಲ್ಲಿ ಒತ್ತು ಕೊಡಬೇಕು. ಕೈಗಾರಿಕೋದ್ಯಮಿಗಳೂ ಬರೀ ಲಾಭದ ದೃಷ್ಟಿಕೋನ ನೋಡದೇ ರೈತರ ಮಕ್ಕಳಿಗೆ ಉದ್ಯೋಗ ಕಲ್ಪಿಸಿದರೆ ಅವರ ಕುಟುಂಬಕ್ಕೆ ಆಗುವ ಅನುಕೂಲಗಳ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.

ಯುವಕರಿಗೆ ಉದ್ಯೋಗ ಕಲ್ಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದ್ದು, ಈ ಗುರಿ ಸಾಧನೆಗೆ ಕರ್ನಾಟಕ ರಾಜ್ಯ ಸರ್ಕಾರವೂ ಕೈ ಜೋಡಿಸಿರುವುದು ಶ್ಲಾಘನೀಯ. ಕೃಷಿ ಕ್ಷೇತ್ರ ಬಿಟ್ಟರೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಾಗುವುದು ಕೈಗಾರಿಕೆಗಳ ಸ್ಥಾಪನೆಯಿಂದ ಮಾತ್ರ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪಿ.ಸುಧಾಕರ್‌ ಲಾಲ್ ಮಾತನಾಡಿ, ‘ಏಷ್ಯಾದಲ್ಲಿಯೇ ವಸಂತನರಸಾಪುರ ಕೈಗಾರಿಕಾ ಪ್ರದೇಶ ದೊಡ್ಡದಾಗಿದೆ. ಆದರೆ, ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ನಿರೀಕ್ಷಿತ ಉದ್ಯೋಗ ಲಭಿಸಿಲ್ಲ. ಭೂಮಿ ಕಳೆದುಕೊಂಡವರ ಸಮಸ್ಯೆ ಅರ್ಥ ಮಾಡಿಕೊಂಡು ಕೈಗಾರಿಕೆಗಳು ಮಾನವೀಯ ನೆಲೆಗಟ್ಟಿನಲ್ಲಿ ಉದ್ಯೋಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಪಿ.ಸುಧಾರಕರಾಲ್, ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಷರರ್‌ ಅಸೋಸಿಯೇಷನ್ ಅಧ್ಯಕ್ಷ ಪಿ.ರಾಮದಾಸ್ ಮಾತನಾಡಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್, ಬೃಹತ್ ಕೈಗಾರಿಕೆಗಳ ಇಲಾಖೆ ಜಂಟಿ ಕಾರ್ಯದರ್ಶಿ ಶಿವಾನಂದ್ ವೇದಿಕೆಯಲ್ಲಿದ್ದರು. ತುಮಕೂರು ಮೆಷಿನ್ ಟೂಲ್ ಪಾರ್ಕ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಅನಿರುದ್ಧ್ ಶ್ರವಣ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT