ಭಾನುವಾರ, ಸೆಪ್ಟೆಂಬರ್ 22, 2019
22 °C
ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಕಾವ್ಯ

ಟ್ಯಾಗೋರ್‌ ಪದ್ಯಸಾಲು ಬೈದಾಟಕ್ಕೆ ಬಳಕೆ

Published:
Updated:
Prajavani

ಕೋಲ್ಕತ್ತ: ವಿವಿಧ ರಾಜಕೀಯ ಪಕ್ಷಗಳ ನಾಯಕರು ಪಶ್ಚಿಮ ಬಂಗಾಳದಲ್ಲಿ ಬೇರೆ ಬೇರೆ ವಿಚಾರಗಳನ್ನು ಇಟ್ಟುಕೊಂಡು ಬೈದಾಡಿಕೊಂಡಿದ್ದಾರೆ. ರಾಮ ನವಮಿ, ಹನುಮ ಜಯಂತಿ, ಜೈ ಶ್ರೀರಾಮ್‌ ಘೋಷಣೆಗಳೆಲ್ಲವೂ ಪರಸ್ಪರರನ್ನು ದೂಷಿಸಲು ಬಳಕೆಯಾಗಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ನೊಬೆಲ್‌ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್‌ ಅವರ ಹೆಸರೂ ರಾಜಕೀಯ ಕೆಸರೆರಚಾಟಕ್ಕೆ ಬಳಕೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ರ್‍ಯಾಲಿಗಳಲ್ಲಿ ಮಾತನಾಡುವಾಗ ಕೆಲವು ವಾಕ್ಯಗಳನ್ನು ಬಂಗಾಳಿ ಭಾಷೆಯಲ್ಲಿ ಆಡುವ ರೂಢಿ ಮಾಡಿಕೊಂಡಿದ್ದಾರೆ. ಬಂಗಾಳಿ ಭಾವನಾತ್ಮಕತೆಯನ್ನು ಮತವಾಗಿ ಪರಿವರ್ತಿಸುವುದು ಇದರ ಉದ್ದೇಶ. ಆದರೆ, ಇತ್ತೀಚಿನ ಸಮಾವೇಶವೊಂದರಲ್ಲಿ ಅವರು ‘ಗುರುದೇವ್‌ ಅಮರ್‌ ರಹೇ’ ಎಂದು ಘೋಷಣೆ ಕೂಗಿ ಅಚ್ಚರಿ ಹುಟ್ಟಿಸಿದರು. ಸೇರಿದ್ದ ಜನರಿಂದ ಇದಕ್ಕೆ ಭಾರಿ ಕರತಾಡನದ ಪ್ರತಿಕ್ರಿಯೆಯೂ ವ್ಯಕ್ತವಾಯಿತು. 

ಟ್ಯಾಗೋರ್‌ ಉಲ್ಲೇಖ ಘೋಷಣೆಗಷ್ಟೇ ಸೀಮಿತವಲ್ಲ. ಪರಸ್ಪರರನ್ನು ಟೀಕಿಸಲು, ಹಂಗಿಸಲು ಟ್ಯಾಗೋರ್‌ ಅವರ ಕವಿತೆಗಳ ಪ್ರಸಿದ್ಧ ಸಾಲುಗಳನ್ನು ಮೋದಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಯಥೇಚ್ಛವಾಗಿ ಬಳಸಿದ್ದಾರೆ. 

‘ಎಲ್ಲಿ ಮನಗಳುಕಿರದೋ’ ಎಂಬ ಟ್ಯಾಗೋರ್‌ ಅವರ ಸಾಲನ್ನು ಉಲ್ಲೇಖಿಸಿದ್ದ ಮೋದಿ ಟಿಎಂಸಿ ವಿರುದ್ಧ ಹರಿಹಾಯ್ದಿದ್ದರು. ಮಮತಾ ಅವರು ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಕಾಂಗ್ರೆಸ್‌ ಅಥವಾ ಸಿಪಿಎಂ ಎಂದೂ ಟ್ಯಾಗೋರ್‌ ಅವರ ಆದರ್ಶಗಳ ಬಗ್ಗೆ ಯೋಚನೆ ಮಾಡಿಲ್ಲ. ಈ ಎರಡೂ ಪಕ್ಷಗಳು ಕಿರುಕುಳ ನೀಡಿಕೆಯ ಮೂಲಕವೇ ಅಧಿಕಾರಕ್ಕೇ ಏರಲು ಯತ್ನಿಸಿದ್ದವು. ಟ್ಯಾಗೋರ್ ಬಗ್ಗೆ ಟಿಎಂಸಿಗೂ ಯಾವುದೇ ಕಾಳಜಿ ಇಲ್ಲ ಎಂದೂ ಮೋದಿ ಹೇಳಿದ್ದರು. 

ಪಶ್ಚಿಮ ಬಂಗಾಳದ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾವಂತ ಮತ್ತು ಮಧ್ಯಮ ವರ್ಗದಲ್ಲಿ ಟ್ಯಾಗೋರ್‌ ಬಗ್ಗೆ ಇರುವ ಅಭಿಮಾನವೇ ರಾಜಕೀಯ ಪಕ್ಷಗಳು ಈ ಕವಿಯ ಬಗ್ಗೆ ಆಸಕ್ತಿ ತಾಳಲು ಕಾರಣ. 

ಟ್ಯಾಗೋರ್‌ ಮತ್ತು ಬಂಗಾಳದ ಇತರ ಕವಿಗಳ ಸಾಲುಗಳನ್ನು ಮಮತಾ ಅವರು ಆಗಾಗ ಉದ್ಧರಿಸುತ್ತಾರೆ. ಬಿಜೆಪಿಯನ್ನು ಲೇವಡಿ ಮಾಡಲು ಕೂಡ ಅವರು ಟ್ಯಾಗೋರ್‌ ಅವರ ಕವನದ ಸಾಲುಗಳನ್ನು ಬಳಸಿದ್ದಾರೆ. ಬ್ರಿಟಿಷರ ವಿಭಜನೆ ತಂತ್ರದ ವಿರುದ್ಧ ಟ್ಯಾಗೋರ್‌ ಅವರು ರಕ್ಷಾ ಬಂಧನವನ್ನು ಬಳಸಿಕೊಂಡಿದ್ದರು. ಆದರೆ, ಸಮುದಾಯಗಳ ನಡುವೆ ಗಲಭೆ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು. ಟ್ಯಾಗೋರ್‌ ಅವರು ಈಗ ಜೀವಿಸಿದ್ದಿದ್ದರೆ ವಿಭಜನಕಾರಿ ಚಟುವಟಿಕೆಗಳಿಗೆ ತಡೆ ಒಡ್ಡಲು ರಕ್ಷಾ ಬಂಧನವನ್ನು ಬಳಸಿಕೊಳ್ಳುತ್ತಿದ್ದರು ಎಂದು ಮಮತಾ ಹೇಳಿದ್ದಾರೆ. 

ಬಿಜೆಪಿ ಹಿಂದಿ ಭಾಷಿಕ ಪ‍್ರದೇಶದ ಪಕ್ಷ. ಆ ಪಕ್ಷಕ್ಕೆ ಬಂಗಾಳದ ಬಗ್ಗೆ ಏನೇನೂ ತಿಳಿದಿಲ್ಲ ಎಂಬುದು ಮಮತಾ ಅವರು ಸದಾ ಹೇಳುವ ಮಾತು. ಅದಕ್ಕೆ ತಿರುಗೇಟು ಕೊಡುವ ಉದ್ದೇಶವೂ ಟ್ಯಾಗೋರ್‌ ಅವರನ್ನು ಉಲ್ಲೇಖಿಸುವುದರ ಹಿಂದೆ ಬಿಜೆಪಿ ಹೊಂದಿರುವ ಉದ್ದೇಶ ಎಂದು ರಾಜಕೀಯ ವಿಶ್ಲೇಷಕ ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಪ್ರಾಧ್ಯಾಪ‍ಕ ವಿಶ್ವನಾಥ ಚಕ್ರವರ್ತಿ ಹೇಳುತ್ತಾರೆ.

Post Comments (+)