ತಮಿಳುನಾಡು ಉಪಚುನಾವಣೆ: 9 ಸ್ಥಾನ ಗೆದ್ದು ಅಧಿಕಾರ ಉಳಿಸಿಕೊಂಡ ಎಐಎಡಿಎಂಕೆ

ಸೋಮವಾರ, ಜೂನ್ 17, 2019
28 °C

ತಮಿಳುನಾಡು ಉಪಚುನಾವಣೆ: 9 ಸ್ಥಾನ ಗೆದ್ದು ಅಧಿಕಾರ ಉಳಿಸಿಕೊಂಡ ಎಐಎಡಿಎಂಕೆ

Published:
Updated:

ಚೆನ್ನೈ: ಲೋಕಸಭಾ ಚುನಾವಣೆಯಲ್ಲಿನ ದಯನೀಯ ಸೋಲಿನ ನಡುವೆಯೂ, ತಮಿಳುನಾಡು ವಿಧಾನಸಭೆಯ ಉಪಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಉಳಿಸಿಕೊಳ್ಳುವಲ್ಲಿ ಎಐಎಡಿಎಂಕೆ ಯಶಸ್ವಿಯಾಗಿದೆ. 

ವಿಧಾನಸಭೆ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಎಂಕೆ ಕೂಡ ತನ್ನ ಬಲವನ್ನು 101ಕ್ಕೆ ಹೆಚ್ಚಿಸಿಕೊಂಡಿದೆ. ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಹಲವು ವರ್ಷಗಳ ನಂತರ, ಇದೇ ಮೊದಲ ಬಾರಿಗೆ 100ರ ಗಡಿ ದಾಟಿದೆ. ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಶೇಕಡ 45.1ರಷ್ಟು ಮತಗಳನ್ನು ಪಡೆದಿದ್ದರೆ, ಎಐಎಡಿಎಂಕೆ ಶೇಕಡ 38.2ರಷ್ಟು ಮತಗಳನ್ನು ಗಳಿಸಿದೆ.

ಅನರ್ಹತೆಯಿಂದ ಉಪಚುನಾವಣೆ: ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ವಿರುದ್ಧ ಬಂಡಾಯ ಎದ್ದಿದ್ದ ಎಐಎಡಿಎಂಕೆಯ 18 ಶಾಸಕರನ್ನು 2017ರಲ್ಲಿ ಅನರ್ಹಗೊಳಿಸಲಾಗಿತ್ತು. ಶಾಸಕರ ನಿಧನದಿಂದಾಗಿ ನಾಲ್ಕು ಸ್ಥಾನಗಳು ತೆರವಾಗಿದ್ದವು. ಈ ಹಿನ್ನೆಲೆಯಲ್ಲಿ 22 ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. 

ಈ ಪೈಕಿ, 9 ಸ್ಥಾನಗಳನ್ನು ಗೆಲ್ಲುವ ಮೂಲಕ ಎಐಎಡಿಎಂಕೆಯ ಒಟ್ಟು ಶಾಸಕರ ಸಂಖ್ಯೆ 123ಕ್ಕೆ ಏರಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 117 ಸ್ಥಾನಗಳು ಬೇಕು.

ಲೋಕಸಭೆ ಚುನಾವಣೆ: ಡಿಎಂಕೆ ಮೈತ್ರಿಕೂಟಕ್ಕೆ 37 ಸ್ಥಾನ

ವಿಧಾನಸಭೆ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ಪಡೆಯುವಲ್ಲಿ ವಿಫಲವಾದ ಡಿಎಂಕೆ ನೇತೃತ್ವದ ಮೈತ್ರಿಕೂಟ, ಲೋಕಸಭಾ ಚುನಾವಣೆಯಲ್ಲಿ 38 ಸ್ಥಾನಗಳ ಪೈಕಿ 37ರಲ್ಲಿ ಗೆಲ್ಲುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ. 

ಸ್ವತಃ ಡಿಎಂಕೆ 23 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದೆ. ಡಿಎಂಕೆ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಎಂಟು, ಸಿಪಿಎಂ ಮತ್ತು ಸಿಪಿಐ ತಲಾ ಎರಡು ಹಾಗೂ ಐಯುಎಂಎಲ್‌ ಮತ್ತು ವಿಸಿಕೆ ತಲಾ ಒಂದು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿವೆ. ವಿರೋಧ ಪಕ್ಷ ಎಐಎಡಿಎಂಕೆ ಒಂದು ಸ್ಥಾನ ಮಾತ್ರ ಪಡೆದಿದೆ. 

2011ರ ನಂತರದ ಚುನಾವಣೆಗಳಲ್ಲಿ ಇದು ಡಿಎಂಕೆಯ ಅತ್ಯುತ್ತಮ ಪ್ರದರ್ಶನವಾಗಿದೆ. 2021ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಎಂಕೆಯ ಈ ಸಾಧನೆ, ಎಐಎಡಿಎಂಕೆಗೆ ಎಚ್ಚರಿಕೆಯ ಗಂಟೆಯಾಗಿದೆ.

ತಮಿಳುನಾಡಿನಲ್ಲಿ ಒಟ್ಟು 39 ಲೋಕಸಭಾ ಕ್ಷೇತ್ರಗಳಿವೆ. ಆದರೆ, ವೆಲ್ಲೂರು ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಅಕ್ರಮ ಹಣ ಪತ್ತೆಯಾಗಿದ್ದರಿಂದ ಆಯೋಗವು ಇಲ್ಲಿ ಚುನಾವಣೆಯನ್ನು ರದ್ದುಗೊಳಿಸಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !