ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಪ್ರತಿಭಟನೆ ಸಮರ್ಥನೀಯವಲ್ಲ ಎಂದ ಕೇರಳ ಹೈಕೋರ್ಟ್

Last Updated 8 ನವೆಂಬರ್ 2018, 14:31 IST
ಅಕ್ಷರ ಗಾತ್ರ

ಕೊಚ್ಚಿ:‘ಶಬರಿಮಲೆ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ದಿಕ್ಕರಿಸಿ ಪ್ರತಿಭಟನೆ ನಡೆಸಿದ್ದು ಸಮರ್ಥನೀಯವಲ್ಲ’ ಎಂದು ಕೇರಳ ಹೈಕೋರ್ಟ್ ಹೇಳಿದೆ.

ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಮಹಿಳೆಯರನ್ನು ತಡೆದ ಮತ್ತು ಹಿಂಸಾಚಾರ ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ ಗೋವಿಂದ್ ಮಧುಸೂದನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸುನಿಲ್ ಥಾಮಸ್ ಹೀಗೆ ಹೇಳಿದ್ದಾರೆ.

‘ಈ ಪ್ರತಿಭಟನೆಗಳಿಂದ ಭಕ್ತಾದಿಗಳಿಗೆ ತೀರಾ ತೊಂದರೆಯಾಗಿದೆ. ತೊಂದರೆ ಕೊಟ್ಟವರಿಗೆ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇಂತಹ ಘಟನೆಗಳು ಮತ್ತೆ ಮರುಕಳಿಸುತ್ತವೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ’ ಎಂದು ಥಾಮಸ್ ಸ್ಪಷ್ಟಪಡಿಸಿದರು.

10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಮತ್ತು 50 ವರ್ಷಕ್ಕಿಂತ ಹಿರಿಯ ಮಹಿಳೆಯರಿಗೆ ಮಾತ್ರ ಶಬರಿಮಲೆ ದೇವಾಲಯಕ್ಕೆ ಪ್ರವೇಶ ಅವಕಾಶ ನೀಡಲಾಗುತ್ತಿತ್ತು. ಇದನ್ನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌ ‘ಎಲ್ಲಾ ವಯಸ್ಸಿನ ಮಹಿಳೆಯರೂ ದೇವಾಲಯ ಪ್ರವೇಶಿಸಬಹುದು’ ಎಂದು ಹೇಳಿತ್ತು. ಅದರ ಅನ್ವಯ ದೇವಾಲಯ ಪ್ರವೇಶಿಸಲು ಯತ್ನಿಸಿದ ಮಹಿಳೆಯರು ಮತ್ತು ಸ್ಥಳದಲ್ಲಿದ್ದ ಪತ್ರಕರ್ತೆಯರ ಮೇಲೆ ಹಲವು ಭಕ್ತಾದಿಗಳು ಹಲ್ಲೆ ನಡೆಸಿದ್ದರು.ಕೋರ್ಟ್‌ನ ಈ ತೀರ್ಪಿನ ವಿರುದ್ಧ ಕೇರಳ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಪ್ರಧಾನ ಅರ್ಚಕರಿಗೆ ನೋಟಿಸ್:ಶಬರಿಮಲೆ ಪ್ರಧಾನ ಅರ್ಚಕ ಕಂಡರರ್‌ ರಾಜೀವರು ಅವರಿಗೆ ತಿರುವನಂತಪುರ ದೇವಸ್ವಂ ಮಂಡಳಿಯು ನೋಟಿಸ್ ನೀಡಿದೆ.

‘ಮಹಿಳೆಯರು ದೇವಾಲಯ ಪ್ರವೇಶಿಸದರೆ ಬಾಗಿಲು ಮುಚ್ಚುತ್ತೇನೆ ಎಂದು ಶಬರಿಮಲೆ ಪ್ರಧಾನ ಅರ್ಚಕ ಬೆದರಿಕೆ ಹಾಕುವ ಮುನ್ನ ಆ ಬಗ್ಗೆ ನನ್ನ ಜತೆ ಚರ್ಚಿಸಿದ್ದರು ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ನೀಡಿದ್ದ ಹೇಳಿಕೆ ಸಂಬಂಧ ವಿವರಣೆ ನೀಡಿ’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

‘ಬಿಜೆಪಿ ಅಧ್ಯಕ್ಷರ ಹೇಳಿಕೆಯನ್ನು ರಾಜೀವರು ಈಗಾಗಲೇ ಸಾರ್ವಜನಿಕವಾಗಿಯೇ ಅಲ್ಲಗೆಳೆದಿದ್ದಾರೆ. ರಾಜೀವರು ಅವರ ಮೇಲೆ ನಮಗೆ ನಂಬಿಕೆ. ಆದರೆ ಔಪಚಾರಿಕವಾಗಿ ಮಾತ್ರ ನೋಟಿಸ್ ನೀಡಿದ್ದೇವೆ. ಅವರ ಮೇಲೆ ಯಾವುದೇ ಕ್ರಮ ತೆಗದುಕೊಳ್ಳುವುದಿಲ್ಲ’ ಎಂದು ಮಂಡಳಿಯು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT