ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ವಿಧಾನಸಭೆ ಚುನಾವಣೆ: ಕೆಸಿಆರ್‌ ಪ್ರಚಾರ ಭರಾಟೆ, ಸೀಟು ಹಂಚಿಕೆ ತಂಟೆ

Last Updated 26 ಅಕ್ಟೋಬರ್ 2018, 16:50 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರ ಮತ್ತು ಇತರ ಸಿದ್ಧತೆಯ ವಿಚಾರದಲ್ಲಿ ಕೆ. ಚಂದ್ರಶೇಖರ ರಾವ್‌ (ಕೆಸಿಆರ್‌) ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್‌) ಇತರ ಪಕ್ಷಗಳಿಗಿಂತ ಬಹಳ ಮುಂದಕ್ಕೆ ಸಾಗಿದೆ. ಒಟ್ಟು 119 ಕ್ಷೇತ್ರಗಳಲ್ಲಿ ಡಿಸೆಂಬರ್‌ 7ರಂದು ನಡೆಯಲಿರುವ ಚುನಾವಣೆಗೆ 112 ಅಭ್ಯರ್ಥಿಗಳ ಪಟ್ಟಿಯನ್ನು ಕೆಸಿಆರ್‌ ಈಗಾಗಲೇ ಬಿಡುಗಡೆ ಮಾಡಿದ್ದಾರೆ.

ಟಿಆರ್‌ಎಸ್‌ಗೆ ಹೋಲಿಸಿದರೆ ಇತರ ಪಕ್ಷಗಳು ಮಹಾ ಮೈತ್ರಿಕೂಟವನ್ನು ಹೊಂದಿಸಿಕೊಳ್ಳುವುದರಲ್ಲಿ ಮಗ್ನವಾಗಿವೆ. ಕಾಂಗ್ರೆಸ್‌, ಟಿಡಿಪಿ, ಸಿಪಿಐ ಮತ್ತು ಹೊಸ ಪಕ್ಷ ತೆಲಂಗಾಣ ಜನ ಸಮಿತಿ (ಟಿಜೆಎಸ್‌) ಮೈತ್ರಿ ಮಾಡಿಕೊಂಡಿವೆ. ಚುನಾವಣೆಗೆ ಆರು ವಾರಗಳಷ್ಟೇ ಇವೆ. ಹಾಗಿದ್ದರೂ ಮೈತ್ರಿ ಕೂಟದ ಪಕ್ಷಗಳ ನಡುವೆ ಸ್ಥಾನ ಹಂಚಿಕೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ.

35–40 ಕ್ಷೇತ್ರಗಳಿಗೆ ಟಿಜೆಎಸ್‌ ಬೇಡಿಕೆ ಇರಿಸುವುದರೊಂದಿಗೆ ಸೀಟು ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ. ಖಚಿತವಾಗಿ ಗೆಲ್ಲುವ ಭರವಸೆ ಇರುವ 20–25 ಕ್ಷೇತ್ರಗಳಿಗೆ ಟಿಡಿಪಿ ಬೇಡಿಕೆ ಇರಿಸಿದ್ದರೆ ಸಿಪಿಐ 12 ಸ್ಥಾನಗಳನ್ನು ಕೇಳಿದೆ. ಕರ್ನಾಟಕದಲ್ಲಿನ ಸರ್ಕಾರ ರಚನೆಯ ಮಾದರಿಯ ಬಳಿಕ ಕಾಂಗ್ರೆಸ್‌ ಪಕ್ಷವು ಹೆಚ್ಚು ಉದಾರಿಯಾಗುವ ಭರವಸೆ ಹುಟ್ಟಿಸಿತ್ತು. ಆದರೆ ತೆಲಂಗಾಣದಲ್ಲಿ ಮಿತ್ರ ಪಕ್ಷಗಳಿಗೆ 20–25 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಸಾಧ್ಯ ಎಂದು ಹಟ ಹಿಡಿದಿದೆ.

‘ಆರಂಭದಲ್ಲಿ ಕೆಲವು ತೊಡಕುಗಳು ಎದುರಾಗಿರುವುದು ನಿಜ. ಆದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಿಕೊಂಡು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ’ ಎಂದು ತೆಲಂಗಾಣ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕ್ಯಾಪ್ಟನ್‌ ಉತ್ತಮ್‌ ಕುಮಾರ್‌ ರೆಡ್ಡಿ ಹೇಳಿದ್ದಾರೆ. ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ‘ಕ್ಷೇತ್ರಗಳಿಗೆ ಬೇಡಿಕೆ ಇರಿಸುವಾಗ ವಾಸ್ತವಿಕವಾಗಿ ಯೋಚಿಸಿ, ಸೀಟು ಹಂಚಿಕೆ ವಿಳಂಬವಾದಷ್ಟು ಟಿಆರ್‌ಎಸ್‌ಗೆ ಲಾಭ’ ಎಂದು ತಮ್ಮ ಪಕ್ಷದ ಮುಖಂಡರಿಗೆ ಅವರು ಸೂಚಿಸಿದ್ದಾರೆ.

ಖಾನಾಪುರ, ವರಂಗಲ್‌ ಮತ್ತು ಇತರೆಡೆಗಳಲ್ಲಿ ಟಿಆರ್‌ಎಸ್‌ನೊಳಗೆ ಬಂಡಾಯದ ಬಾವುಟ ಹಾರಿದೆ. ಇಂತಹ ಬಂಡಾಯಗಳ ನಡುವೆಯೂ ಐದು ರ್‍ಯಾಲಿಗಳನ್ನು ನಡೆಸುವಲ್ಲಿ ಟಿಆರ್‌ಎಸ್‌ ಯಶಸ್ವಿಯಾಗಿದೆ.

ಟಿಡಿಪಿ ಆಂಧ್ರದ ಪಕ್ಷ ಎಂದು ಬಣ್ಣಿಸುವುದಕ್ಕೆ ಕೆಸಿಆರ್‌ಗೆ ಬಹಳ ಇಷ್ಟ. ರಾಜ್ಯ ವಿಭಜನೆ ಸಂದರ್ಭದಲ್ಲಿ ಇದು ಕಿಡಿ ಹೊತ್ತಿಸುತ್ತಿದ್ದ ಬಣ್ಣನೆ. ಈಗಲೂ ಇದರ ಮೂಲಕ ಭಾವನೆಗಳನ್ನು ಕೆರಳಿಸುವುದು ಅವರ ಉದ್ದೇಶ.

ಇನ್ನೊಂದು ಸುತ್ತಿನ ಪ್ರಚಾರಕ್ಕೆ ಕೆಸಿಆರ್‌ ಸಜ್ಜಾಗಿದ್ದಾರೆ. ಅಭ್ಯರ್ಥಿಗಳ ಪ್ರಚಾರಕ್ಕೆ ನೆರವಾಗವುದಕ್ಕಾಗಿ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಅವರು ಈಗಾಗಲೇ ಪ್ರಕಟಿಸಿದ್ದಾರೆ. ನೀರಾವರಿ ಯೋಜನೆಗಳು, ಹೈದರಾಬಾದ್‌ನ ತ್ವರಿತ ಅಭಿವೃದ್ಧಿ, ಮನೆ ಹಂಚಿಕೆಯಂತಹ ಯೋಜನೆಗಳು ಚುನಾವಣೆಯಲ್ಲಿ ಗೆಲುವು ತಂದುಕೊಡಬಲ್ಲವು ಎಂದು ಟಿಆರ್‌ಎಸ್‌ ನಂಬಿದೆ.

**

ರಫೇಲ್‌ ಚುಂಗು ಹಿಡಿದು ಗೆಲುವಿನತ್ತ ನೋಟ
ರಾಜ್ಯ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ಅದರಲ್ಲೂ ಮುಖ್ಯವಾಗಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ರಫೇಲ್‌ ಹಗರಣ ಆರೋಪ ಮತ್ತು ಸಿಬಿಐ ನಿರ್ದೇಶಕರ ಕಡ್ಡಾಯ ರಜೆ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿವೆ ಎಂದು ಕಾಂಗ್ರೆಸ್‌ ಮುಖಂಡರು ನಂಬಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ನೀತಿಗಳ ವೈಫಲ್ಯಗಳ ಕುರಿತು ಕಾಂಗ್ರೆಸ್‌ ರವಾನಿಸುತ್ತಿರುವ ಸಂದೇಶ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿದೆ. ಹಾಗಾಗಿ ಮೋದಿ ಅವರ ಮಾತನ್ನು ಜನರು ಇನ್ನು ಮುಂದೆ ಅನುಮಾನದಿಂದಲೇ ನೋಡುತ್ತಾರೆ. ಕಾಂಗ್ರೆಸ್‌ ನಡೆಸಿದ ಸಮೀಕ್ಷೆಯಲ್ಲಿ ಕೂಡ ಗ್ರಾಮೀಣ ಪ್ರದೇಶದ ಶೇ 75ರಷ್ಟು ಜನರು ರಫೇಲ್‌ ಎಂದರೆ ಹಗರಣ ಎಂದೇ ಗುರುತಿಸುತ್ತಾರೆ ಎಂದು ಕಾಂಗ್ರೆಸ್‌ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಕಾರಣಕ್ಕಾಗಿಯೇ ಸಿಬಿಐ ನಿರ್ದೇಶಕರ ಕಡ್ಡಾಯ ರಜೆ ಪ್ರಕರಣವನ್ನು ರಫೇಲ್‌ಗೆ ತಳಕು ಹಾಕಲು ಕಾಂಗ್ರೆಸ್‌ ನಿರ್ಧರಿಸಿತು. ರಫೇಲ್‌ ಪ್ರಸ್ತಾವ ಆದಾಗಲೆಲ್ಲ ಅನಿಲ್‌ ಅಂಬಾನಿಯವರ ಕಂಪನಿಗೆ ₹30 ಸಾವಿರ ಕೋಟಿ ಲಾಭವಾಗಿದೆ ಎಂಬುದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಮೋದಿ ಅವರು ವಾಕ್ಚಾತುರ್ಯಕ್ಕೆ ಪ್ರಸಿದ್ಧ. ಅವರ ಸಮಾವೇಶಗಳಿಗೆ ಭಾರಿ ಸಂಖ್ಯೆಯಲ್ಲಿ ಜನರೂ ಸೇರುತ್ತಾರೆ. ಆದರೆ, ತಳಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷ ಗಳಿಸಿದ ಜನಪ್ರೀತಿಯನ್ನು ಇನ್ನು ಮುಂದೆ ಮಾತಿನ ಮೂಲಕ ತೊಡೆದು ಹಾಕುವುದು ಮೋದಿ ಅವರಿಗೆ ಸುಲಭವಲ್ಲ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರೊಬ್ಬರೇ ಬಿಜೆಪಿಯನ್ನು ಗೆಲ್ಲಿಸಬಲ್ಲರು ಎಂಬುದು ಈಗ ನಿಜವಲ್ಲ. ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ ಪರ ಒಲವು ಇದೆ. ಆದರೆ, ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ ಇನ್ನೂ ಸಾಕಷ್ಟು ಕೆಲಸ ಮಾಡಬೇಕು ಎಂದು ಅವರು ವಿಶ್ಲೇಷಿಸಿದ್ದಾರೆ.

**

ಟಿಕೆಟ್‌ ವಂಚಿತ ಎಂಎಲ್‌ಸಿ ರಾಮುಲು ನಾಯ್ಕ್‌, ಖಾನಾಪುರ ಶಾಸಕ ರಮೇಶ್‌ ರಾಥೋಡ್‌ ಟಿಆರ್‌ಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ

ವರಂಗಲ್‌ನ ಟಿಆರ್‌ಎಸ್‌ ಶಾಸಕಿ ಕೊಂಡ ಸುರೇಖಾ ಕಾಂಗ್ರೆಸ್‌ಗೆ ವಲಸೆ ಹೋಗಿದ್ದಾರೆ

ಗಜ್ವೇಲ್‌ನ ಮಾಜಿ ಶಾಸಕ ನರ್ಸಾ ರೆಡ್ಡಿಯನ್ನು ಟಿಆರ್‌ಎಸ್‌ ಅಮಾನತು ಮಾಡಿದೆ

2014ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ರೆಡ್ಡಿ, ಬಳಿಕ ಟಿಆರ್‌ಎಸ್‌ ಸೇರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT