ಶನಿವಾರ, ಸೆಪ್ಟೆಂಬರ್ 19, 2020
27 °C

ತೆಲಂಗಾಣ: ಇವಿಎಂ ದುರ್ಬಳಕೆಯಾಗಿದೆ; ಮುಖ್ಯ ಚುನಾವಣಾ ಅಧಿಕಾರಿಗೆ ಕಾಂಗ್ರೆಸ್‌ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ ಎಣಿಕೆ ಪ್ರಾರಂಭದಿಂದಲೂ ಮುನ್ನಡೆ ಸಾಧಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಎರಡನೇ ಬಾರಿಗೆ ಸರ್ಕಾರ ರಚಿಸುವುದು ಖಚಿತವಾಗಿದೆ. ಟಿಆರ್‌ಎಸ್‌ ಬಹುಮತ ಗಳಿಸುವುದು ಸ್ಪಷ್ಟವಾಗುತ್ತಿದ್ದಂತೆ ಎಲೆಕ್ಟ್ರಾನಿಕ್‌ ಮತಯಂತ್ರ(ಇವಿಎಂ)ಗಳ ದುರ್ಬಳಕೆಯಾಗಿರುವುದಾಗಿ ಕಾಂಗ್ರೆಸ್‌ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದೆ.

ಇವಿಎಂಗಳು ತೋರುತ್ತಿರುವ ಫಲಿತಾಂಶ ವಾಸ್ತವಕ್ಕೆ ದೂರವಾದುದಾಗಿದೆ ಎಂದು ಕಾಂಗ್ರೆಸ್‌ ದೂರಿನಲ್ಲಿ ಪ್ರಸ್ತಾಪಿಸಿದೆ. ’ಫಲಿತಾಂಶ ಘೋಷಣೆಗೂ ಮುನ್ನ ತೆಲಂಗಾಣದ ಎಲ್ಲ ವಿಧಾನಸಭಾ ಕ್ಷೇತ್ರಗಳ ವಿವಿಪ್ಯಾಟ್‌ ಪೇಪರ್‌ಗಳ ಶೇ 100ರಷ್ಟು ಎಣಿಕೆ ಮಾಡಬೇಕೆಂದು ಕಾಂಗ್ರೆಸ್‌ ಪಕ್ಷ ಕೋರುತ್ತದೆ’ ಎಂದು ದೂರಿನಲ್ಲಿದೆ. 

ಇದನ್ನೂ ಓದಿ: ತೆಲಂಗಾಣದಲ್ಲಿ ಅಧಿಕಾರದ ಸನಿಹಕ್ಕೆ ಟಿಆರ್‌ಎಸ್: ನೀವು ತಿಳಿಯಬೇಕಾದ 10 ಅಂಶಗಳು

’ಉತ್ತಮ ರೀತಿಯಲ್ಲಿ ಫಲಿತಾಂಶ ಪ್ರಕಟಗೊಳ್ಳುವ ನಿಟ್ಟಿನಲ್ಲಿ ಕೂಡಲೇ ವಿವಿಪ್ಯಾಟ್‌ ಪೇಪರ್‌ಗಳ ಎಣಿಕೆಗೆ ಆದೇಶಿಸಬೇಕು. ಈ ಮೂಲಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕು’ ಎಂದು ಮುಖ್ಯ ಚುನಾವಣಾ ಅಧಿಕಾರಿ ರಜತ್‌ ಕುಮಾರ್‌ ಅವರಿಗೆ ಕಾಂಗ್ರೆಸ್ ಮನವಿ ಮಾಡಿದೆ. 

ಇವಿಎಂ ದುರ್ಬಳಕೆ ಕುರಿತು ಮಾತನಾಡಿರುವ ತೆಲಂಗಾಣ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಯ ಉತ್ತರ್‌ ಕುಮಾರ್ ರೆಡ್ಡಿ, ’ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳಿಗೆ ಕಾಂಗ್ರೆಸ್‌ ಮುಖಂಡರು ದೂರು ನೀಡಲಿದ್ದು, ಚುನಾವಣಾ ಆಯೋಗಕ್ಕೂ ಈ ವಿಚಾರವಾಗಿ ದೂರು ಸಲ್ಲಿಸುತ್ತೇವೆ. ಮತ ಎಣಿಕೆಗೂ ಮುನ್ನವೇ ಯಾರು ಸೋಲುತ್ತಾರೆ ಎಂಬುದನ್ನು ಟಿಆರ್‌ಎಸ್‌ ಮುಖಂಡರು ಹೇಳಲು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ: ತೆಲಂಗಾಣ ವಿಧಾನಸಭೆ: ಗೆಲುವಿನ ಸನಿಹದಲ್ಲಿ ಕೆಸಿಆರ್‌; ಬಹುಮತದತ್ತ ಟಿಆರ್‌ಎಸ್‌

ವಿರೋಧ ಪಕ್ಷಗಳ ಮೈತ್ರಿ ಪ್ರಜಾ ಕೂಟಮಿಯ ನೇತೃತ್ವ ವಹಿಸಿರುವ ಕಾಂಗ್ರೆಸ್‌ ಆರಂಭದಲ್ಲಿ ಟಿಆರ್‌ಎಸ್‌ಗೆ ಸಮೀಪದ ಪೈಪೋಟಿ ನೀಡಿತ್ತಾದರೂ ಮಧ್ಯಾಹ್ನದ ಹೊತ್ತಿಗೆ ಅಂತರ ಬೃಹತ್ತಾಗಿದೆ. ಕಾಂಗ್ರೆಸ್‌ 24ರಲ್ಲಿ ಮುನ್ನಡೆ ಸಾಧಿಸಿದ್ದರೆ, ಟಿಆರ್‌ಎಸ್‌ 4 ಕ್ಷೇತ್ರಗಳ ಗೆಲುವಿನೊಂದಿಗೆ 84 ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ಪ್ರತ್ಯೇಕ ರಾಜ್ಯ ಉದಯವಾದ ನಂತರ 2014ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 63 ಸ್ಥಾನಗಳನ್ನು ಪಡೆದಿದ್ದ ಟಿಆರ್‌ಎಸ್‌, ಈ ಬಾರಿ ತನ್ನ ವ್ಯಾಪ್ತಿ ಹಿರಿದು ಮಾಡಿಕೊಂಡಿದೆ.

ಇದನ್ನೂ ಓದಿ: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್: ತೆಲಂಗಾಣ, ಮಿಜೋರಾಂನಲ್ಲಿ ಸ್ಥಳೀಯ ಪಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು